ಹನೂರು: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮಹಾಸಭೆ
ಹನೂರು,ಸೆ.20: ಹನೂರಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಉತ್ತಮ ಕಾರ್ಯನಿರ್ವಹಣೆಯಲ್ಲಿ ರಾಜ್ಯದಲ್ಲಿಯೇ ಮೊದಲನೆ ಸ್ಥಾನದಲ್ಲಿದ್ದು, ಒಂದು ಮಾದರಿ ಸಹಕಾರ ಸಂಘವಾಗಿ ಮಾರ್ಪಟಿದೆ ಎಂದು ಶಾಸಕ ಆರ್. ನರೇಂದ್ರ ಮೆಚ್ಚುಗೆ ವ್ಯಕ್ತಪಡಿಸಿದರು.
ಪಟ್ಟಣದ ಆರ್‍ಎಂಸಿ ಸಭಾಂಗಣದಲ್ಲಿ ಗುರುವಾರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2017-18ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆಯನ್ನು ಆಯೋಜಿಸಿಲಾಗಿತ್ತು. ಸಭೆಯ ಪ್ರಾರಂಭದಲ್ಲಿ ಸಂಘದ ಸಿಇಒ ಬಸವರಾಜು ಮಾತನಾಡಿ, ತಮ್ಮೆಲ್ಲರ ಸಹಕಾರದಿಂದ 2017-18ನೇ ಸಾಲಿನಲ್ಲಿ ಖರ್ಚು, ವೆಚ್ಚ ಕಳೆದು ಸಂಘವು 2,84 ಲಕ್ಷ ರೂ ನಿವ್ವಳ ಲಾಭ ಗಳಿಸಿದ್ದು, ಅಭಿವೃದ್ಧಿಯತ್ತ ಸಾಗುತ್ತಿದೆ. ಆದುದರಿಂದ ರೈತರು ಇದೇ ರೀತಿ ಸಹಕಾರ ನೀಡುವುದರ ಮೂಲಕ ಸಂಘದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ತಿಳಿಸಿದರು.
ನಂತರ ಮಾತನಾಡಿದ ಶಾಸಕ ಆರ್ ನರೇಂದ್ರ, ಈ ಹಿಂದೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ರೈತರು ಪಡೆದಿದ್ದ 50 ಸಾವಿರ ರೂವರೆಗೆ ಸಾಲ ಮನ್ನಾ ಮಾಡಲಾಗಿತ್ತು. ಇದೀಗ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ 1 ಲಕ್ಷ ರೂವರೆಗೂ ಸಾಲ ಮನ್ನಾ ಮಾಡಲು ನಿರ್ಧರಿಸಿದೆ. ಈ ಹಿಂದೆ ಎಂಡಿಸಿಸಿ ಬ್ಯಾಂಕ್ ಮೂಲಕ ಜಿಲ್ಲೆಯ ಸಂಘಗಳಿಗೆ 28 ಕೋಟಿ ರೂವರೆಗೆ ಮಾತ್ರ ಸಾಲವನ್ನು ನೀಡಲಾಗುತ್ತಿತ್ತು. ಆದರೆ ಕಳೆದ ಬಾರಿ ನಾನು ಅಧ್ಯಕ್ಷನಾಗಿದ್ದ ವೇಳೆ ಜಿಲ್ಲೆಗೆ 107 ಕೋಟಿ ರೂ ಸಾಲವನ್ನು ನೀಡಿದ್ದು, ಸಾವಿರಾರು ರೈತರು ಇದರ ಪ್ರಯೋಜನ ಪಡೆದುಕೊಂಡಿದ್ದಾರೆ. ಇತ್ತೀಚೆಗೆ ಸರ್ಕಾರ ಸಂಘಗಳಿಗೆ ಹಲವು ಸವಲತ್ತುಗಳನ್ನು ನೀಡುತ್ತಿದೆ. ರೈತರು ಇದರ ಪ್ರಯೋಜನ ಪಡೆದುಕೊಂಡು ಅಭಿವೃದ್ಧಿ ಹೊಂದಬೇಕು ಎಂದು ತಿಳಿಸಿದರು.
ಈ ಸಂದರ್ಭ ಸಂಘದ ಅಧ್ಯಕ್ಷ ಶ್ರೀನಿವಾಸಗೌಡ, ಉಪಾಧ್ಯಕ್ಷ ನಂಜುಂಡಶೆಟ್ಟಿ, ಎಂಡಿಸಿಸಿ ಬ್ಯಾಂಕ್‍ನ ವ್ಯವಸ್ಥಾಪಕ ಸೋಮ್ಮಣ್ಣ , ನಿರ್ದೇಶಕ ರುದ್ರಪ್ಪ, ರಾಚ್ಚಪ್ಪ, ನಾಗರತ್ನ, ರಾಜಮ್ಮ, ಸೈಯದ್‍ಪಾಷ, ಮುಖಂಡರು ಹಾಗೂ ರೈತರು ಹಾಜರಿದ್ದರು.