ಕಲಬುರ್ಗಿ: ಯುವಕನ ರುಂಡ ಕತ್ತರಿಸಿದ ಆರೋಪಿಗೆ ಗುಂಡು ಹಾರಿಸಿ ಬಂಧನ
ಕಲಬುರ್ಗಿ, ಸೆ. 16: ಯುವಕನ ರುಂಡ ಕತ್ತರಿಸಿ ತಲೆಮರೆಸಿಕೊಂಡಿದ್ದವನ ಬಂಧನಕ್ಕೆ ತೆರಳಿದ್ದ ಪೊಲೀಸರ ಮೇಲೆಯೇ ದಾಳಿಗೆ ಮುಂದಾದ ಆರೋಪಿಯ ಮೇಲೆ ಗುಂಡು ಹಾರಿಸಿ ಪೊಲೀಸರು ಬಂಧಿಸಿರುವ ಇಲ್ಲಿನ ಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪೊಲೀಸರು ಹಾರಿಸಿದ ಗುಂಡೇಟಿನಿಂದ ಗಂಭೀರವಾಗಿ ಗಾಯಗೊಂಡಿರುವ ಆರೋಪಿಯನ್ನು ನಾಗರಾಜ್ ಯಾನೆ ನಾಗಾ (24) ಎಂದು ಗುರುತಿಸಲಾಗಿದೆ. ಆರೋಪಿಯ ಹಲ್ಲೆಯಿಂದ ಚೌಕ್ ಠಾಣಾ ಪಿಎಸ್ಸೈ ಹೀರೆಮಠ್ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.
ಹಣಕಾಸಿನ ವಿಷಯ ಸಂಬಂಧ ಸೆ.11ಕ್ಕೆ ಸಿದ್ದೋಜಿ ಎಂಬಾತನನ್ನು ಅಪಹರಿಸಿ ಅಲಗೋಡ್ ಗ್ರಾಮದ ಬಳಿ ರುಂಡ ಕತ್ತರಿಸಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಸಂಬಂಧ ತಲೆ ಮರೆಸಿಕೊಂಡಿದ್ದ ಆರೋಪಿಯ ಬಂಧನಕ್ಕೆ ರವಿವಾರ ಬೆಳಗ್ಗೆ ಪಿಎಸ್ಸೈ ಹೀರೇಮಠ್ ನೇತೃತ್ವದ ತಂಡ ಕಲಬುರ್ಗಿ ಸಮೀಪದ ಗ್ರಾಮಕ್ಕೆ ತೆರಳಿದ್ದರು.
ಈ ವೇಳೆ ಆರೋಪಿ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾಗಿದ್ದಾನೆ ಎಂದು ಹೇಳಲಾಗಿದೆ. ಆಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿಯ ಕಾಲಿಗೆ ಗುಂಡು ಹಾರಿಸಿದ್ದು, ಬಂಧಿಸಿದ್ದಾರೆಂದು ತಿಳಿಸಲಾಗಿದೆ. ಗಾಯಾಳುಗಳನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಸಂಬಂಧ ಮೊಕದ್ದವೆು ದಾಖಲಿಸಿಕೊಳ್ಳಲಾಗಿದೆ.