ಸೆ.23 ರಿಂದ ಅ.2ರವರೆಗೆ ರಾಷ್ಟ್ರಮಟ್ಟದಲ್ಲಿ ರೈತಕ್ರಾಂತಿ ಯಾತ್ರೆ

Update: 2018-09-16 16:58 GMT

ಮೈಸೂರು,ಸೆ.16: ರಾಷ್ಟ್ರಿಕೃತ ಬ್ಯಾಂಕ್‍ಗಳ ಸಾಲ ಮನ್ನಾ, ಉದ್ಯೋಗ, ಶಿಕ್ಷಣ ಖಾತರಿ ಯೋಜನೆ ಜಾರಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟು ಸೆ.23 ರಿಂದ ಅಕ್ಟೋಬರ್ 2ರವರೆಗೆ ರಾಷ್ಟ್ರಮಟ್ಟದಲ್ಲಿ ರೈತಕ್ರಾಂತಿ ಯಾತ್ರೆ ನಡೆಸಲು ನಿರ್ಧರಿಸಿದ್ದೇವೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗಂಗಾಧರ್ ತಿಳಿಸಿದರು.  

ನಗರದ ಪತ್ರಕರ್ತರ ಭವನದಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಮಿನಿಮಮ್ ಸಪೋಟ್ ಪ್ರೈಸ್, ಸಿಟುಸಿ ಸೂತ್ರ, ಪ್ರಧಾನ ಮಂತ್ರಿಯ ಆಶಾತ ಸೂತ್ರಗಳಲ್ಲಿನ ವೈಜ್ಞಾನಿಕ ನೀತಿ ರೂಪಿಸುವುದಾಗಿ ತಿಳಿಸಿ ನಾಲ್ಕು ವರ್ಷ ಕಳೆದರೂ ಘೋಷಿಸಲು ಹಿಂದೇಟು ಹಾಕಿದೆ. ಇನ್ನು ರೈತ ಬೆಳೆದ ಬೆಳೆಗಳಿಗೆ ನಿರ್ದಿಷ್ಟ ಬೆಲೆ ಗುರುತಿಸುವ ಅನೂಸ್ ಖರೀದಿ ಖಾತ್ರಿಗೊಳಿಸುವ ಕಾನೂನು ಜಾರಿಗೊಳಿಸಬೇಕಿದೆ. ಜತೆಗೆ ಪ್ರಮುಖವಾಗಿ ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿನ ಸಾಲ ಮನ್ನಾ ಮಾಡುವಂತೆ ಆಗ್ರಹಿಸಿ ಸೆ.23 ರಿಂದ ಅಕ್ಟೋಬರ್ 2ರವರೆಗೆ ಹರಿದ್ವಾರದಿಂದ ನವದೆಹಲಿಯ ಕಿಸಾನಘಾಟ್‍ವರೆಗೂ ರೈತ ಕ್ರಾಂತಿಯಾತ್ರೆ ನಡೆಸಲು ವಿವಿಧ ರೈತ ಸಂಘಟನೆಗಳು ನಿರ್ಧರಿಸಿವೆ ಎಂದರು. 

ರಾಜ್ಯ ರೈತ ಸಂಘ, ಹರಿಯಾಣ, ಕೇರಳ, ತಮಿಳುನಾಡು, ಆಂಧ್ರಪ್ರದೇಶದ ರೈತರ ಸಂಘಟನೆಗಳೆಲ್ಲವೂ ಒಳಗೊಂಡಂತೆ ಬೃಹತ್ ಪ್ರಮಾಣದಲ್ಲಿ ರೈತಕ್ರಾಂತಿಯನ್ನು ನಡೆಸಲಿದೆ. ಸರ್ಕಾರಗಳ ತಪ್ಪು ನೀತಿಯಿಂದಾಗಿ ರೈತರು ಸಾಲಕ್ಕೆ ಸಿಲುಕಬೇಕಿದೆ ವಿನಃ ರೈತರು ಯಾವುದೇ ಕಾರಣಕ್ಕೂ ಸಾಲಗಾರರಾಗುವುದಿಲ್ಲ. ಈಗ ಜಾರಿಗೊಳಿಸಿರುವ ಬೆಳೆವಿಮೆ ಪದ್ಧತಿಯ ಖಾಸಗಿಗೆ ನೀಡಿರುವುದರಿಂದ ವಿಳಂಬ ಆಗುತ್ತಿದ್ದು, ಈ ಬಗ್ಗೆ ಸರ್ಕಾರದಿಂದಲೇ ಒಂದು ಏಜೆನ್ಸಿ ಮೂಲಕ ಮಾಡಿಸಬೇಕಿದೆ ಎಂದು ತಿಳಿಸಿದರು.  

ಕಟ್ಟಪ್ಪಣೆ ಮಾಡಿ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ರೈತರಿಗೆ ನೋಟಿಸ್ ನೀಡದಂತೆ ರಾಷ್ಟ್ರೀಕೃತ ಬ್ಯಾಂಕ್‍ಗಳಿಗೆ ಕಟ್ಟಪ್ಪಣೆ ಮಾಡಬೇಕಿದೆ. ಮಂಡ್ಯದಲ್ಲಿಯೇ ಕಳೆದ ಮೂರು ದಿನಗಳಿಂದ ಮೂವರು ರೈತರು ನೋಟಿಸ್ ನೀಡಿದ ಬಳಿಕ ಸಾವನ್ನಪ್ಪಿದ್ದು, ಈ ಕುರಿತು ಎಲ್ಲಾ ಬ್ಯಾಂಕ್‍ಗಳಿಗೂ ನೋಟಿಸ್ ನೀಡದಂತೆ ಖಡಕ್ ಆದೇಶ ಹೊರಡಿಸಬೇಕಿದೆ. ಆ ಮೂಲಕ ತಮ್ಮದು ಗಾಳಿ ಮಾತಲ್ಲ ಎಂಬುದನ್ನು ಅಧಿಕಾರಿಗಳಿಗೆ ಆದೇಶಿಸುವ ಮೂಲಕ ತೋರಿಸಿಕೊಡಬೆಕಿದೆ ಎಂದರು.  

