'ಡ್ಯಾನ್ಸ್ ದೀವಾನೆ' ರಿಯಾಲಿಟಿ ಶೋನಲ್ಲಿ ಚಿಕ್ಕಮಗಳೂರಿನ ಕಿಶನ್‍ಗೆ ಪ್ರಥಮ ಸ್ಥಾನ

Update: 2018-09-17 16:21 GMT

ಚಿಕ್ಕಮಗಳೂರು, ಸೆ.17: ಆತನಿಗಿನ್ನೂ 7 ವರ್ಷ, ಬೆಂಗಳೂರಿನ ನ್ಯೂ ಕೇಂಬ್ರಿಡ್ಜ್ ಸ್ಕೂಲ್‍ನಲ್ಲಿದ್ದಾಗ ತನಗೆ ಇಷ್ಟವಿಲ್ಲದಿದ್ದರೂ ತಾಯಿ ಒತ್ತಾಯಕ್ಕೆ ಮಣಿದು ಆಗ ತಾನೆ ಕಲಿತ ಆತನ ನೃತ್ಯ ಕಂಡ ಶಾಲೆ ಶಿಕ್ಷಕಿಯೊಬ್ಬರು, ಈತನಿಗೆ ನೃತ್ಯ ಲೋಕದಲ್ಲಿ ಉಜ್ವಲ ಭವಿಷ್ಯವಿದೆ, ಆ ಕ್ಷೇತ್ರದಲ್ಲಿ ಈ ಹುಡುಗ ಮಹಾನ್ ಸಾಧನೆ ಮಾಡುತ್ತಾನೆ, ಆತನನ್ನು ಪ್ರೋತ್ಸಾಹಿಸಿ ಎಂದು ಪೋಷಕರಿಗೆ ತಿಳಿಸಿದ್ದರಂತೆ. ಕಾಕತಾಳೀಯ ಎಂಬಂತೆ ಶಿಕ್ಷಕಿಯಿಂದ ಮೆಚ್ಚುಗೆಗಳಿಸಿದ್ದ ಆ ಮಲೆನಾಡಿನ ಹುಡುಗ ಇದೀಗ ಡ್ಯಾನ್ಸ್ ಲೋಕದ ಹೊಸ ತಾರೆಯಾಗಿ ಹೊರಹೊಮ್ಮಿದ್ದಾನೆ. ತನಗಿದು ಇಷ್ಟವಿಲ್ಲ ಎಂದು ಮೂಗು ಮುರಿದಿದ್ದವನು ಇದೀಗ ಅದೇ ನೃತ್ಯ ಕ್ಷೇತ್ರದಲ್ಲಿ ಎಲ್ಲರೂ ಹುಬ್ಬೇರಿಸುವ ಸಾಧನೆ ಮಾಡಿ ಹಿಂದಿ ಸಿನೆಮಾ ಕ್ಷೇತ್ರದ ಜನಪ್ರಿಯ ನಟಿ ಮಾಧುರಿ ಧೀಕ್ಷಿತ್ ಅವರಂತಹ ಅತಿರಥ ಮಹಾರತಿಗಳಿಂದ ಶಹಬ್ಬಾಸ್ ಎನಿಸಿಕೊಂಡಿದ್ದಾನೆ.

ಹೌದು.ಮಲೆನಾಡಿನ ಯುವಕನೊಬ್ಬ ನೃತ್ಯ ಲೋಕದ ದಿಗ್ಗಜರು ಕೂಡಾ ತನ್ನತ್ತ ತಿರುಗಿ ನೋಡುವಂತಹ ಸಾಧನೆ ಮಾಡಿದ್ದಾನೆ. ಹಿಂದಿ ಕಲರ್ಸ್ ವಾಹಿನಿಯ ಜನಪ್ರಿಯ ಶೋ ಎನಿಸಿರುವ 'ಡಾನ್ಸ್ ದೀವಾನೆ' ಎಂಬ ಪ್ರತಿಷ್ಠಿತ ರಿಯಾಲಿಟಿ ಶೋನಲ್ಲಿ ಡಾನ್ಸ್ ಲೋಕದ ದಿಗ್ಗಜರು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಕಾಫಿ ಕಣಿವೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು ಕಳಸ ಹೋಬಳಿ ವ್ಯಾಪ್ತಿಯ ಬಿಳಗಲಿ ಎಂಬ ಸಣ್ಣ ಗ್ರಾಮದ 'ಕಿಶನ್' ಎಂಬ 28 ವರ್ಷದ ಯುವಕನೇ ಆ ಸಾಧಕನಾಗಿದ್ದು, ಕಲರ್ಸ್ ವಾಹಿನಿ ಡ್ಯಾನ್ಸ್ ದೀವಾನೆ ರಿಯಾಲಿಟಿ ಶೋನ ಜನರೇಶನ್-2 ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಐದು ಲಕ್ಷ ರೂ. ನಗದು ಬಹುಮಾನ ಪಡೆದು ರಾಜ್ಯ ಹಾಗೂ ಕಾಫಿನಾಡಿನ ಕೀರ್ತಿಯನ್ನು ದೇಶಕ್ಕೆ ಪಸರಿಸಿದ್ದಾನೆ.

