ಮೂಡಿಗೆರೆ: ಕಾಡಿನಲ್ಲಿ ಜಾನುವಾರು ಮಾಂಸ ಮಾಡಿ ಮಾರಾಟಕ್ಕೆ ಯತ್ನ; ಆರೋಪ

Update: 2018-09-20 18:17 GMT

ಮೂಡಿಗೆರೆ, ಸೆ.20: ಅರಣ್ಯ ಇಲಾಖೆಗೆ ಸೇರಿದ ಕಾಡಿನಲ್ಲಿ ತಗಡಿನಿಂದ ಶೆಡ್‍ವೊಂದನ್ನು ನಿರ್ಮಿಸಿ, ಅದರಲ್ಲಿ ಅಕ್ರಮವಾಗಿ ಜಾನುವಾರು ಒಂದನ್ನು ಕೊಂದು ಮಾಂಸ ಮಾಡಿ, ಮಾರಾಟ ಮಾಡಲು ಯತ್ನಿಸಿದ ಇಬ್ಬರು ಸ್ಥಳೀಯ ಯುವಕರ ಕೃತ್ಯವನ್ನು ಯುವಕನೊಬ್ಬ ಪೊಲೀಸರಿಗೆ ಮತ್ತು ಸಾರ್ವಜನಿಕರಿಗೆ ವಿಷಯ ತಿಳಿಸಿದಾಗ, ಯುವಕರು ಮಾಂಸ ಸಮೇತ ಸ್ಥಳದಿಂದ ಪರಾರಿಯಾದ ಘಟನೆ ಬುಧವಾರ ರಾತ್ರಿ ನಡೆದಿದ್ದು, ತಡರಾತ್ರಿ ಪರಾರಿಯಾಗಿದ್ದ ಆರೋಪಿ ಯುವಕರು ಪೊಲೀಸರ ಮುಂದೆ ಶರಣಾಗಿದ್ದಾರೆ.

ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯ ಅಣಜೂರು ನಿವಾಸಿಗಳಾದ ಆರೀಸ್ (24) ಮತ್ತು ಇಮ್ರಾನ್ (22) ಎಂಬ ಯುವಕರು ತಮ್ಮ ಮನೆಯ ಹಿಂಭಾಗದಲ್ಲಿರುವ ಅರಣ್ಯ ಇಲಾಖೆಗೆ ಸೇರಿದ್ದ ಕಾಡಿನಲ್ಲಿ ಶೆಡ್‍ವೊಂದನ್ನು ನಿರ್ಮಿಸಿ ಅದರೊಳಗೆ ಜಾನುವಾರೊಂದನ್ನು ಕೊಂದು ಮಾಂಸ ಮಾಡುತ್ತಿದ್ದರು. ಈ ವೇಳೆಗೆ ಪಕ್ಕದ ಗ್ರಾಮದ ಜೇನುಬೈಲ್ ಗ್ರಾಮ ನಾಗೇಶ್ ಎಂಬಾತ ಕಾಣೆಯಾದ ತನ್ನ ಜಾನುವಾರು ಹುಡುಕಿಕೊಂಡು ಬಂದಿದ್ದಾನೆ. ಈ ವೇಳೆ ಕಾಡಿನೊಳಗಿದ್ದ ಶೆಡ್‍ನೊಳಗೆ ಯುವಕ ಇಣುಕಿ ನೋಡಿದಾಗ ಇಬ್ಬರು ಯುವಕರು ಮಾಂಸ ಕತ್ತರಿಸುತ್ತಿದ್ದ ದೃಶ್ಯ ಕಂಡಿದೆ. ಈ ಬಗ್ಗೆ ಯುವಕರಲ್ಲಿ ವಿಚಾರಿಸಿದಾಗ, ಕುರಿ ಮಾಂಸ ಕತ್ತರಿಸುತ್ತಿರುವುದಾಗಿ ಸುಳ್ಳು ಹೇಳಿದ್ದಾರೆಂದು ತಿಳಿದು ಬಂದಿದೆ. ಅದನ್ನು ನಂಬದ ಯುವಕ ತನ್ನ ಮೊಬೈಲ್‍ನಲ್ಲಿ ಶೆಡ್ ಅನ್ನು ಚಿತ್ರೀಕರಿಸಿಕೊಂಡು ಸ್ಥಳದಿಂದ ತೆರಳಿದ್ದಾನೆಂದು ತಿಳಿದು ಬಂದಿದ್ದು, ದೃಶ್ಯವನ್ನು ವಾಟ್ಸ್ ಆಪ್ ಗ್ರೂಪ್‍ಗೆ ಹರಿಯಬಿಟ್ಟಿದ್ದರಿಂದ ದೃಶ್ಯ ವೈರಲ್ ಆಗಿದೆ.