ಪ್ರಕೃತಿ ವಿಕೋಪ ಶಾಶ್ವತ ನಿಧಿ ಸ್ಥಾಪಿಸಿ: ಚಾಮರಸ ಪಾಟೀಲ ಅವರು ಮಾತನಾಡಿ, ಬರಗಾಲ ಹಾಗೂ ಪ್ರವಾಹ ಇಂದಿನ ದಿನಗಳಲ್ಲಿ ಜನರನ್ನು ಕಾಡುತ್ತಿರುವ ಸಮಸ್ಯೆ ಆಗಿದೆ. ಹಾಗಾಗಿ ಈ ಸಂಬಂಧ ನೈಸರ್ಗಿಕ ವಿಕೋಪ ಸಂತ್ರಸ್ತರ ನೆರವಿಗೆ ಶೀಘ್ರವಾಗಿ ಸ್ಪಂದಿಸಲು ಶಾಶ್ವತ ಪರಿಹಾರ ನಿಧಿಯನ್ನು ರಾಷ್ಟ್ರಮಟ್ಟದಲ್ಲಿ ತೆರೆಯಬೇಕಿದೆ ಎಂದು ಹೇಳಿದರು. 

ರಾಯಾಚೂರು ಭಾಗದಲ್ಲಿ ಹಿಂದೆಂದೂ ಕಂಡರಿಯದ ಬರಗಾಲ ಉಂಟಾಗಿದೆ. ರಾಜ್ಯ ಸರ್ಕಾರ ಘೋಷಿಸಿರುವ 86 ತಾಲೂಕು ಮಾತ್ರವಲ್ಲದೆ ಅದರಾಚೆಗಿನ ತಾಲೂಕುಗಳಲ್ಲೂ ಬರಗಾಲವಿದೆ. ಹಾಗಾಗಿ ಅಲ್ಲೆಲ್ಲ ಕುಡಿಯುವ ನೀರು, ದನಕರುಗಳಿಗೆ ಮೇವು, ಕೃಷಿಕರಿಗೆ ನೌಕರಿ ಕೊಡಿಸುವ ಕೆಲಸವನ್ನು ಸರ್ಕಾರ ತೀವ್ರಗತಿಯಲ್ಲಿ ಮಾಡಬೇಕಿದೆ. ಪ್ರಧಾನಮಂತ್ರಿಗಳ ಉದ್ಯೋಗ ಖಾತರಿ ಯೋಜನೆ ಬೋಗಸ್ ಬಿಲ್‍ಗೆ ಮಾತ್ರ ಸೀಮಿತವಾಗಿದ್ದು, ನಮ್ಮ ಕಷ್ಟಗಳಿಗೆ ಯಾವೊಬ್ಬ ಜನಪ್ರತಿನಿಧಿಯೂ ಸ್ಪಂದಿಸುತ್ತಿಲ್ಲವೆಂದು ಆರೋಪಿಸಿದರು.  

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಉಪಾಧ್ಯಕ್ಷರಾದ ಜಿ.ಪಿ.ರಾಮಸ್ವಾಮಿ, ಮಂಜುನಾಥ್ ಮುಡಿಗೇರಿ, ಕಾರ್ಯಾಧ್ಯಕ್ಷ ಶಾಂತಸ್ವಾಮಿ ಮಠ, ಕಾರ್ಯಕಾರಿ ಸಮಿತಿ ಸದಸ್ಯರಾದ ಎಂ.ಎಸ್.ಅಶ್ವಥ್‍ನಾರಾಯಣ, ಲೋಕೇಶ್‍ರಾಜ ಅರಸ್, ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಮೊಟೂರು ಶಿವಪ್ಪ ಇನ್ನಿತರರು ಪ್ರತಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು. 

ಡೊಂಬರಾಟ ನಿಲ್ಲಿಸಿ
ರಾಜ್ಯದ ಅಭಿವೃದ್ಧಿಯಲ್ಲಿ ಆಡಳಿತ ಹಾಗೂ ವಿರೋಧ ಪಕ್ಷಗಳ ಪಾತ್ರ ಪ್ರಮುಖವಾಗಿವೆ. ಆದರೆ ಇತ್ತೀಚಿನ ರಾಜಕೀಯ ಬೆಳವಣಿಗೆಯಲ್ಲಿ ನಡೆಯುತ್ತಿರುವ ದೊಂಬರಾಟವನ್ನು ಆಡಳಿತ ಹಾಗೂ ವಿರೋಧ ಪಕ್ಷಗಳೆರಡು ನಿಲ್ಲಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ಬೀದಿಗಳಲ್ಲೇ ಜನರು ನಿಮ್ಮ ನಾಟಕಕ್ಕೆ ಉತ್ತರ ನೀಡಲಿದ್ದು, ರೈತರು ಸಹ ಹೋರಾಟ ನಡೆಸಬೇಕಾಗುತ್ತದೆ.  
- ಬಡಗಲಪುರ ನಾಗೇಂದ್ರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News