ದಾವಣಗೆರೆ: ಜನ ಸಂಪರ್ಕ ಸಭೆಗೆ ಸಂಸದ ಜಿ.ಎಂ.ಸಿದ್ದೇಶ್ವರ್ ಚಾಲನೆ

Update: 2018-09-18 16:38 GMT

ದಾವಣಗೆರೆ,ಸೆ.18: ಸರ್ಕಾರದ ವಿವಿಧ ಸೌಲಭ್ಯ ಪಡೆಯುವಲ್ಲಿ ಯಾವುದೇ ತೊಂದರೆ, ಅನ್ಯಾಯಗಳಾಗಿದ್ದಲ್ಲಿ ಜನಸಾಮಾನ್ಯರು ಈ ಜನ ಸಂಪರ್ಕ ಸಭೆಯಲ್ಲಿ ತಿಳಿಸಿ ಸಂಬಂಧಿಸಿದ ಅಧಿಕಾರಿಗಳಿಂದ ಸಮರ್ಪಕ ಪರಿಹಾರ ಕಂಡುಕೊಳ್ಳಬಹುದೆಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.

ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಹೋಬಳಿಯಲ್ಲಿ ಮಂಗಳವಾರ ಏರ್ಪಡಿಸಿದ್ದ  ಜನ ಸಂಪರ್ಕ ಸಭೆಗೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಜನಸಂಪರ್ಕ ಸಭೆಯಲ್ಲಿ ಜನರ ಅಹವಾಲುಗಳನ್ನು ಸ್ವೀಕರಿಸಿ ಸ್ಥಳದಲ್ಲೇ ಇತ್ಯರ್ಥಪಡಿಸುವ ಪ್ರಯತ್ನ ಮಾಡಲಾಗುವುದು. ಸಭೆಯಲ್ಲಿ ತಾಲೂಕು ಮಟ್ಟದ ಅಧಿಕಾರಿಗಳು, ಉಪ ವಿಭಾಗಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಜನಪ್ರತಿನಿಧಿಗಳು ಲಭ್ಯವಿದ್ದು ಸ್ಥಳದಲ್ಲೇ ಅರ್ಜಿಗಳ ಮಂಜೂರಾತಿ ಅಥವಾ ಪರ್ಯಾಯ ಉತ್ತರ ಕಂಡುಕೊಳ್ಳಬಹುದಾಗಿದ್ದು ಸಾರ್ವಜನಿಕರು ಇಂತಹ ಸಭೆಯ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು. 

ಜಿಲ್ಲೆಯ ಹರಿಹರ ಮತ್ತು ಹರಪನಹಳ್ಳಿ ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿದ್ದು, ಚನ್ನಗಿರಿ, ಜಗಳೂರು ಮತ್ತು ದಾವಣಗೆರೆ ತಾಲೂಕುಗಳಲ್ಲಿಯೂ ಶೇ. 25ಕ್ಕಿಂತ ಕಡಿಮೆ ಫಸಲು ಇರುವ ಕಾರಣ ಜಿಲ್ಲಾಧಿಕಾರಿಗಳು ಈ ತಾಲೂಕುಗಳನ್ನೂ ಬರಪೀಡಿತವೆಂದು ಘೋಷಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದರು.

ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿ, ಬಡಜನರು, ಜನಸಾಮಾನ್ಯರಿಗೆ ಅನುಕೂಲವಾಗುವಂತಹ ಹಲವಾರು ಯೋಜನೆಗಳನ್ನು ಸರ್ಕಾರ ಹಾಕಿಕೊಂಡಿದೆ. ಜಿಲ್ಲಾಧಿಕಾರಿಗಳು, ಜಿಪಂ ಸಿಇಓ ಇವರ ಆದೇಶದ ಮೇರೆಗೆ ತಾಲ್ಲೂಕು ಮಟ್ಟದ ಅಧಿಕಾರಿಗಳ ಪರಿಶ್ರಮದಿಂದ ಈ ಸಭೆ ಇಂದು ಜರುಗುತ್ತಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ ಸೌಲಭ್ಯಗಳನು ಒದಗಿಸಲು ವಿವಿಧ ಯೋಜನೆಗಳನ್ನು ರೂಪಿಸಲಾಗಿದ್ದು, ಜನರು ಈ ಯೋಜನೆಗಳ ಸದುಪಯೋಗ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.  

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಮಾತನಾಡಿ, ಸರ್ಕಾರ ಜನಸಾಮಾನ್ಯ ಅಭಿವೃದ್ಧಿ ಮತ್ತು ಭದ್ರತೆಗಾಗಿ ನಿರಂತರವಾಗಿ ವಿವಿಧ ಯೋಜನೆಗಳೊಂದಿಗೆ ಸಾಮಾಜಿಕ ಭದ್ರತೆ ಯೋಜನೆಗಳಾದ ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ವೇತನ, ಸಂಧ್ಯಾ ಸುರಕ್ಷಾ, ನಿರ್ಗತಿಕ ವಿಧವೆಯರಿಗೆ ವೇತನ, ಉಜ್ವಲ ಯೋಜನೆ, ಬಸವ ವಸತಿ, ವಿಕಲಚೇತನರಿಗೆ ಸೌಲಭ್ಯ, ಅಂತರ್ಜಾತಿ ವಿವಾಹಿತ ಫಲಾನುಭವಿಗಳು, ಭಾಗ್ಯಲಕ್ಷ್ಮಿ, ಪ್ರಧಾನ ಮಂತ್ರಿ ಮಾತೃ ವಂದನಾ ಸೇರಿದಂತೆ ವಿವಿಧ ಯೋಜನೆಗಳ ಸುಮಾರು 686 ಫಲಾನುಭವಿಗಳಿಗೆ ಇಂದು ಸೌಲಭ್ಯ ವಿತರಣೆ ಮಾಡಲಾಗುತ್ತಿದೆ. ಇಂತಹ ಕಾರ್ಯಕ್ರಮದ ಸದ್ಬಳಕೆ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.

ಜಿ ಪಂ ಸಿಇಓ ಎಸ್ ಅಶ್ವತಿ, ಜಿ ಪಂ ಸದಸ್ಯರಾದ  ಪಿ.ವಾಗೀಶ್, ತಾಪಂ ಅಧ್ಯಕ್ಷೆ ರೂಪಾ ಶ್ರೀಧರ್, ತಾಪಂ ಸದಸ್ಯರಾದ ಸುಜಾತ ಇ.ಆರ್.ಬಸವರಾಜು, ಪ್ರಕಾಶ್ ಡಿ.ಆರ್, ಚಂದ್ರಮ್ಮ ರುದ್ರಪ್ಪ, ಶಿವಗಂಗಮ್ಮ, ವೀಣಾಕುಮಾರಿ, ಕೆ.ಜಿ.ದೇವೇಂದ್ರಪ್ಪ, ದಾವಣಗೆರೆ ಉಪವಿಭಾಗಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಚನ್ನಗಿರಿ ತಾಲ್ಲೂಕು ತಹಶೀಲ್ದಾರ್ ಎನ್.ಜೆ.ನಾಗರಾಜ್ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News