ದಲಿತ ಮಹಿಳಾ ಪೊಲೀಸ್ ಅಧಿಕಾರಿಗೆ ಸಚಿವ ಸಾ.ರಾ.ಮಹೇಶ್ ಅವಮಾನ: ದಸಂಸ ಆರೋಪ

Update: 2018-09-21 17:19 GMT

ಮೈಸೂರು,ಸೆ.21: ದಲಿತ ಮಹಿಳಾ ಪೊಲೀಸ್ ಅಧಿಕಾರಿ ಬಿ.ಟಿ.ಕವಿತಾ ಅವರ ವರ್ಗಾವಣೆ ಆದೇಶವನ್ನು ಕೆಲವೇ ಗಂಟೆಗಳಲ್ಲಿ ರದ್ದುಮಾಡಿಸುವ ಮೂಲಕ ಓರ್ವ ದಲಿತ ಮಹಿಳೆಗೆ ಸಚಿವ ಸಾ.ರಾ.ಮಹೇಶ್ ಅಪಮಾನ ಮಾಡಿದ್ದಾರೆ ಎಂದು ದಸಂಸ ಮತ್ತು ರೈತ ಸಂಘದ ಮುಖಂಡರು ಆರೋಪ ಮಾಡಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಚೋರನಹಳ್ಳಿ ಶಿವಣ್ಣ, ಮೈಸೂರು ನಗರಕ್ಕೆ ನೂತನ ಅಪರಾದ ಮತ್ತು ಸಂಚಾರ ವಿಭಾಗದ ಡಿಸಿಪಿಯಾಗಿ ಬಿ.ಟಿ.ಕವಿತಾ ಅವರು ಅಧಿಕಾರ ಸ್ವೀಕರಿಸಿದ್ದರು. ಆದರೆ ಸಚಿವ ಸಾ.ರಾ.ಮಹೇಶ್ ಅವರು ಕೆಲವೇ ಗಂಟೆಗಳಲ್ಲಿ ಅವರ ಆದೇಶವನ್ನು ರದ್ದುಗೊಳಿಸಿವುದರ ಮೂಲಕ ದಲಿತ ಮಹಿಳೆಗೆ ಅಪಮಾನ ಮಾಡಿದ್ದಾರೆ. ಅಧಿಕಾರ ಸ್ವೀಕರಿಸಿದ ಕವಿತಾ ಅವರಿಗೆ ಯಾವುದೇ ಜವಾಬ್ದಾರಿ ನೀಡದೆ ಪೊಲೀಸ್ ಅಯುಕ್ತರು ಸುಮಾರು 5 ಗಂಟೆಗಳ ಕಾಲ ಹಿರಿಯ ಅಧಿಕಾರಿಗಳ ಆದೇಶ ಬರುವವರೆಗೂ ಕಚೇರಿಯಲ್ಲೇ ಕುಳ್ಳಿರಿಸಿದ್ದಾರೆ. ನಂತರ ಮನೆಗೆ ಹೋದ ಕವಿತಾ ಅವರಿಗೆ ರಾತ್ರಿ ಸುಮಾರು 11.30 ರ ಸಮಯದಲ್ಲಿ ದೂರವಾಣಿ ಮೂಲಕ ನೀವು ಕರ್ತವ್ಯಕ್ಕೆ ಬರಬೇಡಿ ನಿಮ್ಮ ವರ್ಗಾವಣೆ ರದ್ದಾಗಿದೆ ಎಂದು ಹೇಳಿದ್ದಾರೆ.

