65 ವರ್ಷ ಮೇಲ್ಪಟ್ಟವರಿಗೆ ಮಾಸಾಶನ ಹೆಚ್ಚಳ: ನ.1ರಿಂದ ಜಾರಿ

Update: 2018-09-18 12:19 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಸೆ.18: ಸಂಧ್ಯಾ ಸುರಕ್ಷಾ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ 65 ವರ್ಷ ಮೇಲ್ಪಟ್ಟವರಿಗೆ ನೀಡುತ್ತಿರುವ ಮಾಸಾಶನವನ್ನು 600 ರೂ.ನಿಂದ 1000 ರೂ.ಗೆ ಏರಿಸಿ ಸರಕಾರ ಆದೇಶ ಹೊರಡಿಸಿದ್ದು, ನ. 1ರಿಂದ ಈ ಆದೇಶ ಜಾರಿಯಾಗಲಿದೆ.

ಸಾಮಾಜಿಕ ಭದ್ರತಾ ಯೋಜನೆಗಳಾದ ಸಂಧ್ಯಾ ಸುರಕ್ಷಾ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಗಳಡಿ ಈಗಾಗಲೇ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳಿಗೆ ನ.1ರಿಂದ ಪರಿಷ್ಕೃತ ಮೊತ್ತ ವಿತರಿಸಲು ಖಜಾನೆ ನಿರ್ದೇಶನಾಲಯದ ನಿರ್ದೇಶಕರು ಮತ್ತು ಜಿಲ್ಲಾ ಖಜಾನಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ತಿಳಿದುಬಂದಿದೆ.

ಸಂಧ್ಯಾ ಸುರಕ್ಷಾ ಯೋಜನೆಯಡಿ ಫಲಾನುಭವಿಗಳು ಪಡೆಯುತ್ತಿರುವ 600 ರೂ. ಮಾಸಾಶನವನ್ನು ನ. 1ರಿಂದ 1000 ರೂ.ಗೆ ಹೆಚ್ಚಿಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜುಲೈನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಘೋಷಿಸಿದ್ದರು. ಅದರಂತೆ ಈ ಕುರಿತು ಆದೇಶ ಹೊರಡಿಸಲಾಗಿದ್ದು, ಈ ಸಂದರ್ಭದಲ್ಲಿ ಸಂಧ್ಯಾ ಸುರಕ್ಷಾ ಫಲಾನುಭವಿಗಳ ಜತೆಗೆ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯ ಫಲಾನುಭವಿಗಳಿಗೂ ಮಾಸಾಶನ ಹೆಚ್ಚಿಸಲು ತೀರ್ಮಾನಿಸಲಾಗಿದೆ.

ಪ್ರಸ್ತುತ ಸಂಧ್ಯಾ ಸುರಕ್ಷಾ ಯೋಜನೆಯಡಿ 65 ವರ್ಷ ಮೀರಿದವರಿಗೆ ಮಾಸಿಕ 600 ರೂ. ಮಾಸಾಶನ ನೀಡಲಾಗುತ್ತಿದೆ. ಅದು ಈಗ ಒಂದು ಸಾವಿರ ರೂ. ಆಗಲಿದೆ. ಆದರೆ, ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಯೋಜನೆಯಡಿ 60 ವರ್ಷ ಮೇಲ್ಪಟ್ಟವರಿಗೆ 600 ರೂ. ಮಾಸಾಶನ ನೀಡಲಾಗುತ್ತಿದೆ. ಇವರಲ್ಲಿ 60ರಿಂದ 64 ವರ್ಷ ವಯಸ್ಸಿನ ಫಲಾನುಭವಿಗಳಿಗೆ ಈಗಿರುವಂತೆ 600 ರೂ. ಮುಂದುವರಿಯಲಿದೆ. 65 ವರ್ಷ ಮೇಲ್ಪಟ್ಟವರಿಗೆ ಮಾತ್ರ ಒಂದು ಸಾವಿರ ರೂ. ಸಿಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News