ಕ್ರೀಡಾಪಟುಗಳ ಶಿಸ್ತನ್ನು ಕಂಡಾಗ ಸೈನಿಕರ ಶಿಸ್ತು ಕಂಡಂತಾಗುತ್ತದೆ: ಸಚಿವ ಜಿ.ಟಿ. ದೇವೇಗೌಡ

Update: 2018-09-18 18:25 GMT

ಮಂಡ್ಯ,ಸೆ.18: ಕ್ರೀಡಾಪಟುಗಳ ಶಿಸ್ತನ್ನು ಕಂಡಾಗ ಸೈನಿಕ ಶಿಸ್ತನ್ನು ಕಂಡಷ್ಟು ಗೌರವ ಭಾವನೆ ಮೂಡುತ್ತದೆ. ಇಂದು ಹಳ್ಳಿಗಾಡಿನ ಮಕ್ಕಳು ಶಿಕ್ಷಣದ ಜೊತೆಗೆ ಕ್ರೀಡೆಯಲ್ಲಿ ಹೆಸರು ಮಾಡುತ್ತಿರುವುದು ಉತ್ತಮ ಬೆಳವಣಿಗೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಮೆಚ್ಚುಗೆ ವ್ಯಕ್ತಪಡಿಸಿದರು.

ಮಂಗಳವಾರ ನಾಗಮಂಗಲ ತಾಲೂಕಿನ ಆದಿಚುಂಚನಗಿರಿ ಬಿಜಿಎಸ್ ಕ್ರೀಡಾಂಗಣದಲ್ಲಿ ಆದಿಚುಂಚನಗಿರಿ ಕಲಾ,ವಾಣಿಜ್ಯ ಮತ್ತು ವಿಜ್ಞಾನ ಕಾಲೇಜು ವತಿಯಿಂದ ಆಯೋಜಿಸಿದ್ದ ಮೈಸೂರು ವಿವಿ ಅಂತರ ಕಾಲೇಜು ಅಥ್ಲೆಟಿಕ್ಸ್ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಭಾಗವಹಿಸುವುದು ಮುಖ್ಯವೇ ಹೊರತು, ಸೋಲು ಅಥವಾ ಗೆಲುವು ಮುಖ್ಯವಲ್ಲ ಎಂದು ಅಭಿಪ್ರಾಯಿಸಿದರು.

ದೇಹ ಮತ್ತು ಮನಸ್ಸು ಪ್ರಶಾಂತ ಮತ್ತು ಸದೃಢವಾಗಿರಲು ಕ್ರೀಡೆ ಅತ್ಯಾವಶ್ಯಕವಾಗಿದ್ದು, ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಇಂದಿನ ಅವಶ್ಯಕತೆಗಳಲ್ಲಿ ಒಂದಾಗಿದೆ. ಇದರಿಂದ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯ ಉತ್ತಮವಾಗಿರುತ್ತದೆ. ಕ್ರೀಡೆಯಲ್ಲಿ ಪಾಲ್ಗೊಂಡಾಗ ನಿಯಮಗಳನ್ನು ಪಾಲಿಸಿ, ಶಿಸ್ತನ್ನು ರೂಢಿಸಿಕೊಳ್ಳುವುದು ಬಹಳ ಮುಖ್ಯ. ವಿಶ್ವವಿದ್ಯಾನಿಲಯಕ್ಕೆ, ಗುರುಗಳಿಗೆ ಹಾಗೂ ನಾಡಿಗೆ ಕೀರ್ತಿ ತರುವಂತಹ ಕೆಲಸ ಮಾಡಿ, ಆ ಮೂಲಕ ದೇಶದ ಉತ್ತಮ ಪ್ರಜೆಗಳಾಗಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಿ ಎಂದು ಸಲಹೆ ನೀಡಿದರು.

