ಸಂವಿಧಾನದ ಕಗ್ಗೊಲೆ ಮಾಡಲು ಹೊರಟ ಬಿಜೆಪಿ: ಸಂಸದ ಧ್ರುವನಾರಾಯಣ ವಾಗ್ದಾಳಿ

Update: 2018-09-16 15:14 GMT

ಮೈಸೂರು,ಸೆ.16: ಸಂವಿಧಾನ ಬದ್ದವಾಗಿ ಒಂದು ಪಕ್ಷದ ಚಿಹ್ನೆಯಿಂದ ಆಯ್ಕೆಯಾಗಿರುವ ಶಾಸಕರನ್ನು ಹೈಜಾಕ್ ಮಾಡಲು ಹೊರಟಿರುವ ಬಿಜೆಪಿಯವರು ಸಂವಿಧಾನದ ಕಗ್ಗೊಲೆ ಮಾಡಲು ಹೊರಟಿದ್ದಾರೆ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದ ಆರ್.ಧ್ರುವನಾರಾಯಣ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸಮ್ಮಿಶ್ರ ಸರಕಾರ ರಚನೆ ಮಾಡುವ ಸಂದರ್ಭದಿಂದಲೂ ಶಾಸಕರನ್ನು ಖರೀದಿ ಮಾಡಲು ಯತ್ನಿಸುತ್ತಿದ್ದಾರೆ. ಈ ಹಿಂದೆ ಗಣಿಧಣಿ ಜನಾರ್ಧನ ರೆಡ್ಡಿಗಳ ಮೂಲಕ ಬಿ.ಎಸ್.ಯಡಿಯೂರಪ್ಪ ಅವರು ಆಪರೇಷನ್ ಕಮಲ ನಡೆಸಿ ಕಾಂಗ್ರೆಸ್ ನ ಹಲವರನ್ನು ರಾಜೀನಾಮೆ ಕೊಡಿಸಿದ್ದರು. ಆದರೆ, ಈಗಲೂ ಅಂದು ರಾಜೀನಾಮೆ ಕೊಟ್ಟ ಮುಖಂಡರ ಸ್ಥಿತಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಈಗ ಆದೇ ನಡೆಯಲ್ಲಿ ಬಿಜೆಪಿ ಸಾಗುವ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಲು ಹೊರಟಿದೆ. ಇಂತಹ ದಾರಿಯಲ್ಲಿ ಸಾಗುವ ಬಿಜೆಪಿ ಪಕ್ಷಕ್ಕೆ ನಾಚಿಕೆಯಾಗಬೇಕು, ಎಲ್ಲವನ್ನೂ ನೋಡುತ್ತಿರುವ ಜನ ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಎಚ್.ಡಿ.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಒಬ್ಬರನ್ನೇ ಇವರು ಬಿಜೆಪಿ ನಾಯಕರು ಪಕ್ಷಕ್ಕೆ ಸೆಳೆಯಲು ಯತ್ನಿಸಿಲ್ಲ, ಈಗಾಗಲೇ ನನ್ನ ಲೋಕಸಭಾ ಕ್ಷೇತ್ರದ ವ್ಯಾಪ್ತಿಗೆ ಬರುವ ಸಚಿವ ಪುಟ್ಟರಂಗಶೆಟ್ಟಿ, ಹನೂರು ಶಾಸಕ ನರೇಂದ್ರ ಅವರನ್ನು ಸಂಪರ್ಕಿಸಿ ಪಕ್ಷಕ್ಕೆ ಆಹ್ವಾನಿಸಿದ್ದಾರೆ. ಜೊತೆಗೆ ಹಣ ಮತ್ತು ಅಧಿಕಾರದ ಆಮಿಷವನ್ನು ತೋರಿಸುತಿದ್ದಾರೆ. ಆದರೆ ನಾವೆಲ್ಲರೂ ಒಗ್ಗಟ್ಟಿನಿಂದ ಇದ್ದು ನಮ್ಮ ಪಕ್ಷದ ಯಾವೊಬ್ಬ ಶಾಸಕರು ಬಿಜೆಪಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ 5 ವರ್ಷ ಸಂಪೂರ್ಣ ಅಧಿಕಾರ ನಡೆಸಲಿದೆ. ಯಾವುದೇ ಕಾರಣಕ್ಕೂ ಸರಕಾರವನ್ನು ಅಲುಗಾಡಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News