ಮೈಸೂರು: ನೇರ ವೇತನ ನೀಡಲು ಒತ್ತಾಯಿಸಿ ಪೌರಕಾರ್ಮಿಕರಿಂದ ಧರಣಿ

Update: 2018-09-19 17:36 GMT

ಮೈಸೂರು,ಸೆ.19: ನೇರ ವೇತನ ನೀಡುವಂತೆ ಒತ್ತಾಯಿಸಿ ಮೈಸೂರು ಮಹಾ ನಗರ ಪಾಲಿಕೆಯ ಪೌರ ಕಾರ್ಮಿಕರು ಪ್ರತಿಭಟನೆ ನಡೆಸಿದರು.

ಮೈಸೂರಿನ ಪುರಭವನದ ಬಳಿಯಿಂದ ಬುಧವಾರ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಧಿಕಾರಿ ಕಚೇರಿ ಎದುರು ಸುಮಾರು ಎರಡು ಸಾವಿರ ಪೌರ ಕಾರ್ಮಿಕರು ಸ್ವಚ್ಛತಾ ಕೆಲಸವನ್ನು ಸ್ಥಗಿತಗೊಳಿಸಿ ಪ್ರತಿಭಟನೆಯಲ್ಲಿ ಭಾಗಿಯಾದರು. 

ಈ ಸಂದರ್ಭ ಮಾತನಾಡಿದ ಪ್ರತಿಭಟನಾಕಾರರು ದಸರಾ ಮಹೋತ್ಸವವನ್ನು ಬಹಿಷ್ಕರಿಸಿ ಹೋರಾಟ ಮಾಡುತ್ತೇವೆ. ಸರ್ಕಾರದ ಆದೇಶವನ್ನು ಜಾರಿಗೊಳಿಸಿ ಪೌರ ಕಾರ್ಮಿಕರಿಗೆ ನೇರವೇತನ ನೀಡಬೇಕು. ನೇರ ವೇತನ ನೀಡುವಂತೆ ಸರ್ಕಾರ ಆದೇಶ ನೀಡಿದ್ದರೂ ಪಾಲಿಕೆ ಇನ್ನೂ ಜಾರಿಗೊಳಿಸಿಲ್ಲ. ಒಂದು ವರ್ಷ ಕಳೆದರೂ ಈ ವಿಚಾರವಾಗಿ ಮೀನಾ ಮೇಷ ಎಣಿಸುತ್ತಿದೆ. ರಾಜ್ಯ ಸರ್ಕಾರ 700 ಜನರಿಗೆ ಒಬ್ಬ ಪೌರ ಕಾರ್ಮಿಕರಂತೆ ಅವೈಜ್ಞಾನಿಕವಾಗಿ ನೇಮಕ ಮಾಡಿದೆ. ಇದರಿಂದ ಪಾಲಿಕೆ ವ್ಯಾಪ್ತಿಯಲ್ಲಿ 400 ಜನರು ಕೆಲಸ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣ ವಾಗಿದೆ. ಕೂಡಲೇ ಇದನ್ನು 5ಜನಕ್ಕೆ ನಿಗದಿ ಪಡಿಸಬೇಕು. ನಮ್ಮ ಬೇಡಿಕೆಗಳಿಗೆ ಸ್ಪಂದಿಸದಿದ್ದರೆ ಅಕ್ಟೊಬರ್ 3 ರಿಂದ ಪಾಲಿಕೆ ವ್ಯಾಪ್ತಿಯ ಎಲ್ಲಾ ಕೆಲಸವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಪ್ರತಿಭಟನೆಯಲ್ಲಿ ಸಫಾಯಿ ಕರ್ಮಚಾರಿ ಆಯೋಗದ ಮಾಜಿ ಅಧ್ಯಕ್ಷ ನಾರಾಯಣ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮಾರ, ಮುರುಗೇಶ್, ಸೋಮಶೇಖರ್, ರಾಜು ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News