ಸಮ್ಮಿಶ್ರ ಸರಕಾರ ಜನ ಹಿತ ಮರೆತು, ವರ್ಗಾವಣೆ ದಂಧೆಯಲ್ಲಿ ತೊಡಗಿದೆ: ಯಡಿಯೂರಪ್ಪ

Update: 2018-09-16 12:05 GMT

ತುಮಕೂರು,ಸೆ.16: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಮ್ಮಿಶ್ರ ಸರಕಾರ ಜನ ಹಿತ ಮರೆತು, ಕೇವಲ ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.

ಹಾಸನ ಜಿಲ್ಲೆಯ ಅರಸೀಕೆರೆಗೆ ತರಳುವ ಮಾರ್ಗಮಧ್ಯೆ ನಗರದ ಸಿದ್ದಗಂಗಾ ಮಠಕ್ಕೆ ಭೇಟಿ ನೀಡಿ ಡಾ.ಶ್ರೀಶಿವಕುಮಾರ ಸ್ವಾಮೀಜಿಗಳ ಆಶೀರ್ವಾದ ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ್ದ ಅವರು, ರಾಜ್ಯದಲ್ಲಿ ಅಸ್ಥಿತ್ವದಲ್ಲಿದ್ದ ಎಲ್ಲಾ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಸರ್ಕಾರ ರೈತರು ಹಾಗೂ ಜನರ ಹಿತವನ್ನು ಮರೆತಿದೆ ಎಂದು ದೂರಿದರು.

ರಾಷ್ಟ್ರೀಕೃತ ಬ್ಯಾಂಕುಗಳಲ್ಲಿರುವ ರೈತರ ಸಾಲ ಮನ್ನಾ ಮಾಡುತ್ತೇವೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೊಬ್ಬೆ ಹೊಡೆಯುತ್ತಿದ್ದಾರೆ. ಆದರೆ ರಾಷ್ಟ್ರೀಕೃತ ಬ್ಯಾಂಕುಗಳಿಂದ ರೈತರಿಗೆ ಸಾಲ ತಿರುವಳಿ ನೋಟಿಸ್ ಬರುವುದು ನಿಂತಿಲ್ಲ. ಮುಂದಿನ ನಾಲ್ಕು ವರ್ಷದಲ್ಲಿ, 4 ಕಂತುಗಳಲ್ಲಿ ಸಾಲ ತೀರಿಸುತ್ತೇವೆ ಎಂದರೆ ಯಾವ ಬ್ಯಾಂಕಿನವರು ಕಾಯಲು ಸಿದ್ದ ಎಂದು ಯಡಿಯೂರಪ್ಪ ಪ್ರಶ್ನಿಸಿದ ಅವರು, ಸಮ್ಮಿಶ್ರ ಸರಕಾರಕ್ಕೆ ರೈತರ ಹಿತ ಕಾಪಾಡುವ ಕಾಳಜಿ ಇದಿದ್ದರೆ ರಾಷ್ಟ್ರಿಕೃತ ಬ್ಯಾಂಕುಗಳ ಸಾಲ ಮನ್ನಾ ಮಾಡಲು ಇಷ್ಟು ದಿನ ಬೇಕಾಗಿರಲಿಲ್ಲ. ಸಹಕಾರಿ ಕ್ಷೇತ್ರದ ಬ್ಯಾಂಕುಗಳ ಸಾಲಮನ್ನಾ ಹಣ ತುಂಬದೇ ಇರುವ ಕಾರಣ ಅವರು ಸಹ ಹೊಸ ಸಾಲ ನೀಡಲಾಗದೆ ದಿವಾಳಿಯ ಅಂಚಿಗೆ ಬಂದಿವೆ. ಆದರೂ ಸುಳ್ಳು ಹೇಳಿಕೊಂಡು ದೊಂಬರಾಟ ನಡೆಸುತ್ತಿವೆ. ಕಾಂಗ್ರೆಸ್ ಪಕ್ಷದಲ್ಲಿನ ಅಂತರಿಕ ಗೊಂದಲಗಳನ್ನು ಸರಿಪಡಿಸಲು ಗಮನ ಹರಿಸುವ ಬದಲು ರಾಜ್ಯದ ಅಭಿವೃದ್ದಿಯ ಕಡಗೆ ಗಮನಹರಿಸಲಿ ಎಂದರು.

ರಾಜ್ಯಕ್ಕೆ ಸ್ಮಾರ್ಟ್‍ಸಿಟಿ ಯೋಜನೆಗಾಗಿ ಕೇಂದ್ರ ಸರಕಾರ 1500 ಕೋಟಿ ರು ಬಿಡುಗಡೆ ಮಾಡಿದೆ. ಆದರೆ ಈ ಯೋಜನೆಯಡಿ ಖರ್ಚು ಮಾಡಿರುವುದು ಕೇವಲ 40 ಕೋಟಿ ರೂ ಮಾತ್ರ. ಬದ್ದತೆ ಇಲ್ಲದ ರಾಜ್ಯ ಸರಕಾರದಿಂದ ನಾಡಿನ ಅಭಿವೃದ್ದಿ ಹೇಗೆ ಸಾಧ್ಯ ಎಂದ ಅವರು, ರಾಜ್ಯದ ಜನತೆ ಭಾರತೀಯ ಜನತಾ ಪಾರ್ಟಿಗೆ 104 ಸ್ಥಾನ ನೀಡುವ ಮೂಲಕ ಅಶೀರ್ವದಿಸಿದ್ದಾರೆ. ನಾವು ಪ್ರತಿಪಕ್ಷವಾಗಿಯೇ ಕೆಲಸ ಮಾಡುತ್ತೇವೆ. ಸಮ್ಮಿಶ್ರ ಸರಕಾರ ಬೀಳಿಸುವ ಯಾವುದೇ ರೀತಿಯ ಪ್ರಯತ್ನಕ್ಕೂ ಕೈ ಹಾಕುವುದಿಲ್ಲವೆಂದು ಬಿ.ಎಸ್.ಯಡಿಯೂರಪ್ಪ ಸ್ಪಷ್ಟ ಪಡಿಸಿದರು.

ಈ ಸಂದರ್ಭದಲ್ಲಿ ಮಾಜಿ ಸಂಸದ ಜಿ.ಎಸ್.ಬಸವರಾಜು, ಮುಖಂಡರಾದ ಮರಿಸ್ವಾಮಿ, ಪುತ್ರಿಯರಾದ ಉಮಾದೇವಿ, ಪದ್ಮಾವತಿ, ವಿಧಾನಪರಿಷತ್ ಮಾಜಿ ಸದಸ್ಯ ಡಾ.ಎಂ.ಆರ್.ಹುಲಿನಾಯ್ಕರ್, ಕೊಪ್ಪಲ್ ನಾಗರಾಜು, ಹೆಬ್ಬಾಕ ರವಿಶಂಕರ್, ರುದ್ರೇಶ್,ಪಾಲಿಕೆ ಸದಸ್ಯ ಹೆಚ್.ಎನ್.ಮಲ್ಲಿಕಾರ್ಜುನ್ ಜೊತೆಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News