ಬಿಜೆಪಿಯಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯ: ಕೇಂದ್ರ ಸಚಿವ ಜಿಗಜಿಣಗಿ

Update: 2018-09-18 16:04 GMT

ವಿಜಯಪುರ, ಸೆ. 18: ರಾಜ್ಯದಲ್ಲಿ ದಲಿತರು ಖಂಡಿತ ಮುಖ್ಯಮಂತ್ರಿಯಾಗಲಿದ್ದು, ಬಿಜೆಪಿಯಲ್ಲಿ ಮಾತ್ರ ದಲಿತರು ಮುಖ್ಯಮಂತ್ರಿ ಆಗಲು ಸಾಧ್ಯ ಎಂದು ಕೇಂದ್ರ ಸಚಿವ ರಮೇಶ್ ಜಿಗಜಿಣಗಿ ಇಂದಿಲ್ಲಿ ಹೇಳಿದ್ದಾರೆ.

ಮಂಗಳವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಲಿತರ ಪಾಳಿ ಬಂದ ಮೇಲೆ ಮುಖ್ಯಮಂತ್ರಿಯಾಗಲಿದ್ದಾರೆ. ಈಗ ಆಗದಿದ್ದರೆ ಮುಂದಿನ 20 ವರ್ಷಗಳಲ್ಲಿ ದಲಿತರು ರಾಜ್ಯ ಮುಖ್ಯಮಂತ್ರಿ ಆಗುವುದು ನಿಶ್ಚಿತ. ಲಗ್ನದಲ್ಲಿ ದಲಿತರಿಗೆ ಕಡೆಯದಾಗಿ ಊಟ ಹಾಕಿಸುವಂತೆ ದಲಿತರಿಗೂ ಸಿಎಂ ಆಗುವ ಕಾಲ ಬಂದೇ ಬರಲಿದೆ ಎಂದರು.

ಲೋಕಸಭೆ ಚುನಾವಣೆಯಲಿ ನನಗೆ ಟಿಕೆಟ್ ನೀಡದಿದ್ದರೆ ಬಹಳ ಸಂತೋಷ. ಪಕ್ಷ ಯಾರಿಗೆ ಟಿಕೆಟ್ ನೀಡುತ್ತದೋ ಅವರಿಗೆ 10 ರೂ.ನೀಡಿ ಅವರ ಪರ ಪ್ರಚಾರ ಮಾಡುತ್ತೇನೆ. ಎಂಪಿ ಎನ್ನುವುದು ನನ್ನ, ನನ್ನ ಕುಟುಂಬದ, ನಮ್ಮ ಅಜ್ಜನ ಆಸ್ತಿಯಲ್ಲ. ಪಕ್ಷ ಟಿಕೆಟ್ ನೀಡಿದ ವ್ಯಕ್ತಿಯನ್ನು ಜನತೆ ಆಯ್ಕೆ ಮಾಡಲಿದ್ದಾರೆ ಎಂದರು.

ನನಗೆ ಟಿಕೆಟ್ ಸಿಗದಿದ್ದರೆ ನನ್ನ ಸಂಸಾರವೇನು ಮುಳುಗುವುದಿಲ್ಲ. ದೇಶವೂ ಮುಳುಗುವುದಿಲ್ಲ. ನಾನು ವಿಚಿತ್ರ ಮನುಷ್ಯ. ಅಧಿಕಾರದ ಆಸೆ ಇಲ್ಲ. ಬಂದರೆ ಬಂತು. ಹೋದರೆ ಹೋಯ್ತು. ಬಂದರೆ ಚಾರಾಣೆ. ಹೋದರೆ ಬಾರಾಣೆ ಅಷ್ಟೇ. ನಾನು ಬೇರೆ ಪಕ್ಷಕ್ಕೆ ನಿಲ್ಲುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಪ್ರಧಾನಿಯಾಗುವ ಕನಸು ಕಾಣುತ್ತಿದ್ದಾರೆ. ಅವರು ಪ್ರಧಾನಿಯನ್ನು ಭಾರತದಲ್ಲಿ ಟೀಕೆ ಮಾಡಲಿ. ಆದರೆ, ವಿದೇಶದಲ್ಲಿ ಭಾರತದ ಪ್ರಧಾನಿಯನ್ನು ಬಯ್ಯುವುದು ಸರಿಯಲ್ಲ ಎಂದು ಅವರು ಇದೇ ವೇಳೆ ಅಸಮಾಧಾನ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News