ಮೈಸೂರು: ಪತ್ನಿ ಹಂತಕನಿಗೆ ಜೀವಾವಧಿ ಶಿಕ್ಷೆ

Update: 2018-09-20 15:07 GMT

ಮೈಸೂರು,ಸೆ.20: ಪತ್ನಿಯನ್ನು ಕೊಲೆಗೈದ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವನಿಗೆ ಮೈಸೂರಿನ ಐದನೇ ಹೆಚ್ಚುವರಿ ಮತ್ತು ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ ಐವತ್ತೈದು ಸಾವಿರ ರೂ.ದಂಡ ವಿಧಿಸಿ ತೀರ್ಪಿತ್ತಿದೆ.

ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಅರಕೆರೆ ಹೋಬಳಿಯ ಮಹದೇವಪುರ ಗ್ರಾಮದ ನಿವಾಸಿ ನಾಗರಾಜು ಎಂಬಾತನೇ ಶಿಕ್ಷೆಗೊಳಗಾದ ವ್ಯಕ್ತಿ. ಆತ ಮೈಸೂರಿನ ಕೆ.ಆರ್.ನಗರದ ಹಂಪಾಪುರ ಗ್ರಾಮದ ನರಸಿಂಹೇಗೌಡರ ಪುತ್ರಿ ಸುನೀತಾ ಅವರನ್ನು 6 ವರ್ಷಗಳ ಹಿಂದೆ ವಿವಾಹವಾಗಿದ್ದ. ಮದ್ಯ ವ್ಯಸನಿಯಾಗಿದ್ದ ಈತ ದುಂದು ವೆಚ್ಚ ಮಾಡುತ್ತಿದ್ದು, ಪ್ರಶ್ನಿಸುತ್ತಿದ್ದ ಪತ್ನಿಗೆ ಹಿಂಸೆ ನೀಡುತ್ತಿದ್ದ. ಇದರಿಂದ ಬೇಸರಗೊಂಡ ಪತ್ನಿ ರಾಮಕೃಷ್ಣ ನಗರದಲ್ಲಿ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿದ್ದಳು. ಆದರೆ ಅಲ್ಲಿಗೂ ಬಂದು ಆತ ಹಣಕ್ಕಾಗಿ ಪೀಡಿಸುತ್ತಿದ್ದ ಎನ್ನಲಾಗಿದೆ.

2013ರ ಡಿಸೆಂಬರ್ 12ರಂದು ಪತ್ನಿಯ ಕತ್ತನ್ನು ಹಗ್ಗದಿಂದ ಬಿಗಿದು ಕೊಲೆ ಮಾಡಿದ್ದಾನೆ. ಬಳಿಕ ಸುನೀತಾ ಪೋಷಕರು ಕುವೆಂಪುನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನ ಆಧಾರದ ಮೇರೆಗೆ ಆರೋಪಿಯನ್ನು ಬಂಧಿಸಿ ವರದಿಯನ್ನು ಸಲ್ಲಿಸಿದ್ದರು. ನಾಲ್ಕು ವರ್ಷದ ಬಾಲಕ ಪ್ರಕರಣಕ್ಕೆ ಕುರಿತಂತೆ ಸಾಕ್ಷ್ಯ ನುಡಿದಿದ್ದು, ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿಗೆ ಶಿಕ್ಷೆ ಪ್ರಕಟಿಸಿದೆ. ನ್ಯಾಯಾಧೀಶರಾದ ಕುರುವತ್ತಿ ಅವರು ಜೀವಾವಧಿ ಶಿಕ್ಷೆ ಹಾಗೂ ಐವತ್ತೈದು ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ವಕೀಲ ಅಜಿತ್ ಕುಮಾರ್ ಸರ್ಕಾರದ ಪರ ವಾದಿಸಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News