ದೇವೇಗೌಡರ ಕುಟುಂಬದ ವಿರುದ್ಧದ ದಾಖಲೆ ಬಿಡುಗಡೆಗೆ ಸುದ್ಧಿಗೋಷ್ಠಿ ನಡೆಸದ ಯಡಿಯೂರಪ್ಪ

Update: 2018-09-20 14:44 GMT

ಬೆಂಗಳೂರು, ಸೆ.20: ದೇವೇಗೌಡರ ಕುಟುಂಬದ ಅಕ್ರಮಕ್ಕೆ ಸಂಬಂಧಿಸಿದಂತೆ ಸಂಜೆ ಸುದ್ದಿಗೋಷ್ಠಿ ನಡೆಸಿ ದಾಖಲೆಗಳನ್ನು ಬಿಡುಗಡೆ ಮಾಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಘೋಷಿಸಿದ್ದರು. ಆದರೆ, ಸಂಜೆ ನಡೆದ ಸುದ್ದಿಗೋಷ್ಠಿಯಲ್ಲಿ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲಿಲ್ಲ.

ಗುರುವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಪಾಲ್ಗೊಂಡ ಬಿಜೆಪಿ ನಾಯಕರು, ದೇವೇಗೌಡರ ಕುಟುಂಬದ ಅಕ್ರಮಕ್ಕೆ ಸಂಬಂಧಿಸಿದಂತೆ ಯಾವುದೇ ದಾಖಲೆಗಳನ್ನು ಬಿಡುಗಡೆ ಮಾಡಲಿಲ್ಲ. ಅಲ್ಲದೆ, ಬಿಜೆಪಿ ಮುಖಂಡ ಪುಟ್ಟಸ್ವಾಮಿ 'ಈ ವಿಚಾರವೇ ಗೊತ್ತಿಲ್ಲ. ನಾವು ಯಾವುದೇ ದಾಖಲೆಗಳನ್ನು ತಂದಿಲ್ಲ' ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಬಿಜೆಪಿ ಹಾಗೂ ಬಿ.ಎಸ್.ಯಡಿಯೂರಪ್ಪ ವಿರುದ್ಧ ಪ್ರಚೋದನಕಾರಿ ಹೇಳಿಕೆ ನೀಡಿದ್ದು, ಅವರ ವಿರುದ್ಧ ರಾಜದ್ರೋಹ ಕೇಸು ದಾಖಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದು, ಸೆ.21ರಂದು ರಾಜ್ಯಪಾಲರನ್ನು ಭೇಟಿ ಮಾಡಿ ಮನವಿ ಸಲ್ಲಿಸಲು ನಿರ್ಧರಿಸಿದ್ದಾರೆ.

ಮುಖ್ಯಮಂತ್ರಿಯು ಪ್ರಜಾಪ್ರಭುತ್ವ ದೇಶದಲ್ಲಿರುವುದನ್ನು ಮರೆತು, ವಿರೋಧ ಪಕ್ಷದ ವಿರುದ್ಧ ದಂಗೆ ಮಾಡಿ ಕಾರ್ಯಕರ್ತರನ್ನು ಪ್ರಚೋದಿಸಿದ್ದಾರೆ. ವಿರೋಧ ಪಕ್ಷದವರಿಗೆ ರಕ್ಷಣೆ ನೀಡಬೇಕಾದ ಸರಕಾರದ ಮುಖ್ಯಮಂತ್ರಿಯೇ ಈ ರೀತಿ ಹೇಳಿಕೆ ನೀಡಿರುವುದು ದುರಂತ. ಇದು ರಾಜಧರ್ಮಕ್ಕೆ ವಿರುದ್ಧವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾತನಾಡಿದ ವಿಧಾನಸಭಾ ವಿಪಕ್ಷ ನಾಯಕ ಗೋವಿಂದ ಕಾರಜೋಳ, ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿಕೆ ನೀಡಿದ ತಕ್ಷಣ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಆ ಸ್ಥಳದಲ್ಲಿ ನಮ್ಮ ಪಕ್ಷದ ಶಾಸಕರು ಇಲ್ಲದಿದ್ದರೆ, ಯಡಿಯೂರಪ್ಪರ ಪ್ರಾಣ ತೆಗೆಯಲು ಹಿಂಜರಿಯುತ್ತಿರಲಿಲ್ಲ ಎಂದು ಆರೋಪಿಸಿದರು.

