ಚಿಕ್ಕಮಗಳೂರು: ಮಹಲ್ ಗ್ರಾಮವನ್ನು ದತ್ತು ಸ್ವೀಕರಿಸಿದ ಎನ್‍ಸಿಸಿ

Update: 2018-09-21 18:03 GMT

ಚಿಕ್ಕಮಗಳೂರು ಸೆ.21: ಇನಾಂದತ್ತಾತ್ರೇಯ ಪೀಠ ಗ್ರಾಮಪಂಚಾಯತ್ ವ್ಯಾಪ್ತಿಯ ಮಹಲ್ ಎಂಬ ಕುಗ್ರಾಮವನ್ನು ಅಭಿವೃದ್ಧಿಪಡಿಸುವ ಹಿನ್ನೆಲೆಯಲ್ಲಿ ಎನ್‍ಸಿಸಿ-15 ಕರ್ನಾಟಕ ಬೆಟಾಲಿಯನ್ ದತ್ತು ಸ್ವೀಕರಿಸಿದೆ.  

ಮಹಲ್‍ನಲ್ಲಿ ಶುಕ್ರವಾರ ಆಯೋಜಿಸಿದ್ದ ದತ್ತು ಸ್ವೀಕಾರ ಕಾರ್ಯಕ್ರಮ ಉದ್ಘಾಟಿಸಿದ ಶಾಸಕ ಸಿ.ಟಿ.ರವಿ, ಗ್ರಾಮವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಸಮಗ್ರ ಯೋಜನೆಯೊಂದನ್ನು ಸಿದ್ಧಪಡಿಸುವಂತೆ ಸೂಚಿಸಿದರು. ಜಿಲ್ಲಾಪಂಚಾಯತ್ ಕಲ್ಯಾಣ ಕಾರ್ಯಕ್ರಮದ ವ್ಯಾಪ್ತಿಗೆ ಬರುವ ಕೆಲಸ ಕಾರ್ಯಗಳ ಜೊತೆಗೆ ಲೋಕೋಪಯೋಗಿ ಇಲಾಖೆ ಮತ್ತು ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿವ್ಯಾಪ್ತಿಯ ನಿರ್ಧಿಷ್ಟ ಕಾರ್ಯಕ್ರಮಗಳನ್ನು ಪಟ್ಟಿಮಾಡುವಂತೆ ಸಭೆಯಲ್ಲಿ ಪಿಡಿಒಗೆ ಸೂಚಿಸಿದರು

'ದತ್ತು ಸ್ವೀಕಾರ'ಕ್ಕೆ ಬೇರೆ ವಿಪರೀತ ಅರ್ಥ ಕಲ್ಪಿಸಬೇಕಾಗಿಲ್ಲ. ಊರು ಬಿಡಿಸುವುದಿಲ್ಲ, ಜಾಗ ವಶಪಡಿಸಿಕೊಳ್ಳುವುದಿಲ್ಲ. ಅದರ ಬದಲಿಗೆ ಗ್ರಾಮವನ್ನು ಮಾದರಿಯಾಗಿಸುವ ನಿಟ್ಟಿನಲ್ಲಿ ಸರಕಾರದ ಅಭಿವೃದ್ಧಿ ಯೋಜನೆಗಳ ಬಗ್ಗೆ ತಿಳುವಳಿಕೆ ನೀಡಿ ಸಹಕರಿಸಲಿದ್ದಾರೆ. ವೈಯಕ್ತಿಕ ಅಭಿವೃದ್ಧಿಯ ಕಡೆಗೂ ತರಬೇತಿ ನೀಡಿ ಒಳ್ಳೆಯ ನಾಗರಿಕರಾಗಿ ಬದುಕುವುದನ್ನು ಕಲಿಸುತ್ತಾರೆ. ಮೂಲಸೌಕರ್ಯ ಅಭಿವೃದ್ಧಿಗೆ ಸಂಬಂಧಪಟ್ಟವರೊಂದಿಗೆ ವ್ಯವಹರಿಸಿ ಗ್ರಾಮದ ಒಳಿತಿಗೆ ಬಂದಿರುವವರ ಬಗ್ಗೆ ಭಯ-ಆತಂಕಬೇಡ ಎಂದು ಶಾಸಕ ರವಿ ನುಡಿದರು. 