ಬಿಳಗಲಿ ಗ್ರಾಮದ ಸುಮಾ ಹಾಗೂ ಬಿ.ಪಿ.ಅಶೋಕ್ ದಂಪತಿ ಮಗನಾದ ಕಿಶನ್‍ಗೆ ಆರಂಭದಲ್ಲಿ ಡ್ಯಾನ್ಸ್ ಎಂದರೆ ಅಷ್ಟಕ್ಕಷ್ಟೆ. ಆದರೆ ಆತನ ತಾಯಿ ಸುಮಾ ರಿಗೆ ಎಲ್ಲ ಬಗೆಯ ನೃತ್ಯಗಳಲ್ಲೂ ಎಲ್ಲಿಲ್ಲದ ಆಸಕ್ತಿ. ಹೀಗಾಗಿ ಅವರಿಗೆ ತನ್ನ ಮಗನನ್ನು ಹೇಗಾದರೂ ಮಾಡಿ ಉತ್ತಮ ನೃತ್ಯಪಟುವನ್ನಾಗಿಸಬೇಕೆಂಬ ಹೆಬ್ಬಯಕೆ ಇತ್ತು. ಆದರೆ ಆಗಿನ್ನೂ ಬಾಲಕನಾಗಿದ್ದ ಕಿಶನ್‍ನ ಮನವೊಲಿಸುವುದು ತಾಯಿ ಸುಮಾ ಅವರಿಗೆ ಕಷ್ಟವಾಗಿತ್ತು. ಆದರೆ ಪಟ್ಟು ಬಿಡದ ಅವರು ತಮ್ಮ ಪತಿ ಅಶೋಕ್ ಅವರ ಮನವೊಲಿಸಿ ಮಗನಿಗೆ ಬೆಂಗಳೂರಿನಲ್ಲಿ ಶಿಕ್ಷಣ ಕೊಡಿಸುವ ಪ್ರಯತ್ನದಲ್ಲಿ ಯಶಸ್ವಿಯಾಗಿ ಬೆಂಗಳೂರಿನಲ್ಲಿ ಮನೆಮಾಡಿಕೊಂಡು ಕಿಶನ್‍ನನ್ನು ಅಲ್ಲಿನ ಬಿಷಪ್ ಕಾಟನ್ ಶಾಲೆಗೆ ಸೇರಿಸಿ ಪ್ರಾಥಮಿಕ ಶಿಕ್ಷಣ ಕೊಡಿಸಿದ್ದರು. ಅದೇ ವೇಳೆಯಲ್ಲಿ ತಾಯಿ ಸುಮಾ ಮಗನನ್ನು ನೃತ್ಯ ಶಾಲೆಗೆ ಸೇರಿಸುವುದರೊಂದಿಗೆ ಟಿವಿಗಳಲ್ಲಿನ ನೃತ್ಯ ಕಾರ್ಯಕ್ರಮಗಳನ್ನು ತೋರಿಸಿ ಮಗನಲ್ಲಿ ನೃತ್ಯದ ಬಗ್ಗೆ ಆಸಕ್ತಿ ಮೂಡುವಂತೆ ಮಾಡಲು ಶ್ರಮಿಸಿದ್ದರು.