ಶಿಕ್ಷಕ, ವೈದ್ಯ ಮತ್ತು ಕೃಷಿಕ ಸಮೃಧ್ದವಾಗಿದ್ದಾಗ ದೇಶ ಸಮೃದ್ದವಾಗಿರುತ್ತದೆ. ಹಾಗಾಗಿ ಈ ಮೂರು ಕ್ಷೇತ್ರಗಳು ಸಮೃದ್ದವಾಗಿರುವಂತೆ ನೋಡಿಕೊಳ್ಳಬೇಕಾದ ಹೊಣೆ ನಮ್ಮ ಮೇಲಿದೆ ಎಂದು ಹೇಳಿದರು. ರಾಜ್ಯದ 412 ಪ್ರಥಮ ದರ್ಜೆ ಕಾಲೇಜುಗಳಿಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು 600 ಕೋಟಿ ರೂ. ವೆಚ್ಚದ ಯೋಜನೆಯನ್ನು ತಯಾರು ಮಾಡಲಾಗಿದೆ ಎಂದರು.

ಭೈರವೈಕ್ಯ ಬಾಲಗಂಗಾಧರನಾಥ ಸ್ವಾಮೀಜಿಗಳು ಕಂಡಂತ ಕನಸನ್ನು ನನಸು ಮಾಡಿದವರು ಈಗಿನ ಪೀಠಾಧ್ಯಕ್ಷ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಅವರು ಎಂದು ಬಣ್ಣಿಸಿದರು. ಅಪಾರವಾದ ವಿದ್ವತ್‍ನ್ನು ಪಡೆದು, ಎಲ್ಲಾ ಜನಾಂಗದ ಮಠಗಳಿಗೆ ಗುರುಗಳನ್ನು ತಯಾರು ಮಾಡಿದ ಕೀರ್ತಿ ಆದಿಚುಂಚನಗಿರಿ ಮಠಕ್ಕೆ ಸಲ್ಲುತ್ತದೆ ಎಂದರು.

ಅಂತರರಾಷ್ಟ್ರೀಯ ಓಟಗಾರ್ತಿ ಜಿ.ಕೆ. ವಿಜಯಕುಮಾರಿ ದ್ವಜಾರೋಹಣ ಮಾಡಿ ಮಾತನಾಡಿ, ಕ್ರೀಡೆಗಳಿಂದ ಸಾಕಷ್ಟು ಅನುಕೂಲಗಳಿವೆ. ನಾನು ಹಳ್ಳಿಗಾಡಿನಿಂದ ಬಂದವಳು. ಯಾವುದಕ್ಕೂ ಅಂಜದೆ ಮುನ್ನುಗ್ಗಿ ಯಶಸ್ಸು ನಿಮ್ಮ ಹಿಂದೆ ಇರುತ್ತದೆ. ಕ್ರೀಡೆಗಳಿಂದ ದೇಹ ಮತ್ತು ಮನಸ್ಸಿನ ಆರೋಗ್ಯ ಉತ್ತಮವಾಗಿರುತ್ತದೆ ಎಂದು ಹೇಳಿದರು.

ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ನಿರ್ದೇಶಕ ಡಾ. ಪಿ.ಕೃಷ್ಣಯ್ಯ ಮಾತನಾಡಿ, ಒಟ್ಟು 1,100 ಕ್ರೀಡಾಪಟುಗಳು ಕ್ರೀಡಾಕೂಟದಲ್ಲಿ ಭಾಗವಹಿಸಿದ್ದಾರೆ. ಬಾಲಕರು 22 ವಿಭಾಗಗಳಲ್ಲಿ ಮತ್ತು ಬಾಲಕಿಯರು 20 ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಇಲ್ಲಿ ಗೆದ್ದ ಕ್ರೀಡಾಪಟುಗಳು ಅಂತರ ವಿಶ್ವವಿದ್ಯಾನಿಲಯ ಕ್ರೀಡೆಗಳಲ್ಲಿ ಭಾಗವಹಿಸುವ ಅರ್ಹತೆ ಗಳಿಸುತ್ತಾರೆ ಎಂದು ತಿಳಿಸಿದರು.

