ಮೈತ್ರಿ ಸರಕಾರ ನೀರಿನ ಮೇಲೆ ಗುಳ್ಳೆ ಇದ್ದಂತೆ: ಮಾಜಿ ಸಿಎಂ ಜಗದೀಶ್ ಶೆಟ್ಟರ್

Update: 2018-09-16 15:25 GMT

ಹುಬ್ಬಳ್ಳಿ, ಸೆ. 16: ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರವು ನೀರಿನ ಮೇಲೆ ಗುಳ್ಳೆ ಇದ್ದಂತೆ. ಅದು ಯಾವಾಗ ಬೇಕಾದರೂ ಒಡೆದು ಹೋಗಬಹುದು ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರ ಜನಾದೇಶಕ್ಕೆ ವಿರುದ್ಧವಾಗಿ ಅಸ್ತಿತ್ವಕ್ಕೆ ಬಂದಿದೆ. ಅಧಿಕಾರಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚನೆಯಾಗಿದೆ. ಹೀಗಾಗಿ ಶಾಸಕರು- ಸಚಿವರು ಆಂತರಿಕ ಜಗಳ ಆಡುತ್ತಿದ್ದಾರೆ ಎಂದು ಹೇಳಿದರು.

ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಂಡು ಕಾಂಗ್ರೆಸ್ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುತ್ತಿದೆ. ಹೀಗಾಗಿ ಇವರ ಮೈತ್ರಿ ಸರಕಾರವು ನೀರಿನ ಮೇಲೆ ಗುಳ್ಳೆ ಇದ್ದಂತೆ ಇದೆ. ಯಾವುದೇ ಸಂದರ್ಭದಲ್ಲಿ ಬೇಕಾದರೂ ಪತನವಾಗಬಹುದು ಎಂದು ನುಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿಯವರಿಗೆ ಲಾಟರಿ ದಂಧೆ ಕಿಂಗ್‌ಪಿನ್‌ಗಳ ಬಗ್ಗೆ ಮಾಹಿತಿ, ಸೂಕ್ತ ಸಾಕ್ಷಾಧಾರಗಳಿದ್ದರೆ ಕಾನೂನು ಕ್ರಮ ಕೈಗೊಳ್ಳಬೇಕು. ಅದು ಬಿಟ್ಟು ಮಾಧ್ಯಮಗಳ ಮೂಲಕ ಹೇಳಿಕೆ ನೀಡುವುದು ಸರಿಯಲ್ಲ. ಅವರು ಬಹಳ ಹಿಂದಿನಿಂದಲೂ ಇದೇ ರೀತಿ ಮಾಡಿಕೊಂಡು ಬರುತ್ತಿದ್ದಾರೆಂದು ಟೀಕಿಸಿದರು.

ಬಿಜೆಪಿ ಯಾವುದೇ ಆಪರೇಷನ್ ಕಮಲಕ್ಕೆ ಕೈ ಹಾಕಿಲ್ಲ. ನಿಮಗೆ ತಾಕತ್ತಿದ್ದರೆ ನಿಮ್ಮ ಶಾಸಕರನ್ನು ಹತೋಟಿಯಲ್ಲಿ ಇಟ್ಟುಕೊಳ್ಳಿ. ಅದು ಬಿಟ್ಟು ಬಿಜೆಪಿಯವರ ಮೇಲೆ ಸುಖಾಸುಮ್ಮನೆ ಆರೋಪ ಮಾಡುವುದು ಸರಿಯಲ್ಲ. ಮೈತ್ರಿ ಸರಕಾರ ಉರುಳಿಬಿದ್ದರೆ ಸಹಜವಾಗಿಯೇ ಬಿಜೆಪಿ ಅದರ ಸದ್ಬಳಕೆ ಮಾಡಿಕೊಳ್ಳಲಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News