ಕಾಂಗ್ರೆಸ್-ಬಿಜೆಪಿ ಅಲ್ಲದ ಪರ್ಯಾಯ ಅಜೆಂಡಾ ಇರುವ ಪಕ್ಷವನ್ನು ಅಧಿಕಾರಕ್ಕೆ ತನ್ನಿ: ಯೋಗೇಂದ್ರ ಯಾದವ್ ಕರೆ

Update: 2018-09-17 17:28 GMT

ಮೈಸೂರು,ಸೆ.17: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳನ್ನು ಹೊರತುಪಡಿಸಿ ಪರ್ಯಾಯಾ ಅಜೆಂಡಾ ಹೊಂದಿರುವ ಪಕ್ಷಗಳನ್ನು ಅಧಿಕಾರಕ್ಕೆ ತರಲು ದೇಶದ ಜನತೆ ಮುಂದಾಗಬೇಕಿದೆ ಎಂದು ಸ್ವರಾಜ್ ಇಂಡಿಯಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದ್ರ ಯಾದವ್ ಕರೆ ನೀಡಿದರು.

ನಗರದ ಪಡುವಾರಹಳ್ಳಿಯಲ್ಲಿರುವ ಲೀಲಾ ಚೆನ್ನಯ್ಯ ಕಲ್ಯಾಣಮಂಟಪದಲ್ಲಿ ಸೋಮವಾರ ಸ್ವರಾಜ್ ಇಂಡಿಯಾ ರಾಜ್ಯ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಈಗ ಕಾಂಗ್ರೆಸ್‍ನಿಂದ ರಾಹುಲ್ ಗಾಂಧಿ ಮತ್ತು ಬಿಜೆಪಿಯಿಂದ ಮೋದಿ ಎಂಬಂತಾಗಿದೆ. ಇದರಲ್ಲಿ ಮೋದಿಯೇ ಗೆಲ್ಲುತ್ತಾರೆ. ಭ್ರಷ್ಟಾಚಾರ ಮೆತ್ತಿಕೊಂಡಿರುವ ಮಹಾಘಟಾನುಘಟಿ ನಾಯಕರು ಮತ್ತೊಂದೆಡೆ ಕೋಮುವಾದ, ಭ್ರಷ್ಟಾಚಾರ ಮೆತ್ತಿಕೊಂಡಿರುವ ಬಿಜೆಪಿಯಿಂದ ದೇಶ ಮತ್ತು ಸಂವಿಧಾನ ರಕ್ಷಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನದಲ್ಲಿ ಭಾಗವಹಿಸಿದ್ದ ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಶರದ್ ಪವಾರ್ ಅವರಿಗೆ ಮೈತ್ರಿ ಸರಕಾರದ ಸಾಧನೆ ಏನು ಎಂಬುದು ಗೊತ್ತಿದೆ. ಅಖಿಲೇಶ್, ಶರದ್, ಕುಮಾರಸ್ವಾಮಿ ಭ್ರಷ್ಟಾಚಾರವನ್ನು ಹೇಗೆಲ್ಲಾ ನಡೆಸಬಹುದು ಎಂಬುದನ್ನು ತೋರಿಸಿಕೊಟ್ಟವರು. ರಾಜ್ಯದಲ್ಲಿ ಮೈತ್ರಿ ಸರಕಾರ ಬಂದಾಗಿನಿಂದ ಮುಖ್ಯಮಂತ್ರಿ ಅಳುತ್ತಾರೆ. ಸದಾ ಭಿನ್ನಮತದಲ್ಲೇ ಸರ್ಕಾರ ನಡೆಯುತ್ತಿದೆ. ಯಡಿಯೂರಪ್ಪ, ಕುಮಾರಸ್ವಾಮಿ, ಡಿ.ಕೆ.ಶಿವಕುಮಾರ್ ಹೊರತುಪಡಿಸಿ ಮಿಕ್ಕ ನಾಯಕರಿಲ್ಲವಾ? ಎಂಬುದನ್ನು ಜನ ತೀರ್ಮಾನಿಸಬೇಕಿದೆ ಎಂದು ಹೇಳಿದರು.

ಸ್ವರಾಜ್ ಇಂಡಿಯಾ ರಾಜ್ಯಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ದೇವನೂರ ಮಹಾದೇವ, ತಮಿಳುನಾಡಿನ ಕ್ರಿಸ್ಟಿಯಾಸ್ವಾಮಿ, ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಟಿ.ಗಂಗಾಧರ್, ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ, ಮೈಸೂರು ಜಿಲ್ಲಾಧ್ಯಕ್ಷ ಹೊಸಕೋಟೆ ಬಸವರಾಜ್, ಮುಖಂಡರಾದ ಪ್ರೊ.ಶಬ್ಬೀರ್ ಮುಸ್ತಾಫ, ಅಭಿರುಚಿ ಗಣೇಶ್, ಅಮ್ಜದ್ ಪಾಷಾ, ಬಿ.ಕರುಣಾಕರನ್, ಹೊಸೂರು ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು. ಬಳಿಕ ಪಕ್ಷದ ಆಂತರಿಕ ಚುನಾವಣೆ ನಡೆಯಿತು.

ಸ್ವರಾಜ್ ಇಂಡಿಯಾ ರಾಜ್ಯಾಧ್ಯಕ್ಷರಾಗಿ ಚಾಮರಸ ಮಾಲೀ ಪಾಟೀಲ್ ಪುನರಾಯ್ಕೆ
ಸ್ವರಾಜ್ ಇಂಡಿಯಾ ಪಕ್ಷದ ರಾಜ್ಯಾಧ್ಯಕ್ಷರಾಗಿ ಚಾಮರಸ ಮಾಲೀ ಪಾಟೀಲ್ ಮತ್ತೊಮ್ಮೆ ಪುನರಾಯ್ಕೆಯಾಗಿದ್ದಾರೆ.

ಸೋಮವಾರ ಸ್ವರಾಜ್ ಇಂಡಿಯಾ ಪಕ್ಷದ ಆಂತರಿಕ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಚಾಮರಸ ಮಾಲೀ ಪಾಟೀಲ್, ಕಾರ್ಯಾಧ್ಯಕ್ಷರಾಗಿ ಅಮ್ಜದ್ ಪಾಷಾ, ಪ್ರಧಾನಕಾರ್ಯದರ್ಶಿ ದೊಡ್ಡಿ ಪಾಳ್ಯ ನರಸಿಂಹಮೂರ್ತಿ, ಉಪಾಧ್ಯಕ್ಷರುಗಳಾಗಿ ಬಿ.ಕರುಣಾಕರನ್, ವೀರಸಂಗಯ್ಯ ಚುಕ್ಕಿ ನಂಜುಂಡಸ್ವಾಮಿ, ಕಾರ್ಯದರ್ಶಿಗಳಾಗಿ ರಶ್ಮಿ, ರಾಜಶೇಖರ್ ಅಕ್ಕಿ, ನಾಗರತ್ನಮ್ಮ, ಖಜಾಂಚಿ ಹೆಬ್ಬಾಲೆ ನಿಂಗರಾಜು ಅವರುಗಳನ್ನು ಸರ್ವಾನುಮತದಿಂದ ಆಯ್ಕೆಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News