"ಬಡವರ ಬಂಧು" ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಜಾರಿ

Update: 2018-09-18 13:02 GMT

ಬೆಂಗಳೂರು, ಸೆ.18: ಬೀದಿ ಬದಿ ವ್ಯಾಪಾರಿಗಳನ್ನು ಮೀಟರ್ ಬಡ್ಡಿ ದಂಧೆಕೋರರಿಂದ ರಕ್ಷಿಸುವ ಸಲುವಾಗಿ ರೂಪಗೊಂಡಿರುವ ಬಡವರ ಬಂಧು ಯೋಜನೆಯನ್ನು ಎಲ್ಲ ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಜಾರಿಗೆ ತರಲು ಸರಕಾರ ನಿರ್ಧರಿಸಿದೆ. 

ಪ್ರಥಮ ಹಂತದಲ್ಲಿ ಬೆಂಗಳೂರು, ಮೈಸೂರು, ಬೀದರ್, ಹಾಸನ, ಹುಬ್ಬಳ್ಳಿಯಲ್ಲಿ ಜಾರಿ ಮಾಡಲು ಸರಕಾರ ಮುಂದಾಗಿತ್ತು. ಆದರೆ, ಇದೀಗ ಎಲ್ಲ ಜಿಲ್ಲೆಗಳಲ್ಲಿ ಒಂದೇ ಸಮಯದಲ್ಲಿ ಜಾರಿ ಮಾಡಲು ಯೋಜನೆ ರೂಪಿಸಲಾಗುತ್ತದೆ. ರಾಜ್ಯಾದ್ಯಂತ ಒಂದೇ ಸಮಯದಲ್ಲಿ ಯೋಜನೆ ಅನುಷ್ಠಾನ ಮಾಡಲು ತಯಾರಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಜಾರಿಗೆ ಇನ್ನೂ ಸ್ವಲ್ಪ ಸಮಯಾವಕಾಶದ ಅಗತ್ಯವಿದೆ ಎಂದು ಹೇಳಲಾಗುತ್ತಿದೆ.

ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಯಶವಂತಪುರ ಮಾರುಕಟ್ಟೆಯಲ್ಲಿ ಸಣ್ಣ ವ್ಯಾಪಾರಿಗಳ ಸಮಸ್ಯೆ ಆಲಿಸಿದ ನಂತರ ಸಿಎಂ ಕುಮಾರಸ್ವಾಮಿಗೆ ನೀಡಿರುವ ವರದಿ ಆಧಾರದಲ್ಲಿ ರಾಜ್ಯಾದ್ಯಂತ ಏಕಕಾಲಕ್ಕೆ ಯೋಜನೆಯನ್ನು ಜಾರಿ ಮಾಡಲು ನಿರ್ಧರಿಸಲಾಗಿದೆ ಎಂದು ಸಿಎಂ ಕಚೇರಿ ಮೂಲಗಳು ಮಾಹಿತಿ ನೀಡಿವೆ.

ಕನ್ನಡ ರಾಜ್ಯೋತ್ಸವಕ್ಕೆ ಕೊಡುಗೆ: ರಾಜ್ಯಾದ್ಯಂತ ಮೀಟರ್ ದಂಧೆಕೋರರಿಂದ ತಪ್ಪಿಸಲು ಗಣೇಶ ಚತುರ್ಥಿ ಕೊಡುಗೆಯಾಗಿ ಈ ಯೋಜನೆ ರೂಪುಗೊಂಡಿತ್ತು. ಆದರೆ, ಎಲ್ಲ ಜಿಲ್ಲೆಗಳಲ್ಲಿಯೂ ಏಕಕಾಲದಲ್ಲಿ ಯೋಜನೆ ಜಾರಿ ಮಾಡುವ ಉದ್ದೇಶವಿರುವದರಿಂದ ಕನ್ನಡ ರಾಜ್ಯೋತ್ಸವಕ್ಕೆ ಯೋಜನೆ ಜಾರಿಯಾಗಲಿದೆ ಎಂದು ತಿಳಿದುಬಂದಿದೆ.

43 ಮೊಬೈಲ್ ಎಟಿಎಂ: ವ್ಯಾಪಾರಿಗಳಿಗೆ ಸಾಲ ಸೌಲಭ್ಯ ನೀಡುವ ಉದ್ದೇಶದಿಂದ ವಿವಿಧ ಕಡೆಗಳಲ್ಲಿ 43 ಮೊಬೈಲ್ ಎಟಿಎಂಗಳನ್ನು ಸ್ಥಾಪಿಸಲಾಗುತ್ತಿದೆ. ಅದರಲ್ಲಿ ಪ್ರತಿ ಜಿಲ್ಲಾ ಕೇಂದ್ರಕ್ಕೊಂದು ಎಂಟಿಎಂ ಇರುತ್ತದೆ. ಬೆಂಗಳೂರು ನಗರ, ಮೈಸೂರು, ಮಂಗಳೂರು, ಹುಬ್ಬಳ್ಳಿಯಲ್ಲಿ ಎರಡು ಅಥವಾ ಮೂರು ಎಟಿಎಂಗಳು ಕಾರ್ಯನಿರ್ವಹಿಸಲಿವೆ.

ಬ್ಯಾಂಕ್‌ಗಳೊಂದಿಗೆ ಒಪ್ಪಂದ: ಸಾಲ ಕೊಡುವುದಕ್ಕೆ ಸಂಬಂಧಪಟ್ಟಂತೆ ಆಯಾ ಪ್ರದೇಶದ ಸಹಕಾರ ಬ್ಯಾಂಕ್‌ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುತ್ತದೆ. ವ್ಯಾಪಾರಿಗಳಿಗೆ ನಿತ್ಯ ವ್ಯವಹಾರಕ್ಕೆ ಹಣ ನೀಡಿ ಕಡಿಮೆ ಬಡ್ಡಿ ವಿಧಿಸಲಾಗುತ್ತದೆ. ಬಡ್ಡಿ ದಂಧೆಕೊರರು ಬಡ್ಡಿ, ಮೀಟರ್ ಬಡ್ಡಿ, ಚಕ್ರ ಬಡ್ಡಿ ಎಂದು ಶೊಷಣೆ ಮಾಡುವುದು ತಪ್ಪಲಿದೆ. ಬೆಂಗಳೂರು ನಗರದಲ್ಲಿಯೇ ದಿನನಿತ್ಯ ಐದು ಕೋಟಿ ರೂ.ಗಳಷ್ಟು ವಹಿವಾಟು ನಡೆಯುತ್ತದೆ ಎಂದು ಅಂದಾಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News