ಬಳ್ಳಾರಿ ‘ಕೈ’ ಶಾಸಕರು ನಮ್ಮ ಸಂಪರ್ಕದಲ್ಲೆ ಇದ್ದಾರೆ: ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್

Update: 2018-09-16 12:31 GMT

ಬೆಂಗಳೂರು, ಸೆ. 16: ‘ಬಳ್ಳಾರಿಯ ಶಾಸಕರೂ ನಮ್ಮ ಸಂಪರ್ಕದಲ್ಲೇ ಇದ್ದಾರೆ. ಈಗಾಗಲೇ ಅವರು ನಮ್ಮೊಂದಿಗೆ ಮಾತನಾಡಿ ಹೋಗಿದ್ದಾರೆ. ಪದೇ ಪದೇ ಅವರನ್ನು ನಾವು ಸಂಪರ್ಕ ಮಾಡಬೇಕೆಂದೇನೂ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ರವಿವಾರ ಇಲ್ಲಿನ ಕುಮಾರಕೃಷಾ ಅತಿಥಿ ಗೃಹದಲ್ಲಿ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ ಬಳಿಕ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ನಮ್ಮ ಶಾಸಕರಿಗೆ ಬಿಜೆಪಿಯವರು ಆಮಿಷ ಒಡ್ಡುತ್ತಿದ್ದು, ಇದರ ವಿರುದ್ಧ ಈಗಾಗಲೇ ಐಟಿಗೆ ದೂರು ನೀಡಿದ್ದೇವೆ ಎಂದರು.

ನಮ್ಮ ಪಕ್ಷದ ಎಲ್ಲ ಶಾಸಕರು ಒಟ್ಟಾಗಿದ್ದಾರೆ. ಅವರು ಎಲ್ಲೂ ಹೋಗಲ್ಲ. ಅವರ ಕ್ಷೇತ್ರದಲ್ಲಿ ಕೆಲಸ ಮಾಡ್ತಿದ್ದಾರೆ. ಬಳ್ಳಾರಿಯ ಕಾಂಗ್ರೆಸ್ ಶಾಸಕರು ನಮ್ಮ ಜೊತೆಯಲ್ಲೇ ಇದ್ದಾರೆ. ಕೆಪಿಸಿಸಿ ಕಚೇರಿಗೆ ಈಗಾಗಲೇ ಅವರು ಬಂದು ಹೋಗಿದ್ದಾರೆ. ಮತ್ತೆ ಅವರನ್ನು ನಾವು ಏಕೆ ಸಂಪರ್ಕ ಮಾಡಬೇಕು. ಅವರು ನಮಗೆ ಸಂಪರ್ಕ ಸಿಗುತ್ತಿಲ್ಲ ಅನ್ನೋದೆಲ್ಲ ಸುಳ್ಳು ಎಂದು ಹೇಳಿದರು.

ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಸಿದ್ದು, ಅನಾವಶ್ಯಕವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಹೆಸರನ್ನು ಉಲ್ಲೇಖಿಸಲಾಗುತ್ತಿದೆ. ಆದರೆ, ಅವರು ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡ್ತಿಲ್ಲ. ಅಪಪ್ರಚಾರವನ್ನು ಯಾರು ಒಪ್ಪುವಂತದ್ದಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಜಾರಕಿಹೊಳಿ ಸಹೋದರರ ಸಮಸ್ಯೆ ಬೆಳಗಾವಿ ಜಿಲ್ಲೆಗೆ ಸೀಮಿತ. ಅವರಿಗೆ ರಾಜ್ಯದಲ್ಲಿನ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸುವ ಯಾವುದೇ ಉದ್ದೇಶವಿಲ್ಲ ಎಂದ ದಿನೇಶ್ ಗುಂಡೂರಾವ್, ಮೈತ್ರಿ ಸರಕಾರ ಸ್ಥಿರವಾಗಿದೆ. ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರು.

ವಿಧಾನ ಪರಿಷತ್ ಉಪ ಚುನಾವಣೆಗೆ ಸಂಬಂಧಿಸಿದಂತೆ ಶೀಘ್ರದಲ್ಲೆ ಶಾಸಕಾಂಗ ಪಕ್ಷದ ಸಭೆ ಕರೆಯುತ್ತೇವೆ. ಈಶ್ವರಪ್ಪ, ಸೋಮಣ್ಣ ಹಾಗೂ ಡಾ.ಜಿ.ಪರಮೇಶ್ವರ್ ರಿಂದ ತೆರವಾಗಿರುವ ಸ್ಥಾನಗಳಿಗೆ ಸೂಕ್ತ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು ಎಂದು ಅವರು ತಿಳಿಸಿದರು.

ಮೈತ್ರಿ ಸರಕಾರ ಅಸ್ಥಿರಗೊಳಿಸಲು ಯಡಿಯೂರಪ್ಪನವರ ಒಂದು ಗುಂಪು ಮಾತ್ರ ಪ್ರಯತ್ನ ಪಡುತ್ತಿದೆ. ಆದರೆ, ಬಿಜೆಪಿಯ ಕೆಲವರಿಗೆ ಸರಕಾರ ಬೀಳಿಸುವುದು ಬೇಕಿಲ್ಲ. ಅವರ ಪಕ್ಷದವರು ಯಡಿಯೂರಪ್ಪ ವಿರುದ್ಧವೇ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸರಕಾರವನ್ನು ಹೇಗೆ ಅಸ್ಥಿರಗೊಳಿಸುತ್ತಾರೆಂದು ನಾವೂ ನೋಡ್ತೀವಿ ಎಂದು ಸವಾಲು ಹಾಕಿದರು.

ರಾಜ್ಯದಲ್ಲಿನ ಮೈತ್ರಿ ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿ ಹುನ್ನಾರ ನಡೆಸಿದೆ. ಆ ಮೂಲಕ ಬಿಜೆಪಿ ನೀತಿಗೆಟ್ಟ ರಾಜಕಾರಣ ಮಾಡುತ್ತಿದೆ. ಇದನ್ನು ಶೀಘ್ರದಲ್ಲೆ ನಾವು ಬಯಲಿಗೆ ಎಳೆಯುತ್ತೇವೆ. ಬಿಬಿಎಂಪಿ ಬೀಳಿಸಲು ಬಿಜೆಪಿ ವಿಫಲಯತ್ನ ನಡೆಸಿದೆ’

-ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News