ಸಿದ್ದರಾಮಯ್ಯರ ರಕ್ಷಣೆಯಲ್ಲಿಯೇ ಸಮ್ಮಿಶ್ರ ಸರಕಾರ ಐದು ವರ್ಷ ಪೂರೈಸಲಿದೆ: ಸಿಎಂ ಕುಮಾರಸ್ವಾಮಿ

Update: 2018-09-17 13:48 GMT

ಕಲಬುರಗಿ, ಸೆ.17: ತಮ್ಮ ಬಳಿ 104 ಶಾಸಕರಿದ್ದಾರೆ ಎಂದು ಹೇಳುವ ಗೋಮುಖ ವ್ಯಾಘ್ರ ಇದ್ದಾರಲ್ಲ ಅವರೇ ನಮ್ಮ ಸಮ್ಮಿಶ್ರ ಸರಕಾರದ ಪಾಲಿಗೆ ವಿಲನ್(ಖಳನಾಯಕ) ಎಂದು ಪರೋಕ್ಷವಾಗಿ ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ವಿರುದ್ಧ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

ಸೋಮವಾರ ನಗರದಲ್ಲಿ ಮಾತನಾಡಿದ ಅವರು, ಸರಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿರುವ ಕಿಂಗ್‌ಪಿನ್‌ಗಳಿಗೆ ಸಂಬಂಧಿಸಿದಂತೆ ನಾನು ಯಾರ ಹೆಸರನ್ನೂ ಉಲ್ಲೇಖಿಸಿಲ್ಲ. ಆದರೂ, ಕಳ್ಳನ ಮನಸ್ಸು ಹುಳ್ಳು ಹುಳ್ಳುಗೆ ಎನ್ನುವಂತೆ ಬಿಜೆಪಿಯವರ ಮನಸ್ಥಿತಿಯಾಗಿದೆ ಎಂದರು.

ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿದ್ದಾರೆ, ನೀಡುತ್ತಿದ್ದಾರೆ ಎಂದು ಸುಮ್ಮನೇ ಇಲ್ಲ ಸಲ್ಲದ ಸುದ್ದಿಗಳನ್ನು ಹರಡಿಸುತ್ತಿದ್ದಾರೆ. ಸಮ್ಮಿಶ್ರ ಸರಕಾರಕ್ಕೆ ಕಾಂಗ್ರೆಸ್ ಶಾಸಕರು ಯಾರೂ ಖಳನಾಯಕರಾಗಿಲ್ಲ. ನಮ್ಮ ಸರಕಾರಕ್ಕೆ ಖಳನಾಯಕರು ಯಾರೂ ಎನ್ನುವುದನ್ನು ನೀವೇ ವಿಚಾರ ಮಾಡಿ ನೋಡಿ ಎಂದು ಅವರು ಮರು ಪ್ರಶ್ನೆ ಹಾಕಿದರು.

ರಾಜ್ಯ ಸಮ್ಮಿಶ್ರ ಸರಕಾರವು ಸುಭದ್ರವಾಗಿದ್ದು, ಇದಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ರಕ್ಷಣೆಯೇ ದೊಡ್ಡಮಟ್ಟದಲ್ಲಿ ಇದೆ. ಬಹಳಷ್ಟು ಜನರಿಗೆ ಈ ವಿಷಯ ಗೊತ್ತಿಲ್ಲ. ಸಿದ್ದರಾಮಯ್ಯ ರಕ್ಷಣೆಯಲ್ಲಿಯೇ ಈ ಸರಕಾರ ಐದು ವರ್ಷದ ಅಧಿಕಾರವಧಿ ಪೂರೈಸಲಿದೆ ಎಂದು ಕುಮಾರಸ್ವಾಮಿ ಹೇಳಿದರು.

ಅನಾವಶ್ಯಕವಾಗಿ ಅವರ ಹೆಸರನ್ನು ಕೆಲವೊಂದು ವಿಷಯಗಳಲ್ಲಿ ಎಳೆದು ತರಲಾಗುತ್ತಿದೆ. ಸಿದ್ದರಾಮಯ್ಯ ಈ ಸರಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ರಾಜ್ಯ ಸರಕಾರದಲ್ಲಿ ಯಾವುದೇ ರೀತಿಯ ಗೊಂದಲಗಳಿಲ್ಲ. ಸಮ್ಮಿಶ್ರ ಸರಕಾರಕ್ಕೆ ಸಿದ್ದರಾಮಯ್ಯ ಅವರಿಂದ ಕಂಟಕ ಎಂದು ಬಿಂಬಿಸಲಾಗುತ್ತಿರುವ ಸುದ್ದಿಗಳು ಸತ್ಯಕ್ಕೆ ದೂರವಾದದ್ದು ಎಂದು ಅವರು ಹೇಳಿದರು. ಸರಕಾರವನ್ನು ಅಸ್ಥಿರಗೊಳಿಸಲು ಬಿಜೆಪಿಯವರು ವ್ಯರ್ಥ ಕಸರತ್ತು ನಡೆಸುತ್ತಿದ್ದಾರೆ. ಆದುದರಿಂದಲೇ, ಹೋದಲ್ಲಿ ಬಂದಲ್ಲಿ ಅನಗತ್ಯ ಗೊಂದಲಗಳನ್ನು ಸೃಷ್ಟಿ ಮಾಡುವ ಹೇಳಿಕೆಗಳನ್ನು ನೀಡಿಕೊಂಡು ಬಿಜೆಪಿ ನಾಯಕರು ತಿರುಗುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News