ಬಿ.ಜೆ.ಪುಟ್ಟಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಅನೇಕ ಹಗರಣ ಪ್ರಕರಣಗಳಿದ್ದು, ಜಾಮೀನು ಪಡೆದು ಹೊರಗಡೆ ಇದ್ದಾರೆ. ಜಂತಕಲ್ ಗಣಿಗಾರಿಕೆ ಪ್ರಕರಣದಲ್ಲಿ ಜಾಮೀನು ಪಡೆದಿದ್ದಾರೆ. ಅಲ್ಲದೆ, ಈ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿದ್ದು, ಅದಕ್ಕೆ ಅಂದು ಸಿಎಂ ಆಗಿದ್ದ ಕುಮಾರಸ್ವಾಮಿಯೇ ನವೀಕರಣ ಮಾಡಿಸಿಕೊಟ್ಟಿದ್ದಾರೆ ಎಂದು ಹೇಳಿದರು.

ಥಣಿಸಂದ್ರ ಡಿ-ನೋಟಿಫಿಕೇಷನ್ ಪ್ರಕರಣದಲ್ಲಿ ಕುಮಾರಸ್ವಾಮಿ ಜಾಮೀನು ಪಡೆದಿದ್ದಾರೆ ಎಂದ ಅವರು, ಸಾಯಿ ವೆಂಕಟೇಶ್ವರ್ ಗಣಿಗಾರಿಕೆಗೆ 546 ಎಕರೆ ಭೂಮಿಯನ್ನು ಕಾನೂನುಬಾಹಿರವಾಗಿ ಅವಕಾಶ ನೀಡಿದ್ದಾರೆ. ಅಲ್ಲದೆ, ಎಡವಲಹಿಪ್ಪೆ ಬಳಿ 82 ಎಕರೆ ಭೂಮಿಯನ್ನು ಕಬಳಿಸಿದ್ದಾರೆ. ಸರಕಾರಿ ಭೂ ಕಬಳಿಕೆಯಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡಗೆ ಪಿಎಚ್‌ಡಿ ಪದವಿ ನೀಡಬಹುದಾಗಿದೆ ಎಂದು ಹರಿಹಾಯ್ದರು.

ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮಾತನಾಡಿ, ಮುಖ್ಯಮಂತ್ರಿ ಕುಮಾರಸ್ವಾಮಿ ನೀಡಿರುವ ಹೇಳಿಕೆಯು ರಾಜದ್ರೋಹವಾಗಿದ್ದು, ಅವರ ಮೇಲೆ ಕಲಂ 124 ಪ್ರಕಾರ ಕೇಸ್ ದಾಖಲಿಸಿಕೊಂಡು, ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ರಕ್ತಪಾತ ನಡೆಸಿ, ದಂಗೆ ಏಳಿ ಎಂದು ನಕ್ಸಲರು ಕರೆ ನೀಡುತ್ತಾರೆ. ಅದೇ ರೀತಿಯಲ್ಲಿ ಕುಮಾರಸ್ವಾಮಿ ಕರ್ನಾಟಕವನ್ನು ಜಂಗಲ್‌ರಾಜ್ ಮಾಡಲು ಮುಂದಾಗಿದ್ದಾರೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ಆಡಳಿತಾರೂಢ ಸರಕಾರ ವಿರೋಧ ಪಕ್ಷಗಳ ಮೇಲೆ, ಪಕ್ಷದ ನಾಯಕರ ಮೇಲೆ ದಾಳಿಗೆ ಪ್ರೋತ್ಸಾಹಿಸುವ ಮೂಲಕ ಬಾಯಿ ಮುಚ್ಚಿಸಲು ಮುಂದಾಗಿದ್ದಾರೆ. ಆದರೆ, ನಾವು ದಾಳಿಗಳಿಗೆ ಹೆದರುವುದಿಲ್ಲ ಎಂದ ಅವರು, ಸಚಿವ ಡಿ.ಕೆ.ಶಿವಕುಮಾರ್ ಹಾಗೂ ಆದಾಯ ಇಲಾಖೆ ಅಧಿಕಾರಿಗಳ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ. ಅವರು ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ, ಮಾಡಿಲ್ಲ ಎಂದರೆ ಬಿಡುಗಡೆಯಾಗುತ್ತಾರೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News