ಹಾವೇರಿ ಎಸ್ಪಿಯನ್ನು ಭೇಟಿಯಾದ ಎಪಿಸಿಆರ್ ನಿಯೋಗ: ಅಮಾಯಕರ ಬಿಡುಗಡೆಗೆ ಒತ್ತಾಯ

Update: 2018-09-21 16:49 GMT

ಬೆಂಗಳೂರು, ಸೆ.21: ಇತ್ತೀಚೆಗೆ ಹಾವೇರಿಯ ಹಿರೂರು ಗ್ರಾಮದಲ್ಲಿ ಗಣೇಶೋತ್ಸವ ಸಂದರ್ಭ ನಡೆದ ಘರ್ಷಣೆಯಲ್ಲಿ ಗಾಯಗೊಂಡವರನ್ನು ಅಡ್ವಕೇಟ್ ಅಬ್ದುಲ್ ಸಲಾಮ್ ನೇತೃತ್ವದ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್ (ಎಪಿಸಿಆರ್)ನ ನಿಯೋಗ ಭೇಟಿ ಮಾಡಿತು.

ನಿಯೋಗವು ಪೊಲೀಸರಿಂದ ದೌರ್ಜನ್ಯಕ್ಕೊಳಗಾಗಿದ್ದಾರೆ ಎಂದು ಆರೋಪಿಸಲಾದ ಗರ್ಭಿಣಿಯನ್ನು ಹಾಗು ಜೈಲಿನಲ್ಲಿರುವ 14 ಮಂದಿಯನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಿತು. ಬಾಗಿಲು ಮುರಿದು ಒಳನುಗ್ಗಿದ ಪೊಲೀಸರು ಮನೆಯಲ್ಲಿ ಗಂಡಸರಿಲ್ಲವೇ ಎಂದು ತನಗೆ ಥಳಿಸಿದರು ಎಂದು ಮಹಿಳೆ ಆರೋಪಿಸಿದರು. ನಿಯೋಗವು ಕಾನೂನು ನೆರವನ್ನು ನೀಡುವುದಾಗಿ ಭರವಸೆ ನೀಡಿತು.

ನಂತರ ನಿಯೋಗವು ಹಾವೇರಿ ಎಸ್ಪಿ ಪರಶುರಾಮ್ ರನ್ನು ಭೇಟಿಯಾಯಿತು. ಅಮಾಯಕ ಯುವಕರನ್ನು ಬಂಧಿಸಲಾಗಿದೆ  ಎಂದು ತಿಳಿಸಿದ ನಿಯೋಗ, ಪೊಲೀಸರು ಗರ್ಭಿಣಿಯೊಬ್ಬರ ಮೇಲೆ ದೌರ್ಜನ್ಯವೆಸಗಿದ್ದಾರೆ ಎಂದು ಆರೋಪಿಸಿತು. ಯಾವುದೇ ತಪ್ಪು ಮಾಡದೆ ಮನೆಯಲ್ಲಿ ಮಲಗಿದ್ದ ಯುವಕರು ಇದೀಗ ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಅವರನ್ನು ಬಿಡುಗಡೆಗೊಳಿಸಬೇಕು ಮತ್ತು ಗರ್ಭಿಣಿಯ ಮೇಲೆ ದೌರ್ಜನ್ಯವೆಸಗಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಇದೇ ಸಂದರ್ಭ ಒತ್ತಾಯಿಸಲಾಯಿತು.

ನಿಯೋಗದಲ್ಲಿ ಅಡ್ವಕೇಟ್ ಅಬ್ದುಲ್ ಸಲಾಂ, ನಿವೃತ್ತ ಡಿವೈಎಸ್ಪಿ ಮುಹಮ್ಮದ್ ಫೈಝಲ್, ಎಪಿಸಿಆರ್ ಚಿತ್ರದುರ್ಗ ಜಿಲ್ಲಾ ಅಧ್ಯಕ್ಷ ಇಸ್ಹಾಕ್, ಹಾವೇರಿ ಎಪಿಸಿಆರ್ ಅಧ್ಯಕ್ಷ ಅಝ್ಮತುಲ್ಲಾ, ಅಬ್ದುಲ್ ಖಾದರ್, ದಾದಾ ಪೀರ್, ಝಹೀರ್ ಅಬ್ಬಾಸ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News