ಇಷ್ಟವಿಲ್ಲದಿದ್ದರೂ ತಾಯಿಯ ಆಸೆಗಾಗಿ ಕಷ್ಪಪಟ್ಟು ನೃತ್ಯ ಕಲಿತ ಕಿಶನ್ ಶಾಲಾ ದಿನಗಳಲ್ಲಿ ನೀಡಿದ ನೃತ್ಯ ಕಾರ್ಯಕ್ರಮದಲ್ಲೇ ಎಲ್ಲರ ಗಮನಸೆಳೆಯುವಂತಹ ನೃತ್ಯ ಮಾಡುತ್ತಿದ್ದ. ಶಾಲಾ ಶಿಕ್ಷಕರು, ಸಾರ್ವಜನಿಕರು, ಕುಟುಂಬಸ್ಥರು ಹಾಗೂ ಪೋಷಕರ ಪ್ರೋತ್ಸಾಹದಿಂದಾಗಿ ತನಗರಿವಿಲ್ಲದಂತೆ ನೃತ್ಯದಲ್ಲಿ ಪಳಗಿ ಹೋದ ಕಿಶನ್ ಇದರ ಜೊತೆಯಲ್ಲೇ ಬೆಂಗಳೂರಿನ ಕೇಂಬ್ರಿಡ್ಜ್ ಪದವಿ ಕಾಲೇಜಿನಲ್ಲೇ ಬಿಬಿಎಂ ಪದವಿ ಪಡೆದ. ಪದವಿ ಬಳಿಕ ಮತ್ತಾವ್ಯ ಕ್ಷೇತ್ರದತ್ತಲೂ ಮುಖ ಮಾಡದ ಆತ ತಾನೇ ಸ್ವತಃ ನೃತ್ಯ ಶಾಲೆ ಆರಂಭಿಸಿ ಸಂಪಾದನೆಗೂ ಇಳಿದಿದ್ದ. ಇದೇ ವೇಳೆಯಲ್ಲಿ ತನ್ನನ್ನು ನೃತ್ಯ ಪಟುವನ್ನಾಗಿಸಿದ್ದ ತಾಯಿ ಅಕಾಲಿಕವಾಗಿ ಮರಣಹೊಂದಿದರು. ತನ್ನ ಗುರುವಿನಂತಿದ್ದ ತಾಯಿಯ ಆಗಲಿಕೆಯಿಂದ ಕಿಶನ್ ವಿಚಲಿತನಾದರೂ ತಾಯಿಯ ಹೆಬ್ಬಯಕೆಯಂತೆ ನೃತ್ಯ ಕ್ಷೇತ್ರದಲ್ಲಿ ಹೆಸರು ಮಾಡಿ ತಾಯಿ ಆಸೆ ಈಡೇರಿಸುವ ತುಡಿತದಿಂದ ಡ್ಯಾನ್ಸ್ ನಲ್ಲೇ ಮುಳುಗಿ ಹೋಗಿದ್ದ.

ಇದೇ ವೇಳೆ ಕಲರ್ಸ್ ವಾಹಿನಿಯ ಡಾನ್ಸ್ ದೀವಾನೆ ಕಾರ್ಯಕ್ರಮ ಪ್ರತಿಷ್ಠಿತ ರಿಯಾಲಿಟಿ ಶೋ ಆಗಿ ಹೊರಹೊಮ್ಮಿ ದೇಶಾದ್ಯಂತ ಮನೆ ಮಾತಾಗಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಕನಸನ್ನು ನೃತ್ಯ ಪಟುಗಳು ಕಾಣುತ್ತಿರುವಾಗಲೇ ಕಿಶನ್‍ನ ಪ್ರತಿಭೆ ಬಗ್ಗೆ ತಿಳಿದ ಕಲರ್ಸ್ ವಾಹಿನಿಯ ಶೋ ಆಯೋಜಕರು ಕಿಶನ್‍ಗೆ ಸ್ಪರ್ಧೆಗೆ ಆಹ್ವಾನವಿತ್ತಿದ್ದರು. ಬಯಸದೇ ಬಂದ ಭಾಗ್ಯ ಎಂಬಂತೆ ಒಂದು ಕೈ ನೋಡಿಯೇ ಬಿಡೋಣ ಎಂದು ಮುಂಬಯಿಗೆ ಹೋದ ಕಿಶನ್‍ಗೆ ಶೋಗೆ ಆಯ್ಕೆಯಾಗಲು ಬಂದಿದ್ದ 5000 ಸ್ಪರ್ಧಿಗಳನ್ನು ಕಂಡು ದಿಗಿಲು ಉಂಟಾಗಿತ್ತು. ಅಲ್ಲದೇ ಭಾಷೆಯ ಸಮಸ್ಯೆಯು ಉಂಟಾಗಿತ್ತು ಎಂದು ಸ್ವತಃ ಕಿಶನ್ ಪತ್ರಿಕೆಗೆ ತಿಳಿಸಿದ್ದಾನೆ.

