ರಾಜ್ಯ ಸರಕಾರದ ನಾಡಹಬ್ಬ ದಸರಾಕ್ಕೂ ಅರಮನೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೂ ಸಂಬಂಧವಿಲ್ಲ: ಪ್ರಮೋದಾದೇವಿ ಒಡೆಯರ್

Update: 2018-09-16 17:03 GMT

ಮೈಸೂರು,ಸೆ.16: ರಾಜ್ಯ ಸರಕಾರ ಮಾಡುತ್ತಿರುವ ನಾಡಹಬ್ಬ ದಸರಾ ಹಾಗೂ ಅರಮನೆಯಲ್ಲಿ ನಡೆಯುವ ನವರಾತ್ರಿ ಉತ್ಸವಕ್ಕೂ ಯಾವುದೇ ಸಂಬಂಧವಿಲ್ಲ ಎಂದು ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ತಿಳಿಸಿದರು.

ಮೈಸೂರಿನ ಜಗನ್ಮೋಹನ ಅರಮನೆಯ ಜಯಚಾಮರಾಜೇಂದ್ರ ಆರ್ಟ್‍ಗ್ಯಾಲರಿಯಲ್ಲಿ ರವಿವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಡಹಬ್ಬ ಹಾಗೂ ದಸರಾಕ್ಕೂ ಸಂಬಂದವಿಲ್ಲ. 1982ರಿಂದ ಈಚೆಗೆ ರಾಜ್ಯ ಸರ್ಕಾರ ನಾಡಹಬ್ಬ ಮಾಡುತ್ತಿದೆ. ಆದರೆ ಅರಮನೆಯಲ್ಲಿ ನಡೆಯುವ ಸಾಂಪ್ರದಾಯಿಕ ದಸರಾಗೆ ಪರಂಪರೆಯಿದೆ. ರಾಜ್ಯ ಸರ್ಕಾರ ಸಾಂಪ್ರದಾಯಿಕ ದಸರಾವೆಂದು ಹೇಗೆ ಕರೆಯುತ್ತಿದೆ ಎಂದು ಪ್ರಶ್ನಿಸಿದರು.

ದಸರಾ ಸಂದರ್ಭದಲ್ಲಿ ರಾಜ್ಯ ಸರಕಾರದಿಂದ ಅರಮನೆಗೆ ನೀಡುವ ಗೌರವಧನ, ಖಾಸಗಿ ವಿಷಯಕ್ಕೆ ಸಂಬಂಧಪಟ್ಟ ವಿಚಾರವಾಗಿದ್ದು, ಗೌರವಧನ ಪಡೆಯುತ್ತಿದ್ದಾರೆ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ ವ್ಯಕ್ತಿಗೆ ಕೋರ್ಟ್ ಉತ್ತರ ಕೊಟ್ಟಿದೆ. ಅದಕ್ಕೆಲ್ಲ ನಾನು ಉತ್ತರ ಕೊಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಅಂಬಾರಿ ಖಾಸಗಿ ಸೊತ್ತು. ಅದನ್ನು ಪ್ರಶ್ನಿಸುವ ಅಧಿಕಾರ ಅವರಿಗಿಲ್ಲ. ಅಂಬಾರಿಯನ್ನು ಜೇಬಿನಲ್ಲಿ ಹಾಕಿಕೊಂಡು ತಿರುಗಲು ಸಾಧ್ಯವೇ ಎಂದು ಕೇಳಿದರು.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಾನು ಸ್ಪರ್ಧೆ ಮಾಡುವುದಿಲ್ಲ, ಯದುವೀರ್ ಸ್ಪರ್ಧೆ ಮಾಡುವ ವಿಚಾರ ಅವರ ವೈಯಕ್ತಿಕ. ಎಲ್ಲ ರಾಜಕೀಯ ಪಕ್ಷಗಳು ನಮ್ಮನ್ನು ಭೇಟಿ ಮಾಡಿವೆ. ಆದರೆ ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವುದು ಬೇಡ ಎಂದರು. ನವರಾತ್ರಿ ಉದ್ಘಾಟನೆ ವೇಳೆಯೊಳಗೆ ಜಯಚಾಮರಾಜೇಂದ್ರ ಆರ್ಟ್‍ಗ್ಯಾಲರಿ ರೀಓಪನ್ ಮಾಡಲಾಗುವುದು. ದಸರಾ ವೇಳೆಗೆ ಆಂಧ್ರಪ್ರದೇಶದ ಸ್ವಾಮೀಜಿಯೊಬ್ಬರು ಒಂದು ಲಕ್ಷ ಗೊಂಬೆ ಪ್ರದರ್ಶನ ಮಾಡಲಿದ್ದಾರೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News