ಮೈಸೂರು ವಿವಿ ಉಪಕುಲಪತಿ ಪ್ರೊ.ಟಿ.ಕೆ.ಉಮೇಶ್ ಮಾತನಾಡಿ, ಇದು ಹಳ್ಳಿಯಿಂದ ದಿಲ್ಲಿಗೆ ಕ್ರೀಡೆ ಎಂಬ ವಾತಾವರಣವನ್ನು ಸೃಷ್ಟಿ ಮಾಡಿದೆ. ಇಲ್ಲಿ ಬಾಗವಹಿಸುವ ಕ್ರೀಡಾಪಟುಗಳು ದಿಲ್ಲಿಯಲ್ಲೂ ಸ್ಪರ್ಧಿಸುವಂತಾಗಲಿ ಎಂದು ಹಾರೈಸಿದರು.

ಕ್ರೀಡಾಕೂಟದ ದಿವ್ಯ ಸಾನಿಧ್ಯ ವಹಿಸಿದ್ದ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಆಶೀರ್ವಚನ ನೀಡಿ, ದೇಹ ಚಂದವಾಗಿರಲು ಕ್ರೀಡೆ ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಭಾಗವಹಿಸುವವರ ಸಂಖ್ಯೆ ಹೆಚ್ಚಬೇಕು. ದೇಹ ದೇವರುಗಳ ಮಂದಿರವಿದ್ದಂತೆ, ಅದು ಚೆನ್ನಾಗಿದ್ದರೆ ನಾವು ಚೆನ್ನಾಗಿದ್ದಂತೆ ಎಂದು ನುಡಿದರು. 

ಶೈಕ್ಷಣಿಕ ಪ್ರಗತಿಯ ಜೊತೆಗೆ ಕ್ರೀಡೆಯ ಪ್ರಗತಿಯು ಮುಖ್ಯ. ಓದು ಮತ್ತ ಓಟ ಬದುಕಿಗೆ ಅವಶ್ಯ, ಇದು ಒಂದೇ ನಾಣ್ಯ ಎರಡು ಮುಖವಿದ್ದಂತೆ, ನಿಜ ಜೀವನದ ಓಟದಲ್ಲೂ ಕ್ರೀಡಾಪಟುಗಳು ಗೆಲ್ಲುತ್ತಾರೆ. ಇಲ್ಲಿ ಗೆಲುವಿನ ಜೊತೆ ಜೊತೆಗೆ ಸೋಲಿನ ಅನುಭವವು ಆಗುತ್ತದೆ. ಇದರಿಂದ ಆತ್ಮಸ್ಥೈರ್ಯ ವೃದ್ದಿಗೊಂಡು ಬದುಕಿನಲ್ಲೂ ಯಶಸ್ಸನ್ನು ಸಾಧಿಸಬಹುದು ಎಂದರು.

ವೇದಿಕೆಯಲ್ಲಿ ಆದಿಚುಂಚನಗಿರಿ ಮಠದ ಕಾರ್ಯದರ್ಶಿ ಪ್ರಸನ್ನನಾಥ  ಸ್ವಾಮೀಜಿ, ಶಿಕ್ಷಣ ಟ್ರಸ್ಟ್‍ನ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ಶಾಸಕ ಸುರೇಶ್‍ಗೌಡ, ಶಿಕ್ಷಣ ಟ್ರಸ್ಟ್ ಸಿಇಓ ಡಾ.ಎನ್.ಎಸ್.ರಾಮೇಗೌಡ, ಆಡಳಿತಾಧಿಕಾರಿ ಡಾ.ಎ.ಟಿ.ಶಿವರಾಂ, ಅತಿಥೇಯ ಕಾಲೇಜಿನ ಪ್ರಾಂಶುಪಾಲ ಡಾ.ಬಿ.ಕೆ. ಲೋಕೇಶ್ ಮೊದಲಾದವರು ಉಪಸ್ಥಿತರಿದ್ದರು.

