ವಿಶ್ವವನ್ನೇ ರಕ್ಷಣೆ ಮಾಡಿದ ವಿಶ್ವಕರ್ಮರ ಸೇವೆ ಅವಿಸ್ಮರಣೀಯ: ಡಿಸಿಎಂ ಪರಮೇಶ್ವರ್

Update: 2018-09-17 17:52 GMT

ತುಮಕೂರು,ಸೆ.17: ಹಿಂದೂ ಸಂಪ್ರದಾಯದಲ್ಲಿ ಇಡೀ ವಿಶ್ವವನ್ನೇ ರಕ್ಷಣೆ ಮಾಡಿದ ವಿಶ್ವಕರ್ಮರು ಒಂದು ಸಮುದಾಯಕ್ಕೆ ಸೀಮಿತಲ್ಲ, ಇಡೀ ಸಮಾಜಕ್ಕೆ ಅವರ ಸೇವೆ ಸಂದಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ. 

ನಗರದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಮಹಾನಗರ ಪಾಲಿಕೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಜಿಲ್ಲಾ ವಿಶ್ವಕರ್ಮ ಸೇವಾ ಸಮಿತಿ ಸಂಯುಕ್ತಾಶ್ರಯದಲ್ಲಿ ವಿಶ್ವಕರ್ಮ ಜಯಂತ್ಯುತ್ಸವದ ಪ್ರಯುಕ್ತ ಹಮ್ಮಿಕೊಂಡಿದ್ದ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡುತಿದ್ದ ಅವರು, ವಿಶ್ವಕರ್ಮರು ಇಡೀ ವಿಶ್ವವನ್ನೇ ರಚನೆ ಮಾಡುವ ಮೂಲಕ ಜಗತ್ತು ಮತ್ತು ಮನುಕುಲಕ್ಕೆ ಆಸರೆಯಾಗಿದ್ದಾರೆ. ಇಂಥ ವಿಶ್ವಕರ್ಮರಿಗೆ ಗೌರವ ಸಮರ್ಪಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ ಎಂದರು. 

ಜಗತ್ತಿಗೆ ವಿಶ್ವಕರ್ಮರ ಸೇವೆಯನ್ನು ಸಾರುವ ಕೆಲಸ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಸರ್ಕಾರ ವಿಶ್ವಕರ್ಮ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡಿದೆ. ಕಳೆದ ಸರಕಾರ ಮುಖ್ಯಮಂತ್ರಿಗಳನ್ನು ಮನವೊಲಿಸಿ ವಿಶ್ವಕರ್ಮ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಘೋಷಣೆ ಮಾಡುವಲ್ಲಿ ತಾವು ಮತ್ತು ವಿಶ್ವಕರ್ಮ ಸಮುದಾಯದ ಮುಖಂಡರು ಶ್ರಮಿಸಿದ್ದರ ಫಲ ಕಳೆದ 3 ವರ್ಷದಿಂದ ಈ ಜಯಂತಿಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಹಿಂದೂ ಸಂಪ್ರದಾಯದಲ್ಲಿ ವಿಶ್ವಕರ್ಮರಿಗೆ ಮಹತ್ವದ ಸ್ಥಾನವಿದೆ. ಹಾಗಾಗಿ ಈ ಜಯಂತಿ ಕೇವಲ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಇಡೀ ಸಮಾಜಕ್ಕೆ ಅನ್ವಯಿಸುವಂತಾಗಬೇಕು ಎಂದು ಆಶಿಸಿದರು. 

ನಗರದ ಚಿಕ್ಕಪೇಟೆಯ ಪಾಂಡುರಂಗ ದೇವಾಲಯದಿಂದ ಹೊರಟ ಕಾಳಿಕಾಂಬ ದೇವಿ ಮತ್ತು ವಿಶ್ವಕರ್ಮರ ಭಾವಚಿತ್ರ ಹೊತ್ತ ಮೆರವಣಿಗೆಯು ಅದ್ದೂರಿಯಾಗಿ ನಡೆಯಿತು. 

ನಗರದ ಅಶೋಕ ರಸ್ತೆ, ಬಿ.ಹೆಚ್. ರಸ್ತೆ ಹಾಗೂ ಎಂ.ಜಿ. ರಸ್ತೆ ಮುಖೇನ ಸಾಗಿದ ಮೆರವಣಿಗೆಯು ಕಾರ್ಯಕ್ರಮ ನಡೆಯುವ ಎಂ.ಜಿ. ರಸ್ತೆಯ ಬಾಲಭವನ ತಲುಪಿತು. ಮೆರವಣಿಗೆಯುದ್ದಕ್ಕೂ ನಡೆದ ವಿವಿಧ ಜಾನಪದ ಕಲಾ ಮೇಳಗಳ ಪ್ರದರ್ಶನ ನೋಡುಗರ ಮನ ಸೆಳೆಯಿತು.  

ಈ ಸಂದರ್ಭ ಸಮುದಾಯದ ನಿಟ್ಟರಹಳ್ಳಿ ಮಠದ ನೀಲಕಂಠಾಚಾರ್ಯ ಸ್ವಾಮೀಜಿ, ಹಿರೇಮಠಾಧ್ಯಕ್ಷ ಡಾ. ಶ್ರೀ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‍ ಕುಮಾರ್. ಜಿ.ಪಂ. ಸಿಇಓ ಅನೀಸ್ ಕಣ್ಮಣಿ ಜಾಯ್, ಹೆಚ್ಚುವರಿ ಎಸ್ಸಿ ಡಾ.ಶೋಭರಾಣಿ, ಸಮಾಜದ ಮುಖಂಡರಾದ ಎಚ್.ಪಿ. ನಾಗರಾಜು, ಟಿ.ಹೆಚ್.ಆನಂದರಾಮು, ಪಿ.ಆರ್. ನರಸಿಂಹೂರ್ತಿ, ಪಿ.ವಿ.ಕೃಷ್ಣಮೂರ್ತಿ,ಎನ್.ವಿಶ್ವಮೂರ್ತಿ, ರವಿ, ವಿನಯಕುಮಾರ್, ಜಕಣಾಚಾರ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News