×
Ad

ಕುಮಾರಸ್ವಾಮಿ ಅತ್ಯಂತ ದುರ್ಬಲ ಸಿಎಂ: ಕೆ.ಎಸ್.ಈಶ್ವರಪ್ಪ ವಾಗ್ದಾಳಿ

Update: 2018-09-16 22:48 IST

ಶಿವಮೊಗ್ಗ, ಸೆ. 16: ಹೆಚ್.ಡಿ.ಕುಮಾರಸ್ವಾಮಿಯವರು ಈ ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿಗಳಲ್ಲಿ ಓರ್ವರಾಗಿದ್ದಾರೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದ್ದಾರೆ. 

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಸ್ವಚ್ಚತಾ ಅಭಿಯಾನ ಬೆಂಬಲಿಸಿ ಶನಿವಾರ ನಗರದ ಗಾಂಧಿ ನಗರ ಪಾರ್ಕ್‍ನಲ್ಲಿ ಬಿಜೆಪಿ ಪಕ್ಷ ಹಮ್ಮಿಕೊಂಡಿದ್ದ ಸ್ವಚ್ಚತಾ ಕಾರ್ಯಕ್ರಮಕ್ಕೆ ಕಸ ಗುಡಿಸುವ ಮೂಲಕ ಚಾಲನೆ ನೀಡಿದರು. ನಂತರ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 

ಅಧಿಕಾರಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್‍ನವರು ದಿನಕ್ಕೊಂದು ಆಟವಾಡುತ್ತಿರುವುದನ್ನು ನೋಡಿದರೆ ನಮಗೂ ನಾಚಿಕೆಯಾಗುತ್ತದೆ. ಮೈತ್ರಿ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ. ಅವರ ನಡುವಿನ ಕಚ್ಚಾಟದಿಂದಲೇ ಸರ್ಕಾರ ಪತನವಾಗಲಿದೆ. ಕುಮಾರಸ್ವಾಮಿ ಎಲ್ಲಿಯವರೆಗೂ ಸಿಎಂ ಆಗಿರುತ್ತಾರೋ ಆಗಿರಲಿ. ಬಿಜೆಪಿ ಸರ್ಕಾರ ಬೀಳಿಸುವ ಕೆಲಸ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ. 

ಸಿಎಂ, ಡಿಸಿಎಂ ಹಾಗೂ ಸಚಿವರುಗಳು ಅವರ ಅಧಿಕಾರದ ಜವಾಬ್ದಾರಿ ಅರಿತುಕೊಂಡು ಕಾರ್ಯನಿರ್ವಹಿಸಬೇಕು. ಆದರೆ ಇವರೆಲ್ಲರು ತಮ್ಮ ಸ್ಥಾನ ಉಳಿಸಿಕೊಳ್ಳುವಲ್ಲಿಯೇ ಭದ್ರವಾಗಿದ್ದಾರೆ. ರಾಜ್ಯದ ಅಭಿವೃದ್ದಿಯ ಬಗ್ಗೆ ಯಾವುದೇ ಕಾಳಜಿ, ಇಚ್ಚಾಶಕ್ತಿಯಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಕಿಂಗ್‍ಪಿನ್‍ಗಳಿಲ್ಲ: ಕಾಂಗ್ರೆಸ್‍ನವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಹೇಳುವಂತ ಧೈರ್ಯ ಕುಮಾರಸ್ವಾಮಿಯವರಿಗೆ ಇಲ್ಲದಾಗಿದೆ. ಬಿಜೆಪಿ ಜೆಡಿಎಸ್ ಸರ್ಕಾರ ಇದ್ದ ಸಮಯದಲ್ಲಿ ಕುಮಾರಸ್ವಾಮಿಗೆ ಒಂದು ದಿನವು ಕಾಟ ಕೊಡಲಿಲ್ಲ. ಕಾಂಗ್ರೆಸ್‍ನವರು ನಿತ್ಯ ಕಾಟ ಕೊಡುತ್ತಿದ್ದಾರೆ ಎಂಬ ಮಾತನ್ನು ಜೆಡಿಎಸ್‍ನವರೇ ಹೇಳುತ್ತಿದ್ದಾರೆ. ಕುಮಾರಸ್ವಾಮಿ ಇರುವಷ್ಟು ದಿನ ಉತ್ತಮ ಕೆಲಸ ಮಾಡಲಿ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News