ಜಿಲ್ಲಾ ಪೊಲೀಸ್‍ವರಿಷ್ಠಾಧಿಕಾರಿ ಕೆ.ಅಣ್ಣಾಮಲೈ ಮಾತನಾಡಿ, ಮನೆ ಬಾಗಿಲಿಗೆ ಯೋಜನೆಗಳನ್ನು ತಲುಪಿಸಲು ಎನ್‍ಸಿಸಿ ನೆರವಾಗುತ್ತದೆ. ಅರಣ್ಯದಿಂದ ಆವೃತ್ತವಾದ ಎತ್ತರ ಪ್ರದೇಶದ ನಗರದಿಂದ ದೂರವಿರುವ ಮಹಲ್ ಗ್ರಾಮವನ್ನು ದತ್ತುಸ್ವೀಕಾರಕ್ಕೆ ಆಯ್ಕೆ ಮಾಡಿರುವುದರಲ್ಲೇ ನಿಜವಾದ ಕಾಳಜಿ ಅರ್ಥವಾಗುತ್ತದೆ. ಇತರ ಸಂಸ್ಥೆಗಳಿಗಿಂತ ಎನ್‍ಸಿಸಿ ಭಿನ್ನವಾದ ಶಿಸ್ತುಬದ್ಧ ಸಂಸ್ಥೆ. ಸಸಿ ನೆಡುವುದಷ್ಟೇ ಅಲ್ಲ ಹೆಮ್ಮರವಾಗಿ ಬೆಳೆಯುವವರೆಗೂ ಜೊತೆಗಿದ್ದು ಸಹಕಾರಿಸುವುರೆಂದು ಆಶಿಸಿದರು.

ಎನ್‍ಸಿಸಿ 15ಕರ್ನಾಟಕ ಬೆಟಾಲಿಯನ್ ಹಾಸನ ಕಮಾಂಡಿಂಗ್ ಅಧಿಕಾರಿ ಡಿ.ಕೆ.ಸಿಂಗ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಧಾನಮಂತ್ರಿಗಳ ಆಸಕ್ತಿಯ ಪರಿಣಾಮವಾಗಿ ಎನ್‍ಸಿಸಿಯಿಂದ ಪ್ರತಿ ಕಮಾಂಡಿಂಗ್ ವ್ಯಾಪ್ತಿಯಲ್ಲಿ ಒಂದುಗ್ರಾಮವನ್ನು ದತ್ತು ತೆಗೆದುಕೊಂಡು ಅದರ ಸರ್ವಾಂಗೀಣ ಅಭಿವೃದ್ಧಿಗೆ ನೆರವು ನೀಡುವ ಯೋಜನೆ ರೂಪುಗೊಂಡಿದೆ. ಯಾವುದೇ ಹಣಕಾಸಿನ ನೆರವಿಲ್ಲದಿದ್ದರೂ ಗ್ರಾಮದ ಸಮಸ್ಯೆಗಳನ್ನು ಸಂಬಂಧಪಟ್ಟವರ ಗಮನಕ್ಕೆ ತಂದು ಪರಿಹರಿಸಲು ಶ್ರಮಿಸಲಾಗುವುದು. 

ಹಾಸನ ಕಮಾಂಡರ್ ವ್ಯಾಪ್ತಿಯಲ್ಲಿ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ 17ಎನ್‍ಸಿಸಿ ಘಟಕಗಳು ಕಾರ್ಯನಿರ್ವಹಿಸುತ್ತಿದ್ದು, 1800 ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತಿದೆ. ಈ ಗ್ರಾಮದ ಇಬ್ಬರು ವಿದ್ಯಾರ್ಥಿಗಳು ಐಡಿಎಸ್‍ಜಿ ಕಾಲೇಜಿನ ಘಟಕದಲ್ಲಿ ಕಾರ್ಯನಿರ್ವಹಿಸುತ್ತಿದ್ದು ಅವರೊಂದಿಗೆ ಗ್ರಾಮದ ಆದ್ಯತೆಗಳ ಸಮೀಕ್ಷೆ ನಡೆಸಲಾಗಿದೆ. ಜಿ.ಪಂ.ಮುಖ್ಯಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳಿಗೆ ಪತ್ರಮೂಲಕ ತಿಳಿಸಲಾಗಿದೆ ಎಂದು ವಿವರಿಸಿದರು.

ಶಿಕ್ಷಣ ತಜ್ಞ ಬಿ.ಎಚ್.ನರೇಂದ್ರಪೈ, ರೋಟರಿ ಅಧ್ಯಕ್ಷ ಅಭಿಜಿತ್‍ ಪೈ, ಜಿ.ಪಂ.ಸದಸ್ಯೆ ಜಸಿಂತಾ ಅನಿಲ್, ಐ.ಡಿ.ಪೀಠ ಗ್ರಾ.ಪಂ.ಉಪಾಧ್ಯಕ್ಷೆ ದೇವಕಿ, ಸದಸ್ಯ ಮಂಜುನಾಥ, ಪಿಡಿಓ ರಾಜಕುಮಾರ ಮತ್ತಿತರರು ಪಾಲ್ಗೊಂಡಿದ್ದರು. ಹಾಸನದ ಕ್ಯಾಪ್ಟನ್ ಕುಸುಮಾ ಸ್ವಾಗತಿಸಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News