ಚಿಕ್ಕಮಗಳೂರು: ಪೀಸ್ ಆ್ಯಂಡ್ ಅವೇರ್‍ನೆಸ್ ಟ್ರಸ್ಟ್ ವತಿಯಿಂದ ರಕ್ತದಾನ ಶಿಬಿರ

Update: 2018-09-16 12:27 GMT

ಚಿಕ್ಕಮಗಳೂರು, ಸೆ.16: ಜಿಲ್ಲೆಯ ಆಸ್ಪತ್ರೆಗಳಲ್ಲಿ ಸಾಕಷ್ಟು ರಕ್ತದ ಕೊರತೆ ಇದೆ. ರಕ್ತದಾನಿಗಳ ಕೊರತೆಯೇ ಇದಕ್ಕೆ ಮುಖ್ಯ ಕಾರಣ, ಸಕಾಲದಲ್ಲಿ ರಕ್ತ ಸಿಗದೇ ರೋಗಿಗಳು ಪರದಾಡುವ ಘಟನೆಗಳು ಸಂಭವಿಸುತ್ತಿವೆ. ರಕ್ತದಾನಕ್ಕೆ ಯುವಜನತೆ ಮುಂದಾಗುತ್ತಿದ್ದರೂ ಅವರ ಪೋಷಕರು ರಕ್ತದಾನ ಮಾಡಲು ಪ್ರೋತ್ಸಾಹ ನೀಡದೇ ನಿರ್ಲಕ್ಷ್ಯ ವಹಿಸುತ್ತಿರುವುದರಿಂದ ರಕ್ತದಾನ ಮಾಡಲು ಹಿಂದೆಮುಂದೆ ನೋಡುವ ಸ್ಥಿತಿ ನಿರ್ಮಾಣವಾಗಿದೆ. ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾ ಬೀಳುವುದಿಲ್ಲವಾದ್ದರಿಂದ ರಕ್ತದಾನಕ್ಕೆ ಪ್ರತಿಯೊಬ್ಬರೂ ಮುಂದಾಗುವ ಮೂಲಕ ಅಮೂಲ್ಯ ಜೀವಗಳ ರಕ್ಷಣೆಗೆ ಮುಂದಾಗಬೇಕೆಂದು ನಗರದ ಹೋಲಿಕ್ರಾಸ್ ಆಸ್ಪತ್ರೆಯ ರಕ್ತನಿಧಿ ಅಧಿಕಾರಿ ಡಾ.ಭಾಗ್ಯಲಕ್ಷ್ಮಮ್ಮ ಕರೆ ನೀಡಿದ್ದಾರೆ.

ನಗರದ ಯುನೈಟೆಡ್ ಆಂಗ್ಲಮಾಧ್ಯಮ ಶಾಲೆಯಲ್ಲಿ ಪೀಸ್ ಅಂಡ್ ಅವೇರ್‍ನೆಸ್ ಟ್ರಸ್ಟ್ ವತಿಯಿಂದ ರವಿವಾರ ಹಮ್ಮಿಕೊಳ್ಳಲಾದ 19ನೇ ರಕ್ತದಾನ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಕ್ತದಾನಕ್ಕೆ ಯಾವುದೇ ನಿರ್ಬಂಧಗಳಿಲ್ಲ. ಆರೋಗ್ಯವಂತರಾಗಿರುವ ಯಾರೇ ಆದರೂ ರಕ್ತದಾನ ಮಾಡಬಹುದು. ರಕ್ತದಾನದಿಂದ ಯಾವುದೇ ದುಷ್ಪರಿಣಾಮ ಉಂಟಾಗುವುದಿಲ್ಲ. ರಕ್ತದಾನ ಮಾಡುವುದರಿಂದ ದಾನಿಗಳ ಆರೋಗ್ಯ ಮತ್ತಷ್ಟು ವೃದ್ಧಿಗೊಳ್ಳುತ್ತದೆ. ಯುವಜನತೆ ರಕ್ತದಾನ ಮಾಡಲು ಮುಂದಾಗಬೇಕೆಂದರು. 