ನಾಗೇಶ್ ಸ್ಥಳದಿಂದ ತೆರಳಿದಾಗ ಆರೋಪಿ ಯುವಕರಿಗೆ ಅನುಮಾನ ಬಂದಿದ್ದರಿಂದ ಕೂಡಲೇ ಇಬ್ಬರು ಸೇರಿ ಜಾನುವಾರಿನ ತಲೆ, ಕಾಲು ಮತ್ತು ಚರ್ಮವನ್ನು ಸ್ಥಳದಲ್ಲೇ ಗುಂಡಿ ತೆಗೆದು ಹೂತುಹಾಕಿ, ಮಾಂಸ ಸಮೇತ ಪರಾರಿಯಾಗಿದ್ದರೆನ್ನಲಾಗುತ್ತಿದ್ದು, ಇತ್ತ ನಾಗೇಶ್ ತನ್ನ ಮೊಬೈಲ್ ಮೂಲಕ ಚಿತ್ರೀಕರಿಸಿಕೊಂಡ ದೃಶ್ಯವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದಲ್ಲದೇ ಸ್ಥಳೀಯ ಜನರಿಗೆ ಹಾಗೂ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಗೋಣಿಬೀಡು ಪೊಲೀಸರು ಬುಧವಾರ ಪರಿಶೀಲಿಸಿದಾಗ ಹೂತು ಹಾಕಿರುವುದು ಜಾನುವಾರಿನ ತಲೆ, ಕಾಲು ಮತ್ತು ಚರ್ಮವೆಂದು ಪತ್ತೆಯಾಗಿದೆ ಎಂದು ತಿಳಿದು ಬಂದಿದೆ.

ಪ್ರಕರಣ ದಾಖಲಿಸಿಕೊಂಡ ಗೋಣಿಬೀಡು ಪೊಲೀಸರು ಪರಾರಿಯಾಗಿದ್ದ ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದರು. ವಿಷಯದ ಗಂಭೀರತೆ ಅರಿತ ಆರೋಪಿಗಳು ಬುಧವಾರ ಮಧ್ಯರಾತ್ರಿ 1:30ರ ವೇಳೆಗೆ ಮೂಡಿಗೆರೆ ಪೊಲೀಸ್ ಠಾಣೆಗೆ ತೆರಳಿ ಸಿಪಿಐ ಜಗದೀಶ್ ಅವರ ಮುಂದೆ ಶರಣಾಗಿದ್ದಾರೆ. 
ಪ್ರಕರಣ ಸಂಬಂಧ ಅಣಜೂರು ಮತ್ತು ಜನ್ನಾಪುರ ಗ್ರಾಮಗಳಲ್ಲಿ ಗುರುವಾರ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿತ್ತು. ಜನ್ನಾಪುರದಲ್ಲಿರುವ ಆರೋಪಿ ಆರೀಸ್‍ನ ಹೊಟೇಲ್ ಮತ್ತು ಅಂಗಡಿಗೆ ಕೆಲ ಕಿಡಿಗೇಡಿ ಯುವಕರು ಕಲ್ಲು ತೂರಿದ ಘಟನೆ ಗುರುವಾರ ನಡೆದಿದೆ. ಅಲ್ಲದೇ ಅಣಜೂರಿನ ಆರೀಸ್ ಮನೆಯ ಮುಂದೆ ನಿಲ್ಲಿಸಿದ್ದ ಕಾರಿಗೆ ಕಿಡಿಗೇಡಿಗಳು ಕಲ್ಲುತೂರಿ ಗಾಜುಗಳನ್ನು ಪುಡಿ ಮಾಡಿದ್ದಾರೆ. ಮಧ್ಯ ಪ್ರವೇಶಿಸಿದ ಪೊಲೀಸರು ವಾತಾವರಣವನ್ನು ತಿಳಿಗೊಳಿಸಿದ್ದಾರೆ. ಸಿಪಿಐ ಜಗದೀಶ್ ನೇತೃತ್ವದಲ್ಲಿ ತಾಲೂಕಿನ ಎಲ್ಲಾ ಠಾಣೆಗಳಿಂದ ಪೊಲೀಸರನ್ನು ಬಂದೂಬಸ್ತ್ ಗಾಗಿ ಕರೆಸಲಾಗಿದ್ದು, ಕೆಎಸ್ಸಾರ್ಪಿ ತುಕಡಿ ಅಣಜೂರಿನಲ್ಲಿ ಬೀಡು ಬಿಟ್ಟಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News