ಶಾಸಕರಾಗಿ ಆಯ್ಕೆಯಾಗಿ ಕೇವಲ 4 ತಿಂಗಳಲ್ಲೇ ರಾಜೀನಾಮೆ ನೀಡಿ ಮತ್ತೆ  ಚುನಾವಣೆ ಎದುರಿಸುವ ದುಸ್ಸಾಹಸವನ್ನು ಯಾವ ಶಾಸಕರು ತೋರುವುದಿಲ್ಲ, ಇದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದರು.

ತಾಲೂಕಿನ ಆದಿಚುಂಚನಗಿರಿ ಬಿ.ಜಿ.ಎಸ್ ಕ್ರೀಡಾಂಗಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಯಾವುದೇ ಶಾಸಕರು ರಾಜಿನಾಮೆ ನೀಡಿ ಬೇರೊಂದು ಪಕ್ಷಕ್ಕೆ ಹೋಗಿ ಗೆಲ್ಲುವುದು ಅವರು ತಮ್ಮನ್ನು ತಾವು ಮಾರಿಗೆ ಬಲಿ ಕೊಟ್ಟಂತೆ. ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವ ಧೈರ್ಯ ಯಾರು ತೋರಲಾರರು. ಜಾರಕಿಹೊಳಿ ಸಹೋದರರು ತಾವು ಯಾವುದೇ ಕಾರಣಕ್ಕೂ ಪಕ್ಷವನ್ನು ಬಿಡುವುದಿಲ್ಲ ಎಂದು ಪದೇ ಪದೇ ಹೇಳುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.

ರಾಜಿನಾಮೆ ಕೊಟ್ಟವರು ದುಡ್ಡು ತೆಗೆದುಕೊಂಡು ಜನರ ಬಳಿಗೆ ಹೋಗುತ್ತಾರೆ ಎನ್ನುತ್ತಾರೆ. ಜನರ ಬಳಿ ಹೋಗಿ ದುಡ್ಡನ್ನು ಕೊಟ್ಟು ಗೆಲ್ಲುವುದಕ್ಕೆ ಸಾಧ್ಯವಿಲ್ಲ, ಅಲ್ಲಿಗೆ ಅವರ ರಾಜಕೀಯ ಅಂತ್ಯವಾಗುತ್ತಿದೆ. ಯಾವುದೇ ಶಾಸಕ ತನ್ನ ರಾಜಕೀಯವನ್ನು ಅಂತ್ಯಗೊಳಿಸಲು ಇಷ್ಟಪಡುವುದಿಲ್ಲ, ಈಗ ಗೆದ್ದಿರುವ ಎಲ್ಲಾ ಶಾಸಕರು ಸಮರ್ಥರಿದ್ದಾರೆ ಎಂದರು. ರಾಹುಲ್ ಗಾಂಧಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರ ಆಶೀರ್ವಾದದಿಂದ ಸರ್ಕಾರ ಯಶಸ್ವಿಯಾಗಿ 5 ವರ್ಷ ಪೂರೈಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು.

ಎಚ್.ಡಿ.ಕುಮಾರಸ್ವಾಮಿ ದಿನದ 20 ಗಂಟೆ ಕಾರ್ಯ ನಿರ್ವಹಿಸುತ್ತಿದ್ದಾರೆ, ಸರ್ಕಾರ ಉತ್ತಮವಾಗಿ ಕೆಲಸ ಮಾಡುತ್ತಿದೆ. 53 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡಿದ್ದಾರೆ. ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ತಾಯಿ ಚಾಮುಂಡೇಶ್ವರಿ ಮತ್ತು ಕಾಲ ಭೈರವೇಶ್ವರ ಸ್ವಾಮಿಯ ಆಶೀರ್ವಾದದಿಂದ ಸರ್ಕಾರ ಸುಭದ್ರವಾಗಿದೆ ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News