ಸೆ.23 ರಂದು ಹೈಫಾ ಯುದ್ಧ ಶತಮಾನೋತ್ಸವ ಸಂಭ್ರಮಾಚರಣೆ: ಯದುವೀರ್

Update: 2018-09-18 17:33 GMT

ಮೈಸೂರು,ಸೆ.18: ಹೈಫಾ ಯುದ್ಧದ ಶತಮಾನೋತ್ಸವ ಸಂಭ್ರಮಾಚರಣೆಯನ್ನು ಸೆ.23ರಂದು ರಾಜೇಂದ್ರ ಕಲಾಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ರಾಜವಂಶಸ್ಥ ಯದುವೀರ ಕೃಷ್ಣರಾಜದತ್ತ ಚಾಮರಾಜ ಒಡೆಯರ್ ಅವರು ತಿಳಿಸಿದರು.

ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಓಟಂ ಸಂಸ್ಥಾನದ ವಿರುದ್ಧ ಇಸ್ರೇಲ್ ನಡೆಸಿದ ಯುದ್ಧದಲ್ಲಿ ಮೈಸೂರು, ಜೋಧಪುರ ಹಾಗೂ ಹೈದ್ರಾಬಾದ್ ಸಂಸ್ಥಾನದ ಸೈನಿಕರು ಭಾಗಿಯಾಗಿದ್ದರು. ಆ ಯುದ್ಧದಲ್ಲಿ 1918ರ ಸೆ.23ರಂದು ಆಟೋಮಾನ್ ಟರ್ಕರ್ ನ ಓಟಂ ಅನ್ನು ಹೀನಾಯವಾಗಿ ಸೋಲಿಸುವ ಮೂಲಕ ಇಸ್ರೇಲ್ ನಲ್ಲಿ ವಿಜಯ ಪತಾಕೆಯನ್ನು ಹಾರಿಸಿದ್ದರು ಎಂದು ಇತಿಹಾಸವನ್ನು ಸ್ಮರಿಸಿದರು.

ಇದರ ಸ್ಮರಣಾರ್ಥ ಅಂದು ಸಂಜೆ 6 ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ವಹಿಸಲಿದ್ದು, ಸಂಸದರಾದ ಧ್ರುವನಾರಾಯಣ್, ಪ್ರತಾಪ್ ಸಿಂಹ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.    

ಹೈಫಾ ಯುದ್ಧ ಶತಮಾನೋತ್ಸವ ಸ್ಮರಣಾರ್ಥ ನಗರದಲ್ಲಿ 'ಹುತಾತ್ಮ ಯೋಧರ ಸ್ಮಾರಕ' ಹಾಗೂ ಮ್ಯೂಸಿಯಂ ಸ್ಥಾಪನೆಯಾಗಬೇಕಿದ್ದು ಈ ಬಗ್ಗೆ ಸರ್ಕಾರ ಗಮನಹರಿಸಬೇಕೆಂದು ಕೋರಿದರು.

ಸಾಂಪ್ರದಾಯಿಕ ದಸರಾ: ಸರ್ಕಾರದ ಆಚರಣೆ ಹೊರತುಪಡಿಸಿ ಅರಮನೆಯಲ್ಲಿ ಎಂದಿನಂತೆ ಸಾಂಪ್ರದಾಯಿಕ ದಸರಾ ಆಚರಣೆ ನಡೆಯಲಿದ್ದು, ಎಲ್ಲಾ ಪೂಜಾ ಕೈಂಕರ್ಯಗಳು ಯಥಾರೀತಿಯಲ್ಲಿ ಜರುಗಲಿವೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಶತಮಾನೋತ್ಸವ ಕಮಿಟಿಯ ಸಿ.ಎ.ವಿಶ್ವನಾಥ್ ಅವರು ಮಾತನಾಡಿ, ಯುದ್ಧದಲ್ಲಿ ಭಾಗಿಯಾಗಿದ್ದ ಸೈನಿಕರ ಕುಟುಂಬಗಳನ್ನು ಸನ್ಮಾನಿಸಲಿದ್ದು, 5 ಕುಟುಂಬಗಳು ಪತ್ತೆಯಾಗಿವೆ. ಅಲ್ಲದೇ ಈ ಯುದ್ಧದ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಪ್ರತಿ ಶಾಲಾ ಕಾಲೇಜುಗಳಲ್ಲಿ ನಡೆಸಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಚರ್ಚಾ ಹಾಗೂ ಪ್ರಬಂಧ ಸ್ಪರ್ಧೆಗಳನ್ನು ಜರುಗಿಸಲಾಗುವುದು ಎಂದರು.

ಪತ್ರಿಕಾಗೋಷ್ಠಿಯಲ್ಲಿ ಹರೀಶ್ ಶೆಣೈ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News