ಕಾರ್ಯಕ್ರಮದ ಆಯೋಜಕರು ಹಾಗೂ ಪೀಸ್ ಅಂಡ್ ಅವೇರ್‍ನೆಸ್ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಅಲ್ತಾಫ್ ಬಿಳಗುಳ ಮಾತನಾಡಿ, ರಕ್ತ ಬೇಕೆಂದು ತಮಗೆ ಪ್ರತಿದಿನ 8ರಿಂದ 10 ಕರೆಗಳು ಬರುತ್ತಿವೆ. ರಕ್ತದಾನಿಗಳ ಕೊರತೆಯಿಂದಾಗಿ ಈ ಕರೆಗಳ ಪೈಕಿ ಎಲ್ಲರ ಬೇಡಿಕೆಗೂ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ಟ್ರಸ್ಟ್ ವತಿಯಿಂದ ಆಗಾಗ್ಗೆ ರಕ್ತದಾನ ಶಿಬಿರಗಳನ್ನು ಆಯೋಜಿಸುತ್ತಿದ್ದು, ಇದುವರೆಗೂ 19 ಶಿಬಿರಗಳನ್ನು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದೇವೆ. ರಕ್ತಕ್ಕೆ ಬೇಡಿಕೆ ಬಂದಾಗ ಇಂತಹ ಶಿಬಿರಗಳಲ್ಲಿ ನೋಂದಾಯಿಸಿಕೊಂಡ ರಕ್ತದಾನಿಗಳನ್ನು ಸಂಪರ್ಕಿಸಿ ದಾನಿಗಳ ನೆರವಿನಿಂದ ರೋಗಿಗಳು, ಅಪಘಾತ ಸಂತ್ರಸ್ಥರಿಗೆ ಸಕಾಲದಲ್ಲಿ ರಕ್ತ ಪೂರೈಸಲು ನೆರವಾಗಿದ್ದೇವೆ ಎಂದರು.

ಜಿಲ್ಲೆಯ ಬ್ಲಡ್‍ಬ್ಯಾಂಕ್‍ನಲ್ಲಿ ರಕ್ತದ ಕೊರತೆ ಇದ್ದು, ರಕ್ತದ ಕೊರತೆಯಿಂದಾಗಿ ಜಿಲ್ಲೆಯಲ್ಲಿ ಯಾರೂ ಸಾವಿಗೀಡಾಗಬಾರದೆಂಬ ಉದ್ದೇಶದಿಂದ ರಕ್ತದಾನ ಶಿಬಿರ ಏರ್ಪಡಿಸಲಾಗಿದೆ. ಮುಂದಿನ ವರ್ಷದಿಂದ 25 ರಕ್ತದಾನ ಶಿಬಿರ ಹಮ್ಮಿಕೊಳ್ಳುವುದು ಮತ್ತು ರಕ್ತದಾನದ ಮಹತ್ವಗಳ ಬಗ್ಗೆ ಜನಜಾಗೃತಿ ಮೂಡಿಸುವ ಕಾರ್ಯಕ್ರಮ ಆಯೋಜಿಸಲು ಉದ್ದೇಶಿಸಲಾಗಿದೆ ಎಂದರು.

ಚಿಕ್ಕಮಗಳೂರು ವೃತ್ತ ನಿರೀಕ್ಷಕ ಸಲೀಂ ಅಬ್ಬಾಸ್ ಅವರು ರಕ್ತದಾನ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಶಬಿರದಲ್ಲಿ 40ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಯುನೈಟೆಡ್ ಶಾಲೆಯ ಅಧ್ಯಕ್ಷ ಸಲೀಂ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಬಿ.ಎಸ್.ಮುಹಮ್ಮದ್, ಟಿ.ಎಂ.ನಾಸೀರ್, ಇಂಫಾಲ್ ಗ್ರೋಪ್, ಸಿಸ್ಟರ್ ಜೋಬಿನಾ, ಸಾದಿಕ್ ಕಡಬಗೆರೆ, ಇಬ್ರಾಹೀಂ ಆಲ್ದೂರು, ಗೌಸ್‍ಮುನೀರ್, ಅಝೀಝ್ ಕರಾವಳಿ, ಮೊಹಿಯುದ್ದೀನ್ ಆಲ್ದೂರು, ಸುಹೈಲ್ ಚಿಕ್ಕಮಗಳೂರು, ಇಮ್ರಾನ್ ಮತ್ತಿತರರು ಉಪಸ್ಥಿತರಿದ್ದರು. ಟ್ರಸ್ಟ್ ಸದಸ್ಯ ಸಿನಾನ್ ನಿರೂಪಿಸಿ, ಇಮ್ರಾನ್ ಸ್ವಾಗತಿಸಿ, ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News