ಆದರೆ ತೀರ್ಪುಗಾರರಾಗಿದ್ದ ನಟಿ ಮಾಧುರಿ ದೀಕ್ಷಿತ್, ಕೊರಿಯೋಗ್ರಾಫರ್ ತುಷಾರ್ ಹಾಗೂ ಸಿನಿಮಾ ನಿರ್ದೇಶಕ ಶಶಾಂಕ್ ಅವರು ಕಿಶನ್ ಅವರ ನೃತ್ಯ ಕಲೆಗೆ ಮನಸೋತು ಡಾನ್ಸ್ ದೀವಾನೆ ಜನರೇಶನ್-2 ವಿಭಾಗದ ಸ್ಪರ್ಧಿಯಾಗಿ ಆಯ್ಕೆ ಮಾಡಿದ್ದರು. ಈ ಆಯ್ಕೆ ಬಳಿಕ ತಿರುಗಿ ನೋಡದ ಕಿಶನ್ ತನ್ನೆಲ್ಲಾ ಶ್ರಮವನ್ನು ನೃತ್ಯಕ್ಕೆ ಮಾತ್ರ ಸೀಮಿತಗೊಳಿಸಿ ಪ್ರತೀ ಕಾರ್ಯಕ್ರಮದ ವಿವಿಧ ಹಂತಗಳಲ್ಲೂ ಗಮನಾರ್ಹ ಪ್ರದರ್ಶನ ನೀಡುತ್ತಾ ಇಡೀ ದೇಶಾದ್ಯಂತ ಮನೆಮಾತಾಗಿದ್ದ. ಕಲರ್ಸ್ ವಾಹಿನಿಯಲ್ಲಿ ಈತನ ನೃತ್ಯ ಕಲೆಯ ಪ್ರತಿಭೆ ಕಂಡ ನೃತ್ಯ ಪ್ರಿಯರು ಹಾಗೂ ಅಭಿಮಾನಿಗಳು ಕಿಶನ್‍ನನ್ನು ಪ್ರತೀ ಹಂತದಲ್ಲಿ ಬೆಂಬಲಿಸಿ ಓಟ್ ಮಾಡಿದ್ದರು. ಇದರ ಫಲವಾಗಿ ಅಂತಿಮ ಸುತ್ತಿಗೆ ಆಯ್ಕೆಗೊಂಡಿದ್ದ ಕಿಶನ್ ರಿಯಾಲಿಟಿ ಶೋನ ಅಂತಿಮ ಸ್ಪರ್ಧೆಯಲ್ಲೂ ಹುಬ್ಬೇರಿಸುವ ನೃತ್ಯ ಪ್ರದರ್ಶನ ನೀಡಿ ಪ್ರಥಮ ಸ್ಥಾನದೊಂದಿಗೆ 5 ಲಕ್ಷ ರೂ. ಬಹುಮಾನದೊಂದಿಗೆ ಸಾಧನೆಗೈದು ನಾಡಿಗೆ ಹಿಂದಿರುಗಿದ್ದಾನೆ.

ಕಿಶನ್ ಸಾಧನೆಯ ವಿಶೇಷ ಎಂದರೆ ರಿಯಾಲಿಟಿ ಶೋನ 5000 ಸ್ಪರ್ಧಿಗಳ ಪೈಕಿ ಕರ್ನಾಟಕದಿಂದ ಸ್ಪರ್ಧಿಸಿದ್ದ ಏಕೈಕ ಯುವಕ ಕಿಶನ್ ಆಗಿದ್ದ. ಇದೀಗ ಆತನೇ ಡಾನ್ಸ್ ದೀವಾನೆಯ ಚಾಂಪೊಯನ್ ಆಗಿ ಹೊರಹೊಮ್ಮಿ ರಾಜ್ಯ ಹಾಗೂ ಕಾಫಿ ನಾಡಿನ ಕೀರ್ತಿಯನ್ನು ಇಡೀ ದೇಶಾದ್ಯಂತ ಪಸರಿಸಿದ್ದಾನೆ. ಭವಿಷ್ಯದಲ್ಲಿ ಉತ್ತಮ ಕೋರಿಯೋಗ್ರಾಫರ್ ಆಗುವ ಕನಸು ಹೊಂದಿರುವ ಕಿಶನ್ ಈ ಕ್ಷೇತ್ರದಲ್ಲೂ ಹೆಸರು ಮಾಡಿ ಮಲೆನಾಡಿದ ಕೀತಿಯನ್ನು ಬಾಲಿವುಡ್ ಅಂಗಳದಲ್ಲೂ ಬೆಳಗಲಿ ಎಂಬುದು ಎಲ್ಲರ ಹಾರೈಕೆ.

