ಬಿಜೆಪಿಯಿಂದ ಬೆದರಿಕೆಯಿಲ್ಲ, ನನ್ನ ಹೇಳಿಕೆಗೆ ಅಮಿತ್ ಶಾ ಹೆಸರನ್ನು ಸಿಬಿಐ ಸೇರಿಸಿದೆ: ಸೊಹ್ರಾಬುದ್ದೀನ್ ಸೋದರ

Update: 2018-09-18 08:20 GMT

ಮುಂಬೈ, ಸೆ.18: “ಸಿಬಿಐ ಅಧಿಕಾರಿಯೊಬ್ಬರು 2010ರಲ್ಲಿ ದಾಖಲಿಸಿಕೊಂಡಿದ್ದ ನನ್ನ ಹೇಳಿಕೆಯಲ್ಲಿ ಗುಜರಾತ್ ಪೊಲೀಸ್ ಅಧಿಕಾರಿ ಅಭಯ್ ಚುಡಸಮ ಹಾಗೂ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರ ಹೆಸರುಗಳನ್ನು ಸಿಬಿಐ ತಾನಾಗಿಯೇ ಸೇರಿಸಿತ್ತು” ಎಂದು ಸೊಹ್ರಾಬುದ್ದೀನ್ ಶೇಖ್ ಅವರ ಕಿರಿಯ ಸಹೋದರ ನಯಾಮುದ್ದೀನ್ ವಿಶೇಷ ಸಿಬಿಐ ನ್ಯಾಯಾಲಯದ ಮುಂದೆ ಹೇಳಿದ್ದಾರೆ.

ನವೆಂಬರ್ 29, 2017ರಂದು ಪ್ರಾಸಿಕ್ಯೂಶನ್ ಪರ ಸಾಕ್ಷಿಯಾಗಿ ನ್ಯಾಯಾಲಯಕ್ಕೆ ಹಾಜರಾಗಬೇಕಿದ್ದ ನಯಾಮುದ್ದೀನ್ ಹಲವಾರು ಸಮನ್ಸ್ ಹಾಗೂ ಜಾಮೀನುರಹಿತ ವಾರಂಟ್ ಗಳ ತರುವಾಯ ಅಂತಿಮವಾಗಿ ಸೋಮವಾರ ಹಾಜರಾಗಿದ್ದಾರೆ. ಸಿಬಿಐ ಹಾಗೂ ಈ ಪ್ರಕರಣದಲ್ಲಿ ತಿರುಗಿಬಿದ್ದ ಸಾಕ್ಷಿಗಳ ವಿರುದ್ಧ ಎಫ್‍ಐಆರ್ ದಾಖಲಿಸುವಂತೆ ಅವರು ಮೌಖಿಕವಾಗಿ ನ್ಯಾಯಾಲಯವನ್ನು ಕೋರಿದ್ದಾರೆ. ಸಿಬಿಐ ಈ ಕೇಸನ್ನು ಹಾಳುಗೆಡಹಿದೆ ಎಂದೂ ಅವರು ಹೇಳಿದ್ದಾರೆ.

ನವೆಂಬರ್ 2005ರ ಘಟನಾವಳಿಗಳ ಬಗ್ಗೆ ನ್ಯಾಯಾಲಯದ ಮುಂದೆ ನಯಾಮುದ್ದೀನ್ ಹೇಳಿಕೊಂಡ ನಂತರ ಆತನ ವಿಚಾರಣೆ ಸಂಪೂರ್ಣಗೊಂಡಿದೆಯೆಂದು ವಿಶೇಷ ಸಾರ್ವಜನಿಕ ಅಭಿಯೋಜಕ ಬಿ.ಪಿ. ರಾಜು ಘೋಷಿಸಿದರು.

