ಸರಕಾರಿ ಜವಾಬ್ದಾರಿ- ಕರ್ತವ್ಯಗಳನ್ನು ಸಮರ್ಪಕವಾಗಿ ನಿರ್ವಹಿಸಿ: ಚಿಕ್ಕಮಗಳೂರು ಜಿಪಂ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ

Update: 2018-09-20 18:12 GMT

ಚಿಕ್ಕಮಗಳೂರು, ಸೆ.20: ಅಧಿಕಾರಿಗಳು ಸರಕಾರ ವಹಿಸಿರುವ ಜವಾಬ್ದಾರಿ ಮತ್ತು ಕರ್ತವ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು.

ಅವರು ಇಂದು ನಗರದ ಜಿಲ್ಲಾ ಪಂಚಾಯತ್‍ನ ಅಬ್ದುಲ್ ನಜೀರ್ ಸಾಬ್ ಸಭಾಂಗಣದಲ್ಲಿ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು. ಸರ್ಕಾರ ಅನೇಕ ಜನಪರ ಕಲ್ಯಾಣ ಯೋಜನೆಗಳನ್ನು ತಂದಿದ್ದು ಇವುಗಳ ಅನುಷ್ಠಾನವನ್ನು ಜವಾಬ್ದಾರಿಯುತವಾಗಿ ಮಾಡಬೇಕು. ತಪ್ಪಿದಲ್ಲಿ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಾಲಾ ಮಕ್ಕಳಿಗೆ ನೀಡುವ ಮಧ್ಯಾಹ್ನದ ಬಿಸಿಯೂಟ ಯೋಜನೆ ಹಾಗೂ ಕ್ಷೀರಭಾಗ್ಯ ಯೋಜನೆಗಳು ಗುಣಮಟ್ಟದ್ದಾಗಿರಬೇಕು ಎಂದ ಅವರು ಕೊಪ್ಪ ತಾಲೂಕಿನ ನಿಲುವಾಗಿಲು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ರಾಸಾಯನಿಕ ಮಿಶ್ರಿತ ಹಾಲನ್ನು ಮಕ್ಕಳಿಗೆ ನೀಡಿ ಅಸ್ವಸ್ಥರಿಗೆ ಕಾರಣರಾದ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳಬೇಕೆಂದು ತಿಳಿಸಿದರು.

ಜಿ.ಪಂ. ಉಪಾಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ ಮುಂಬರುವ ಹಿಂಗಾರು ಹಂಗಾಮಿಗೆ ಅಗತ್ಯ ಬಿತ್ತನೆ ಬೀಜ, ರಸಗೊಬ್ಬರಗಳನ್ನು ರೈತರ ಬೇಡಿಕೆಗನುಣವಾಗಿ ಪೂರೈಸಬೇಕು, ಕೃಷಿ ಭೂಮಿಯ ಮಣ್ಣು ಪರೀಕ್ಷೆಯನ್ನು 25 ಎಕರೆ ಬ್ಲಾಕಿಗೆ ಒಂದರಂತೆ ಮಾಡಲಾಗಿದ್ದು, ಮಣ್ಣಿನ ಪೋಷಕಾಂಶಗಳ ಹೆಕ್ಟೇರಿನಿಂದ ಹೆಕ್ಟೇರಿಗೆ ವ್ಯತ್ಯಾಸ ಇರುತ್ತವೆ. 25 ಎಕರೆಗೆ ಬದಲಾಗಿ 10 ಎಕರೆಗೆ ಮಣ್ಣು ಪರೀಕ್ಷೆ ಮಾಡುವುದರೊಂದಿಗೆ ಅದಕ್ಕನುಗುಣವಾಗಿ ರೈತರಿಗೆ ರಸಗೊಬ್ಬರವನ್ನು ಉಪಯೋಗಿಸಲು ಮಾರ್ಗದರ್ಶನ ನೀಡಬೇಕೆಂದರು.

ರೈತರಿಗೆ ನೀಡುವ ಕೃಷಿ ಯಂತ್ರೋಪಕರಣಗಳ ಹಾಗೂ ಹನಿ ನೀರಾವರಿಗೆ ಅನುದಾನಗಳು ಸರಿಯಾಗಿ ನೀಡುತ್ತಿಲ್ಲ ಎಂದು ಗೊಂದಲಗಳು ಕೇಳಿ ಬರುತ್ತಿವೆ. ಹೀಗಾಗದಂತೆ ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದರು. ಡಯಾಲಿಸಿಸ್ ಕೇಂದ್ರಗಳಲ್ಲಿ ಕೆಲವು ಔಷಧಿಗಳನ್ನು ಹೊರಗಿನಿಂದ ತರಲು ರೋಗಿಗಳಿಗೆ ಸೂಚಿಸಲಾಗುತ್ತಿದೆ ಇದರ ಬಗ್ಗೆ ಪರಿಶೀಲಿಸಬೇಕೆಂದರು.

ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಸತ್ಯಭಾಮ ಮಾತನಾಡುತ್ತಾ ಸರ್ಕಾರದಿಂದ ನೀಡುತ್ತಿರುವ ವಿದ್ಯಾರ್ಥಿ ವೇತನವನ್ನು ಜಿಲ್ಲೆಯ ಅರ್ಹ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಲಭ್ಯವಾಗುವಂತೆ ಎಚ್ಚರ ವಹಿಸಬೇಕು. ಹಾಸ್ಟೆಲ್‍ಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕು. ಮೇಲ್ಮಟ್ಟದ ಅಧಿಕಾರಿಗಳು ಆಗಿಂದಾಗ್ಗೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲನೆ ಮಾಡಬೇಕೆಂದು ತಿಳಿಸಿದರು. ಮೂಡಿಗೆರೆ ತಾಲೂಕಿನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಮವಸ್ತ್ರ ಶೀಘ್ರದಲ್ಲಿ ವಿತರಿಸಲು ಮುಂದಾಗಬೇಕೆಂದರು.

ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹೇಂದ್ರ ಮಾತನಾಡಿ ಕಟ್ಟಡ ಕಾಮಗಾರಿಗಳನ್ನು ಕೈಗೊಳ್ಳುವಾಗ ಉತ್ತಮ ಗುಣಮಟ್ಟದಲ್ಲಿ ಸರ್ಕಾರ ನಿಗಧಿಪಡಿಸಿರುವ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದ ಅವರು ಕೃಷಿ ಇಲಾಖೆಯಿಂದ ರೈತರಿಗೆ ನೀಡುವ ಸೌಲಭ್ಯಗಳ ಮಾಹಿತಿಯ ಬಗ್ಗೆ ಪ್ರದರ್ಶಿಸಬೇಕು ಎಂದರು.

ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್‍ಕುಮಾರ್ ಮಾತನಾಡಿ, ಜಿಲ್ಲೆಯ ಹಿಂದುಳಿದ ತಾಲೂಕುಗಳಾದ ಕಡೂರು ಹಾಗೂ ತರೀಕೆರೆಗಳಲ್ಲಿ ಅನಕ್ಷರಸ್ಥರನ್ನು ಸಾಕ್ಷರಸ್ಥರನ್ನಾಗಿ ಮಾಡಲು ಹೆಚ್ಚು ಒತ್ತು ನೀಡಬೇಕು ಎಂದರು.

ಸಭೆಯಲ್ಲಿ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News