ಪಕ್ಷ ಸೇರುವಂತೆ ಬಿಜೆಪಿ ಮುಖಂಡರಿಂದ ಆಮಿಷ: ಶಾಸಕ ರಾಜೇಗೌಡ ಆರೋಪ

Update: 2018-09-18 12:55 GMT

ಚಿಕ್ಕಮಗಳೂರು, ಸೆ.18: ರಾಜ್ಯದಲ್ಲಿ ಸದ್ಯ ತೀವ್ರ ಚರ್ಚೆ, ಕುತೂಹಲಕ್ಕೆ ಕಾರಣವಾಗಿರುವ ಆಪರೇಷನ್ ಕಮಲದ ರಾಜಕೀಯ ಬೆಳವಣಿಗೆಗೆಳ ಮಧ್ಯೆ ಶೃಂಗೇರಿ ಕ್ಷೇತ್ರ ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಸ್ಫೋಟಕ ಮಾಹಿತಿ ಹೊರ ಹಾಕಿದ್ದು, 'ನನಗೂ ಕೆಲವು ಬಿಜೆಪಿ ಮುಖಂಡರು ಪಕ್ಷಕ್ಕೆ ಸೇರುವಂತೆ ಕೋರಿದ್ದರು. ಇದಕ್ಕಾಗಿ ಬೃಹತ್ ಮೊತ್ತದ ಹಣದ ಆಮಿಷವೊಡ್ಡಲಾಗಿತ್ತು' ಎಂದು ಆರೋಪಿಸುವ ಮೂಲಕ ಬಿಜೆಪಿ ಮುಖಂಡರ ಆಪರೇಷನ್ ಕಮಲದ ಸಂಚನ್ನು ಬಯಲು ಮಾಡಿದ್ದಾರೆ. 

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ನಂಬಿರುವುದು ಕಾಂಗ್ರೆಸ್‍ನ ಜಾತ್ಯತೀತ ಸಿದ್ಧಾಂತ. ಈ ತತ್ವ ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ರಾಜಕೀಯಕ್ಕೆ ಬಂದವನು ನಾನು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಮ್ಮ ನಾಯಕರಾಗಿದ್ದು, ತಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್‍ ಪಕ್ಷ ಬಿಟ್ಟು ಬೇರೆ ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. 

ವಿಧಾನಪರಿಷತ್ ಚುನಾವಣೆ ಬಳಿಕ ಹಾಗೂ ನಂತರದಲ್ಲಿ ಶಿವಮೊಗ್ಗ ಮತ್ತು ಸಕಲೇಶಪುರದ ಕೆಲ ಬಿಜೆಪಿ ಮುಖಂಡರು ನಿರಂತರವಾಗಿ ತಮ್ಮ ಪಕ್ಷಕ್ಕೆ ಸೇರುವಂತೆ ಭಾರಿ ಮೊತ್ತದ ಹಣ ಮತ್ತು ಸಚಿವ ಸ್ಥಾನ ನೀಡುವುದಾಗಿ ಆಮಿಷ ಒಡ್ಡಿದ್ದರು ಎಂದು ಆರೋಪಿಸಿದ ಅವರು, ತಾನು ಹುಟ್ಟು ಕಾಂಗ್ರೆಸ್ಸಿಗ. ಕಾಂಗ್ರೆಸ್ ಪಕ್ಷದಿಂದಲೇ ತನ್ನ ರಾಜಕೀಯ ಜೀವನ ಆರಂಭವಾಗಿದೆ. ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ಮುಖಂಡರು ನೀಡಿದ ಆಫರ್ ಅನ್ನು ತಿರಸ್ಕಾರ ಮಾಡಿದ್ದೇನೆ ಎಂದು ಶಾಸಕ ರಾಜೇಗೌಡ ತಿಳಿದರು.

ಬಿಜೆಪಿ ಅವರು ನಡೆಸುತ್ತಿರುವ ಆಪರೇಷನ್ ಕಮಲಕ್ಕೆ ನೀಡುವ ಹಣ ಎಲ್ಲಿಂದ ಬರುತ್ತದೆ ಎಂಬುದನ್ನು ಬಿಜೆಪಿಯವರು ಸ್ಪಷ್ಟನೆ ನೀಡಬೇಕೆಂದ ಅವರು, ಈ ಹಣ ಭ್ರಷ್ಟಚಾರದ ಹಣ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಿಜೆಪಿಯವರು ನನ್ನನ್ನು ಕೂಡ ಚುನಾವಣೆ ನಂತರ ಮತ್ತು ಈಗಲೂ ಆಪರೇಷನ್ ಕಮಲಕ್ಕೆ ಒಳಪಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಪ್ರಾಮಾಣಿಕರು ಎಂದು ಹೇಳುವ ಬಿಜೆಪಿಗರು ಬೃಹತ್ ಮಟ್ಟದ ಆಮಿಷವನ್ನು ನನಗೆ ಒಡ್ಡಿದ್ದರು. ಯಾವ ಸ್ಥಾನಮಾನ, ಎಷ್ಟೇ ಹಣ ನೀಡುತ್ತೇವೆ ಎಂದರೂ ನಾನು ಕಾಂಗ್ರೆಸ್ ತೊರೆದು ಬಿಜೆಪಿ ಸೇರುವ ಜಾಯಮಾನದವನಲ್ಲ. ನಾನೆಂದಿಗೂ ಆಪರೇಷನ್ ಕಮಲಕ್ಕೆ ಒಳಗಾಗುವುದಿಲ್ಲ, ಕಾಂಗ್ರೆಸ್ ಪಕ್ಷವನ್ನು ಬಿಡುವ ಪ್ರಶ್ನೆಯೇ ಇಲ್ಲ ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News