ಆದರೆ  ತನಗೆ ಇನ್ನೂ ಹೇಳಲಿದೆ ಎಂದ ನಯಾಮುದ್ದೀನ್ ``ನನಗೆ ಬಿಜೆಪಿಯಿಂದ ಬೆದರಿಕೆಯಿಲ್ಲ. ಅಝಂ ಖಾನ್ ಹೆಸರು ಕೇಳಿಯೇ ಇಲ್ಲ. ಸಿಬಿಐ ತನಿಖಾಧಿಕಾರಿ ದಾಗರ್ ಸಾಹೇಬ್ ನನ್ನ ಗ್ರಾಮಕ್ಕೆ ಆಟೋರಿಕ್ಷಾದಲ್ಲಿ ಬಂದು ಈ ಪ್ರಕರಣದ ಬಗ್ಗೆ ಕೇಳಿದರು. ಸೊಹ್ರಾಬುದ್ದೀನ್ ನ ಸಹವರ್ತಿ ಹಾಗೂ ಹಮೀದ್ ಲಾಲಾ ಕೊಲೆ ಪ್ರಕರಣದ ಸಹ ಆರೋಪಿ ಅಝಂ ನನ್ನನ್ನು ಭೇಟಿಯಾಗಿದ್ದ ಎಂದು ನಾನು ಆತನಿಗೆ  ಹೇಳಿಲ್ಲ. ಆದರೆ ಸೋದರನ ಸಾವಿನ ಪ್ರಕರಣದದ  ತನಿಖೆಗೆ ಸುಪ್ರೀಂ ಕೋರ್ಟಿನಲ್ಲಿ ದಾಖಲಾದ ಅಪೀಲನ್ನು ವಾಫಸ್ ಪಡೆಯಲು ಅಭಯ್ ಚುಡಸಮ ರೂ 50 ಲಕ್ಷ ಆಫರ್ ಮಾಡಿದ್ದರೆಂದು ಹೇಳಿದ್ದೆ'' ಎಂದಿದ್ದಾರೆ.

ತಾನು ತನ್ನ 2010ರ ಹೇಳಿಕೆಯಲ್ಲಿ ಹೇಳಿಲ್ಲದ ವಿಚಾರಗಳೂ ಸೇರಿಕೊಂಡಿವೆಯೆಂದು ಹಾಗೂ ತಾನು ಲಿಖಿತ ಅಫಿದಾವತ್ ನೀಡಿದ್ದಾಗಿಯೂ ನಯೀಮುದ್ದೀನ್ ಹೇಳಿದ್ದಾರೆ. ಪ್ರಕರಣದಲ್ಲಿ ದೋಷಮುಕ್ತಗೊಂಡಿದ್ದ ಚುಡಸಮ ನಯಾಮುದ್ದೀನ್ ನನ್ನು ಭೇಟಿಯಾಗಿ ಬೆದರಿಸಿದ್ದ ಎಂದು ಸಿಬಿಐ ಡಿವೈಎಸ್ಪಿ ಫೆಬ್ರವರಿ 19, 2010ರಂದು ದಾಖಲಿಸಿಕೊಂಡಿದ್ದ ನಯಾಮುದ್ದೀನ್ ಹೇಳಿಕೆ ತಿಳಿಸಿತ್ತು.

 “ನಾನು ಆತನಿಗೆ (ಚುಡಸಮ) ನಾವು ದೂರು ವಾಪಸ್ ಪಡೆಯುವುದಿಲ್ಲ ಎಂದು ಹೇಳಿದಾಗ ಆತ ನನ್ನನ್ನು ಬೆದರಿಸಿ ಸೊಹ್ರಾಬುದ್ದೀನ್ ಗ ಆದ ಗತಿಯೂ ನನಗಾಗುವುದು ಎಂದ. ಅಮಿತ್ ಭಾಯಿ ತುಂಬಾ ಸಿಟ್ಟಾಗಿದ್ದಾರೆಂದು ನಿನಗೆ ತಿಳಿದಿಲ್ಲ. ನಾನು ಅಮಿತ್ ಭಾಯಿ ಜತೆ ಮಾತನಾಡುತ್ತೇನೆ, ಅವರು ನಿನ್ನನ್ನು ಮಧ್ಯ ಪ್ರದೇಶದಲ್ಲಿಯೇ ಮುಗಿಯಸಬಹುದು, ಅಮಿತ್ ಭಾಯಿಯವರ ಸರಕಾರ ಅಲ್ಲಿದೆ ಅವರನ್ನು ಈ ಅಪೀಲಿನ ಭಾಗವಾಗಿಸಿದ್ದಲ್ಲದೆ ನಿನ್ನನ್ನು ಕೊಲ್ಲಲಾಗುವುದು'' ಎಂದು ನಯಾಮುದ್ದೀನ್ 2010ರಲ್ಲಿ ಹೇಳಿಕೆ ನೀಡಿದ್ದ ಎಂದು ಸಿಬಿಐ ತಿಳಿಸಿತ್ತು. ಆದರೆ ತನ್ನ ಹೇಳಿಕೆಯ ಈ ಭಾಗವನ್ನು ಸಿಬಿಐ ತಾನಾಗಿಯೇ ಸೇರಿಸಿದ. ತಾನು ಹಾಗೆ ಹೇಳಿಲ್ಲ ಎಂದು ನಯಾಮುದ್ದೀನ್ ಸೋಮವಾರ ಹೇಳಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News