ಶಿವಮೊಗ್ಗ: ವಿದ್ಯಾರ್ಥಿ ನಿಲಯಕ್ಕೆ ಡಿ.ಸಿ ದಿಢೀರ್ ಭೇಟಿ; ಕರ್ತವ್ಯ ಲೋಪ ಎಸಗಿದ ಮೇಲ್ವಿಚಾರಕ ಅಮಾನತು

Update: 2018-09-20 17:37 GMT

ಶಿವಮೊಗ್ಗ, ಸೆ. 20: ವಿದ್ಯಾರ್ಥಿ ನಿಲಯದಲ್ಲಿ ವಿದ್ಯಾರ್ಥಿಗಳಿಗೆ ಸಮರ್ಪಕ ಸೌಲಭ್ಯಗಳನ್ನು ಕಲ್ಪಿಸದೆ ಕರ್ತವ್ಯ ಲೋಪ ಎಸಗಿದ ಆರೋಪದ ಮೇರೆಗೆ ಶಿವಮೊಗ್ಗ ನಗರದ ವಿದ್ಯಾನಗರ ಬಡಾವಣೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ಬಾಲಕರ ವಿದ್ಯಾರ್ಥಿ ನಿಲಯದ ಕಿರಿಯ ನಿಲಯ ಮೇಲ್ವಿಚಾರಕನನ್ನು ಅಮಾನತುಗೊಳಿಸಿ ಜಿಲ್ಲಾಧಿಕಾರಿ ಕೆ.ಎ.ದಯಾನಂದ ಬುಧವಾರ ಆದೇಶ ಹೊರಡಿಸಿದ್ದಾರೆ. 

ಬಿ. ತೀರ್ಥಪ್ಪ ಅಮಾನತುಗೊಂಡ ಮೇಲ್ವಿಚಾರಕ ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಜಿಲ್ಲಾಧಿಕಾರಿಗಳು ವಿದ್ಯಾರ್ಥಿ ನಿಲಯಕ್ಕೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಈ ಸಂದರ್ಭದಲ್ಲಿ ಹಾಸ್ಟೆಲ್‍ನಲ್ಲಿ ಹಲವು ನ್ಯೂನ್ಯತೆಗಳು ಕಂಡು ಬಂದಿದ್ದವು. 

ವಿದ್ಯಾರ್ಥಿಗಳು ಕೂಡ ಹಾಸ್ಟೆಲ್‍ನಲ್ಲಿದ್ದ ಹಲವು ಅವ್ಯವಸ್ಥೆಗಳನ್ನು ಡಿ.ಸಿ.ಯವರ ಗಮನಕ್ಕೆ ತಂದಿದ್ದರು. ಊಟೋಪಚಾರದ ವ್ಯವಸ್ಥೆಯೂ ಸಮರ್ಪಕವಾಗಿಲ್ಲದಿರುವುದನ್ನು ತಿಳಿಸಿದ್ದರು. ಮತ್ತೊಂದೆಡೆ ಡಿ.ಸಿ. ಭೇಟಿಯ ವೇಳೆ, ಮೇಲ್ವಿಚಾರಕ ಬಿ. ತೀರ್ಥಪ್ಪ ಕೂಡ ವಿದ್ಯಾರ್ಥಿ ನಿಲಯದಲ್ಲಿ ಹಾಜರಿರಲಿಲ್ಲ. 

ಸಮಸ್ಯೆಗಳು: ವಿದ್ಯಾರ್ಥಿಗಳಿಗೆ ಹೊದೆಯಲು ಅಗತ್ಯ ಬೆಡ್‍ಶೀಟ್‍ಗಳು ಇರಲಿಲ್ಲ. ತಿಂಡಿ ಮತ್ತು ಊಟ ಮಾಡಲು ಸಮರ್ಪಕ ತಟ್ಟೆಯ ವ್ಯವಸ್ಥೆಯಿರಲಿಲ್ಲ. ಕೊಠಡಿಗಳಲ್ಲಿ ಸೊಳ್ಳೆ ಕಾಟ ತೀವ್ರವಾಗಿದ್ದು, ಫ್ಯಾನ್ ವ್ಯವಸ್ಥೆ ಇಲ್ಲದಿರುವುದು, ಶೌಚಾಲಯಕ್ಕೆ ನೀರಿನ ಸಮರ್ಪಕ ಸರಬರಾಜು ಇಲ್ಲದ ಕಾರಣ ಶೌಚಾಲಯವನ್ನು 2-3 ತಿಂಗಳಿನಿಂದ ಬಳಸದಿರುವುದು, ಬೇಕಾಬಿಟ್ಟಿಯಾಗಿ ಆಹಾರವನ್ನು ಬೇಯಿಸಿ ನೀಡುತ್ತಿರುವುದು ಜಿಲ್ಲಾಧಿಕಾರಿಯವರ ಗಮನಕ್ಕೆ ಬಂದಿತ್ತು. ಸರ್ಕಾರಿ ಹಾಸ್ಟೆಲ್‍ನ ಅವ್ಯವಸ್ಥೆಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಡಾ. ಕೆ. ಎ.ದಯಾನಂದ್‍ರವರು ಮೇಲ್ವಿಚಾರಕರನನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News