ಪದೇ ಪದೇ ಕರೆಮಾಡಿ ಪಕ್ಷ ಸೇರಲು ಒತ್ತಾಯಿಸುತ್ತಿರುವ ಬಿಜೆಪಿ ಮುಖಂಡರು: ಶಾಸಕ ಅನಿಲ್ ಚಿಕ್ಕಮಾದು ಆರೋಪ

Update: 2018-09-16 15:15 GMT
ಶಾಸಕ ಅನಿಲ್ ಚಿಕ್ಕಮಾದು

ಮೈಸೂರು,ಸೆ.16: ಮೈತ್ರಿ ಸರ್ಕಾರ ಪತನಗೊಳಿಸಲು ಬಿಜೆಪಿ ಆಪರೇಷನ್ ಕಮಲಕ್ಕೆ ಮುಂದಾಗಿದ್ದು, ಪಕ್ಷ ಸೇರುವಂತೆ ನನಗೆ ಹಲವು ದಿನಗಳಿಂದ ಬಿಜೆಪಿ ನಾಯಕರು ಒತ್ತಡ ತರುತ್ತಿದ್ದಾರೆ ಎಂದು ಎಚ್.ಡಿ.ಕೋಟೆ ಕ್ಷೇತ್ರ ಕಾಂಗ್ರೆಸ್ ಶಾಸಕ ಅನಿಲ್ ಚಿಕ್ಕಮಾದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ 10 ದಿನಗಳಿಂದ ನನ್ನನ್ನು ಬಿಜೆಪಿ ಪಕ್ಷ ಸೇರುವಂತೆ ಆಹ್ವಾನಿಸುತ್ತಿದ್ದಾರೆ. ನಾನು ಯಾವುದೇ ಕಾರಣಕ್ಕೂ ಬಿಜೆಪಿ ಸೇರುವುದಿಲ್ಲ. ಚಿಕ್ಕವಯಸ್ಸಿನಲ್ಲೇ ನನ್ನನ್ನು ಶಾಸಕನಾಗಿ ಆಯ್ಕೆಯಾಗಲು ಅವಕಾಶ ಮಾಡಿರುವ ಪಕ್ಷಕ್ಕೆ ದ್ರೋಹ ಬಗೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ ಮತ್ತು ಜಿಲ್ಲೆಯ ಕೆಲವು ಬಿಜೆಪಿ ಮುಖಂಡರು ನನ್ನ ಮೇಲೆ ಒತ್ತಡ ತರುತ್ತಿದ್ದಾರೆ. ನಾನು ಬಿಜೆಪಿ ಸೇರುವುದಿಲ್ಲ ಎಂದರೂ ಪದೇ ಪದೇ ದೂರವಾಣಿ ಮೂಲಕ ಪಕ್ಷ ಸೇರುವಂತೆ ಆಹ್ವಾನಿಸುತ್ತಿದ್ದಾರೆ. ಸಿ.ಪಿ.ಯೋಗೇಶ್ವರ್ ಅವರು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಪಕ್ಷ ಸೇರಿ, ನಂತರ 'ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣ ಸಚಿವ ಸ್ಥಾನದೊಂದಿಗೆ ನೀವು ಕೇಳಿದಷ್ಟು ಹಣವನ್ನು ನೀಡುತ್ತೇವೆ. ಜೊತೆಗೆ ಉಪಚುನಾವಣೆಯ ಸಂಪೂರ್ಣ ಖರ್ಚನ್ನು ನಾವೇ ವಹಿಸಿಕೊಳ್ಳುವುದಾಗಿ ಹೇಳುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.

ಚಿಕ್ಕ ವಯಸ್ಸಿನಿಂದಲೂ ನಮ್ಮ ತಂದೆ ಚಿಕ್ಕಮಾದು ಅವರು ಜಾತ್ಯಾತೀತ ಜನತಾದಳ ಪಕ್ಷಕ್ಕೆ ನಿಷ್ಠೆ ಆಗಿದ್ದವರು. ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ನನಗೆ ಟಿಕೆಟ್ ಸಿಗದೇ ಸಂಕಷ್ಟದಲ್ಲಿದ್ದ ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಂಸದ ಧ್ರುವನಾರಾಯಣ ಸೇರಿ ಕಾಂಗ್ರೆಸ್‍ನ ಹಲವು ನಾಯಕರು ನನಗೆ ಟಿಕೆಟ್ ಕೊಡಿಸಿ ಗೆಲ್ಲಿಸಿದ್ದಾರೆ. ಹಾಗಾಗಿ ನನಗೆ ಜಾ.ದಳ ಹಾಗೂ ಕಾಂಗ್ರೆಸ್ ಪಕ್ಷ ಎರಡು ತಾಯಿ ಪಕ್ಷದಂತಿದ್ದು, ಪಕ್ಷ ಬಿಡುವ ಮಾತೇ ಇಲ್ಲ. ಈ ಬಗ್ಗೆ ಮಾದ್ಯಮಗಳಲ್ಲಿ ಬರುವ ನಾನು ಪಕ್ಷ ಬಿಡುತ್ತೇನೆ ಎಂಬ ವಂದಂತಿಗಳಲ್ಲೆವೂ ಶುದ್ಧ ಸುಳ್ಳು ಎಂದು ಸ್ಪಷ್ಟಪಡಿಸಿದರು.  

ಈ ಹಿಂದೆ ಸರ್ಕಾರ ರಚನೆ ವೇಳೆಯಲ್ಲೂ ಸಹ ಸಿ.ಪಿ.ಯೋಗೇಶ್ವರ್ ಕರೆ ಮಾಡಿದ್ದರು. ಆದಾದ ಸ್ವಲ್ಪ ದಿನ ಬಳಿಕ ನಿಂತಿದ್ದ ಕರೆ ಈಗ ಮತ್ತೆ ಆರಂಭಿಸಿದ್ದಾರೆ. ನನಗೆ ಮಾತ್ರವಲ್ಲದೆ ಪುಟ್ಟರಂಗಶೆಟ್ಟಿ ಸೇರಿದಂತೆ ಹಲವು ಕಾಂಗ್ರೆಸ್ ಶಾಸಕರಿಗೆ ಇದೇ ರೀತಿ ಆಮಿಷವೊಡ್ಡುತ್ತಿದ್ದಾರೆ. ಜತೆಗೆ ಇದರಲ್ಲಿ ಮೈಸೂರಿನ ಪ್ರಮುಖ ಬಿಜೆಪಿ ನಾಯಕರು ಇದ್ದು, ಈ ಬಗ್ಗೆ ಸೂಕ್ತ ಸಮಯದಲ್ಲಿ ತಿಳಿಸುತ್ತೇನೆ. ಬಿಜೆಪಿ ಸೇರ್ಪಡೆ ಕುರಿತು ಯಾವುದೇ ಸ್ವಾಮೀಜಿಗಳು ಅಥವಾ ಶ್ರೀರಾಮುಲು ಅವರು ನನ್ನನ್ನು ಸಂಪರ್ಕಿಸಿಲ್ಲ ಎಂದರು.  

ಸಂಸದ ಆರ್.ಧ್ರುವನಾರಾಯಣ, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಭೋವಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಜಿ.ವಿ. ಸೀತಾರಾಂ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್, ಮುಖಂಡರಾದ ಕೋಟೆಹುಂಡಿ ಮಹದೇವು, ಪ್ರಕಾಶ್‍ಕುಮಾರ್ ಪತ್ರಿಕಾಗೋಷ್ಠಿಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News