ಡಾನ್ಸ್ ದೀವಾನೆ ಜನರೇಶನ್-2ನ 16ನೇ ಸುತ್ತಿನಲ್ಲಿ ಕಿಶನ್ ಯಶಸ್ವಿಯಾಗುತ್ತಿದ್ದಂತೆ ಇತ್ತ ಮಲೆನಾಡಿನಲ್ಲಿ ಕಿಶನ್ ಮನೆ ಮಾತಾಗಿದ್ದ. ಕಿಶನ್ ಗೆಲುವಿಗೆ ಇಡೀ ಮಲೆನಾಡು ಹಾರೈಸಿ ಎಲ್ಲೆಲ್ಲೂ ಪ್ಲೆಕ್ಸ್ ಕಟ್ಟಿ ಶುಭ ಕೋರಿದ್ದರು. ಅಂತಿಮ ಸುತ್ತಿನಲ್ಲಿ ಕಿಶನ್ ಗೆಲ್ಲುತ್ತಿದ್ದಂತೆ ಮಲೆನಾಡಿನ ನೃತ್ಯ ಪ್ರಿಯರು ಸಂಭ್ರಮಿಸಿದ್ದಾರೆ. ಸೋಮವಾರ ಸಾಧನೆಯೊಂದಿಗೆ ಹುಟ್ಟೂರು ಬಿಳಗಲಿಗೆ ಆಗಮಿಸುವ ದಾರಿ ಮಧ್ಯೆ ಅಲ್ಲಲ್ಲಿ ಅಭಿಮಾನಿಗಳಿ ಕಿಶನ್‍ನನ್ನು ಸನ್ಮಾನಿಸಿ ಗೌರವಿಸಿದರು. ಹುಟ್ಟೂರಿನ ಜನತೆ, ಅಭಿಮಾನಿಗಳು ಕಳಸ ಸಮೀಪದ ಹಿರೇಬೈಲು ಗ್ರಾಮದಲ್ಲಿ ಕಿಶನ್‍ನನ್ನು ಸೋಮವಾರ ಅಭಿನಂದಿಸಿದರು.

ತನಗೆ ಡಾನ್ಸ್ ಬಗ್ಗೆ ಆರಂಭದಲ್ಲಿ ಆಸಕ್ತಿ ಇರಲಿಲ್ಲ. ಆದರೆ ಅಮ್ಮನಿಗೆ ನೃತ್ಯ ಎಂದರೆ ಪ್ರಾಣ. ತನ್ನನ್ನು ನೃತ್ಯಪಟುವಾಗಿ ನೋಡುವುದು, ಈ ಕ್ಷೇತ್ರದಲ್ಲಿ ಸಾಧನೆ ಮಾಡುವುದು ಅಮ್ಮನ ಹೆಬ್ಬಯಕೆಯಾಗಿತ್ತು. ತನಗೆ ಡಾನ್ಸ್ ಬಗ್ಗೆ ಆಸಕ್ತ ಮೂಡಲು ಅಮ್ಮನೇ ಕಾರಣ. ಡಾನ್ಸ್ ಮಾಡುತ್ತಲೇ ಒಮ್ಮೆ ಕಾಲು ಮುರಿದುಕೊಂಡಿದ್ದೆ. ಈ ವೇಳೆ ಅಮ್ಮ ಹಾಗೂ ಅಪ್ಪನ ಪ್ರೋತ್ಸಾಹ, ಸಹಕಾರ ಇಲ್ಲದಿದ್ದರೇ ನಾನೀಗ ಈ ಸಾಧನೆ ಮಾಡುತ್ತಿರಲಿಲ್ಲ. ಆದರೆ ಅಮ್ಮ ಮರಣಹೊಂದಿದಾಗ ತನ್ನಲ್ಲಿ ಈ ಆಸಕ್ತಿ ಹೆಚ್ಚಾಗಿ ಸಾಧನೆ ಮಾಡುವ ತುಡಿತ ಹೆಚ್ಚಿತು. ತಾನು ಈಗ ಏನಾಗಿದ್ದರೂ ಅದೆಲ್ಲವೂ ಅಮ್ಮ ಹಾಗೂ ಅಪ್ಪನ ಸಹಕಾರದಿಂದ.
-ಕಿಶನ್, ಡಾನ್ಸ್ ದೀವಾನೆ ರಿಯಾಲಿಟಿ ಶೋ ವಿಜೇತ

Writer - ಕೆ.ಎಲ್ ಶಿವು

contributor

Editor - ಕೆ.ಎಲ್ ಶಿವು

contributor

Similar News