ಶಿಕ್ಷಣ ಕ್ಷೇತ್ರಕ್ಕೆ ಸಂಘ ಸಂಸ್ಥೆಗಳ ಕೊಡುಗೆ ಅಪಾರ: ಚಿಕ್ಕಮಗಳೂರು ನಗರಸಭಾಧ್ಯಕ್ಷೆ ಶಿಲ್ಪಾ ರಾಜಶೇಖರ್

Update: 2018-09-16 18:00 GMT

ಚಿಕ್ಕಮಗಳೂರು, ಸೆ.16: ಸರಕಾರ ಮತ್ತು ಸಂಘ ಸಂಸ್ಥೆಗಳಿಂದ ದೊರೆಯುವ ಸವಲತ್ತುಗಳನ್ನು ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಂಡು ಶಿಕ್ಷಣವಂತರಾಗಿ ಹೊರಹೊಮ್ಮಬೇಕು ಎಂದು ನಗರಸಭೆ ಅಧ್ಯಕ್ಷೆ ಶಿಲ್ಪಾ ರಾಜಶೇಖರ್ ಸಲಹೆ ನೀಡಿದ್ದಾರೆ.

ನಗರದ ಕುವೆಂಪು ಕಲಾ ಮಂದಿರದಲ್ಲಿ ಶ್ರೀ ವಾಸವಿ ವಿವಿದೋದ್ದೇಶ ಸೌಹಾರ್ದ ಸಹಕಾರಿ ಸಂಘ ರವಿವಾರ ಏರ್ಪಡಿಸಿದ್ದ ವಿದ್ಯಾರ್ಥಿ ವೇತನ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬಹಳಷ್ಟು ವರ್ಷಗಳ ಹಿಂದೆ ಬಡವರು ಮತ್ತು ಗ್ರಾಮೀಣ ವಿದ್ಯಾರ್ಥಿಗಳಿಗೆ ಶಿಕ್ಷಣ ಮರೀಚಿಕೆಯಾಗಿತ್ತು. ಶಾಲೆಗಳಿಗೆ ಮೈಲಿಗಟ್ಟಲೆ ನಡೆದು ಹೋಗಬೇಕಾಗಿತ್ತು. ಅವರಿವರ ಮನೆಯಲ್ಲಿ ವಾರಾನ್ನದೂಟ ಮಾಡಿ ವಿದ್ಯಾಭ್ಯಾಸ ಮಾಡಬೇಕಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಈ ಪರಿಸ್ಥಿತಿ ಬದಲಾಗಿದ್ದು, ಮಕ್ಕಳ ಮನೆ ಬಾಗಿಲಿನಲ್ಲೇ ಶಿಕ್ಷಣ ದೊರೆಯುವಂತಹ ಶೈಕ್ಷಣಿಕ ವ್ಯವಸ್ಥೆ ಕಲ್ಪಿಸಿರುವುದು ಸರಕಾರಗಳ ಸಾಧನೆಯಾಗಿದೆ. ಶಿಕ್ಷಣ ಕ್ಷೇತ್ರಕ್ಕೆ ಸರಕಾರಗಳು ಅಗಾಧ ಪ್ರಮಾಣದಲ್ಲಿ ಹಣ ವ್ಯಯಿಸುತ್ತಿದ್ದು, ವಿದ್ಯಾರ್ಥಿಗಳು ಮತ್ತು ಪೋಷಕರು ಇದರ ಸವಲತ್ತು ಪಡೆದು ವಿದ್ಯಾವಂತ  ಸಮಾಜ ನಿರ್ಮಾಣಕ್ಕೆ ಶ್ರಮಿಸಬೇಕೆಂದರು.

