ಶಿವಮೊಗ್ಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಆಶಾ ಕಾರ್ಯಕರ್ತೆಯರ ಧರಣಿ

Update: 2018-09-18 17:49 GMT

ಶಿವಮೊಗ್ಗ, ಸೆ.18: ಬಾಕಿ ಉಳಿಸಿಕೊಂಡಿರುವ ವೇತನ ಬಿಡುಗಡೆ ಮಾಡುವಂತೆ ಆಗ್ರಹಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ, ಆಶಾ ಕಾರ್ಯಕರ್ತೆಯರು ಮಂಗಳವಾರ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಎಐಯುಟಿಯುಸಿ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಂತರ ಜಿಲ್ಲಾಧಿಕಾರಿ ಡಾ. ಕೆ.ಎ. ದಯಾನಂದ್‍ಗೆ ಮನವಿ ಪತ್ರ ಅರ್ಪಿಸಿದರು. 

ರಾಜ್ಯದ ಆರೋಗ್ಯ ಇಲಾಖೆಯಡಿ ಗ್ರಾಮೀಣ ಹಾಗೂ ನಗರ-ಪಟ್ಟಣದ ಕೊಳಚೆ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ಆರೋಗ್ಯ ಸಂಬಂಧಿತ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದಾರೆ. ಚಿಕಿತ್ಸೆ ಅಗತ್ಯವಿರುವ ಮಹಿಳೆಯರನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುತ್ತಿದ್ದಾರೆ. ಹಾಗೆಯೇ ಕೇಂದ್ರ - ರಾಜ್ಯ ಸರ್ಕಾರಗಳ ಹತ್ತು ಹಲವು ಜನಪರ ಕಾರ್ಯಕ್ರಮಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವ ಹಾಗೂ ಜಾಗೃತಿ ಮೂಡಿಸುವ ಕೆಲಸ ನಡೆಸಿಕೊಂಡು ಬರುತ್ತಿದ್ದಾರೆ. ಆದರೆ ಕೆಲಸಕ್ಕೆ ತಕ್ಕಂತೆ ವೇತನ, ಸೌಲಭ್ಯಗಳು ದೊರಕುತ್ತಿಲ್ಲ. ಅಗತ್ಯ ವಸ್ತುಗಳು ಗಗನಕ್ಕೇರಿವೆ. ಜೀವನ ನಡೆಸುವುದೇ ದುಸ್ತರವಾಗಿ ಪರಿಣಮಿಸಿದೆ. ಇಂತಹ ಸಂದರ್ಭದಲ್ಲಿ ಕಾರ್ಯಕರ್ತೆಯರಿಗೆ ಮಾಸಿಕವಾಗಿ ನೀಡಲಾಗುತ್ತಿರುವ 3500 ರೂ. ಯಾವುದಕ್ಕೂ ಸಾಲುತ್ತಿಲ್ಲ ಎಂದು ಪ್ರತಿಭಟನಾಕಾರರು ತಮ್ಮ ಅಳಲು ತೋಡಿಕೊಂಡಿದ್ದಾರೆ. 

ಕಳೆದ ಏಳೆಂಟು ತಿಂಗಳಿನಿಂದಲೂ ಕಾರ್ಯಕರ್ತೆಯರಿಗೆ ವೇತನ ಬಿಡುಗಡೆ ಮಾಡಿಲ್ಲ. ಈ ಕುರಿತಂತೆ ಸಂಬಂಧಿಸಿದ ಇಲಾಖೆಗಳಿಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಅಧಿಕಾರಿಗಳು ಸ್ಪಷ್ಟ ಮಾಹಿತಿ ನೀಡುತ್ತಿಲ್ಲ. ವೇತನವಿಲ್ಲದೆ ಕುಟುಂಬ ನಿರ್ವಹಣೆ ಮಾಡುವುದೇ ದುಸ್ತರವಾಗಿ ಪರಿಣಮಿಸಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. 

ಬೇಡಿಕೆಗಳು: ಆಶಾ ಕಾರ್ಯಕರ್ತೆಯರು ನಿರ್ವಹಿಸುವ ಎಲ್ಲ ಕೆಲಸಕಾರ್ಯಗಳಿಗೂ ಪ್ರತ್ಯೇಕ ಪ್ರೋತ್ಸಾಹ ಧನ ನಿಗದಿಗೊಳಿಸಬೇಕು. ವೇತನ ಬಿಡುಗಡೆ ಮಾಡುವ ವೇಳೆ ಅದು ಯಾವ ತಿಂಗಳ ವೇತನ ಎಂಬುವುದನ್ನು ನಮೂದಿಸಬೇಕು. ಹುದ್ದೆ ಖಾಯಂಗೊಳಿಸಬೇಕು. ಖಾಯಂ ನೌಕರರಿಗೆ ನೀಡುವ ಎಲ್ಲ ರೀತಿಯ ವೇತನ, ಸೌಲಭ್ಯ ಕಲ್ಪಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ. 

ಪ್ರತಿಭಟನೆಯಲ್ಲಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ಜಿಲ್ಲಾ ಗೌರವಾಧ್ಯಕ್ಷ ಮಂಜುನಾಥ ಕುಕ್ಕವಾಡ, ಜಿಲ್ಲಾಧ್ಯಕ್ಷೆ ರಾಜೇಶ್ವರಿ, ಜಿಲ್ಲಾ ಕಾರ್ಯದರ್ಶಿ ಪ್ರೇಮ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News