ಹಾಗಾದರೆ ನಿಯಮಾನುಸಾರ ವರ್ಗಾವಣೆ ಮಾಡಿದ್ದ ಆದೇಶವನ್ನು ರದ್ದುಪಡಿಸುವ ಅಗತ್ಯವೇನಿತ್ತು? ಅಧಿಕಾರ ಸ್ವೀಕರಿಸಿದ ಕೆಲವೇ ಹೊತ್ತಿನಲ್ಲಿ ನಗರ ಪೊಲೀಸ್ ಆಯುಕ್ತ ಸುಬ್ರಮಣ್ಯೇಶ್ವರ ರಾವ್ ಅವರಿಗೆ ಸಚಿವ ಸಾ.ರಾ.ಮಹೇಶ್ ದೂರವಾಣಿ ಮೂಲಕ ಆಕೆಗೆ ಅಧಿಕಾರ ನೀಡಬೇಡಿ, ಸ್ವಲ್ಪ ತಡೆಯಿರಿ, ಅವರ ಬದಲಾವಣೆ ಮಾಡಬೇಕಿದೆ ಎಂದು ಹೇಳುವ ಅಗತ್ಯವೇನಿತ್ತು? ಹಾಗದರೆ ಕವಿತಾ ಅವರ ಮೇಲೆ ಸಾ.ರಾ.ಮಹೇಶ್ ಹಠಸಾಧಿಸಿರುವುದಾದರು ಯಾಕೆ? ದಲಿತ ಹೆಣ್ಣುಮಕ್ಕಳು ಉನ್ನತ ಸ್ಥಾನದಲ್ಲಿ ಕರ್ತವ್ಯ ನಿರ್ವಹಿಸಬಾರದೆ ಎಂದು ಪ್ರಶ್ನಿಸಿದರು.

ರಾಜ್ಯ ಸಮ್ಮಿಶ್ರ ಸರಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ದಲಿತರನ್ನು ಕಡೆಗಣಿಸುತ್ತಲೇ ಬಂದಿದೆ. ಬಡ್ತಿ ಮೀಸಲಾತಿ ಜಾರಿಮಾಡುವಂತೆ ರಾಷ್ಟ್ರಪತಿಗಳು ಅಂಕಿತಹಾಕಿದ್ದರೂ, ಮುಖ್ಯಮಂತ್ರಿಗಳು ಮಾತ್ರ ಜಾರಿಗೊಳಿಸಿದೆ ದಲಿತರನ್ನು ನಿರ್ಲಕ್ಷಿಸಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ, ದಲಿತ ಇಂಜಿನಿಯರ್ ಗಳ ಮೇಲೆ ನಿರಂತರ ಕಿರುಕುಳ ನೀಡುತ್ತಿದ್ದಾರೆ. ಸಚಿವ ಸಾ.ರಾ.ಮಹೇಶ್ ದಲಿತ ಹೆಣ್ಣುಮಗಳಾದ ಬಿ.ಟಿ.ಕವಿತಾ ಅವರ ವರ್ಗಾವಾಣೆ ಆದೇಶವನ್ನು ರದ್ದುಪಡಿಸುವುದರ ಮೂಲಕ ದಲಿತರ ಮೇಲಿ ಪ್ರೀತಿ ಎಷ್ಟಿದೆ ಎಂಬುದನ್ನು ತೋರಿಸಿದ್ದಾರೆ ಎಂದು ದೂರಿದರು.

ಕೂಡಲೇ ಬಿ.ಟಿ.ಕವಿತಾ ಅವರನ್ನು ಮೈಸೂರು ನಗರದ ಉಪಪೊಲೀಸ್ ಆಯುಕ್ತರಾಗಿ ಮುಂದುವರೆಸಬೇಕು. ಇಲ್ಲದಿದ್ದರೆ ರೈತ ಸಂಘ, ದಲಿತ ಸಂಘರ್ಷ ಸಮಿತಿ ಉಗ್ರ ಹೋರಾಟವನ್ನು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಮೈಸೂರು ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ದಸಂಸ ಮುಖಂಡರಾದ ಎಡದೊರೆ ಮಹದೇವಯ್ಯ, ಚಕ್ರವರ್ತಿ, ಕೆ.ವಿ.ದೇವೇಂದ್ರ, ಮಹದೇವು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News