ಸರಕಾರಗಳು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಕೋಟ್ಯಾಂತರ ರೂ. ವ್ಯಯಿಸುತ್ತಿವೆ, ಊಟ, ವಸತಿ, ಸಮವಸ್ತ್ರ, ಸೈಕಲ್, ಪಠ್ಯಪುಸ್ತಕ ಸೇರಿದಂತೆ ಅನೇಕ ಸವಲತ್ತುಗಳನ್ನು ಒದಗಿಸುವುದರ ಜೊತೆಗೆ ಉಚಿತವಾಗಿ ಶಿಕ್ಷಣ ನೀಡುತ್ತಿವೆ. ಸಂಘ ಸಂಸ್ಥೆಗಳೂ ಸಹ ಶಿಕ್ಷಣಕ್ಕೆ ಅನೇಕ ಸೌಲಭ್ಯಗಳನ್ನು ಒದಗಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ. ವಿದ್ಯಾರ್ಥಿಗಳು ಈ ಸವಲತ್ತುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಶ್ರದ್ಧೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿ ಶಿಕ್ಷಣವಂತರಾಗಬೇಕು ಎಂದ ಅವರು, ಸುಶಿಕ್ಷಿತ ಸಮಾಜದಿಂದ ಉತ್ತಮ ದೇಶ ನಿರ್ಮಾಣಸಾಧ್ಯ. ಇದರಿಂದ ಸರಕಾರ ಮತ್ತು ಸಂಘ ಸಂಸ್ಥೆಗಳ ಶ್ರಮ ಸಾರ್ಥಕವಾಗುತ್ತದೆ ಎಂದು ಕಿವಿಮಾತು ಹೇಳಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಘದ ಅಧ್ಯಕ್ಷ ಎಸ್.ಎ.ವಾಸುದೇವಮೂರ್ತಿ, ಮಕ್ಕಳನ್ನು ಶಿಕ್ಷಣಕ್ಕೆ ಪ್ರೋತ್ಸಾಹಿಸುವ ಉದ್ದೇಶದಿಂದ ದಾನಿಗಳ ನೆರವಿನಿಂದ ಪ್ರತಿವರ್ಷ ಯಾವುದೇ ಜಾತಿ, ಮತ, ಧರ್ಮದ ಭೇದವಿಲ್ಲದೆ ಎಲ್ಲಾ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ನೀಡಲಾಗುತ್ತಿದೆ. ಸಮಾಜದ ಬಡ ಮಕ್ಕಳನ್ನು ಶಿಕ್ಷಣದತ್ತ  ಸೆಳೆಯುವುದು, ಪ್ರೋತ್ಸಾಹಿಸುವುದೇ ಈ ಕಾರ್ಯಕ್ರಮದ ಮುಖ್ಯ ಗುರಿಯಾಗಿದೆ ಎಂದರು.

ಇದೇ ವೇಳೆ ಸಮಾರಂಭದಲ್ಲಿ ವಿವಿಧ ಶಾಲೆಗಳ 300 ವಿದ್ಯಾರ್ಥಿಗಳಿಗೆ ತಲಾ ಒಂದು ಸಾವಿರ ರೂ. ವಿದ್ಯಾರ್ಥಿ ವೇತನ ಮತ್ತು ಉನ್ನತ ವ್ಯಾಸಂಗ ಮಾಡುತ್ತಿರುವ ಓರ್ವ ವಿದ್ಯಾರ್ಥಿಗೆ 25 ಸಾವಿರ ರೂ. ಪ್ರೋತ್ಸಾಹ ಧನ ವಿತರಿಸಲಾಯಿತು. ಎಸೆಸೆಲ್ಸಿ ಮತ್ತು ಪಿಯುಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಯಿತು. ಸಂಘದ ಉಪಾಧ್ಯಕ್ಷ ಕೆ.ಎಸ್.ಸತೀಶ್, ವಾಸವಿ ಯುವಜನ ಸಂಘದ ಅಧ್ಯಕ್ಷ ದಿನೇಶ್ ಗುಪ್ತಾ, ಆರ್ಯವೈಶ್ಯ ಮಂಡಳಿಯ ಮಾಜಿ ಅಧ್ಯಕ್ಷ ಎಸ್.ಎನ್.ರಾಮಣ್ಣ, ಉಪಾಧ್ಯಕ್ಷ ಎಂ.ಡಿ.ಸತ್ಯಪ್ರಕಾಶ್, ದಾನಿ ಭಕ್ತವತ್ಸಲಂ, ಸಂಘದ ಕಾರ್ಯನಿರ್ವಹಣಾಧಿಕಾರಿ ರಘುನಂದನ್, ನಿರ್ದೇಶಕರಾದ ಕೆ.ವಿ.ಸುಧೀರ್, ಎಂ.ಎ.ಪದ್ಮಾಕರ್, ಜಮುನಾ ಪದ್ಮಾಕರ್, ಎಂ.ಎನ್.ನಾಗೇಂದ್ರ, ನಿತಿನ್, ಶ್ರೀಧರ್, ಜಯಂತಿ ಶೇಖರ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News