ಕೊಡಗಿನ ನಿರಾಶ್ರಿತರಿಗೆ ನಿವೇಶನದ ಜೊತೆಗೆ 7 ಲಕ್ಷ ರೂ. ನೀಡಲು ನಿರ್ಧಾರ: ಸಚಿವ ಸಾ.ರಾ.ಮಹೇಶ್

Update: 2018-09-22 14:39 GMT

ಮಡಿಕೇರಿ, ಸೆ.22: ಕೊಡಗಿನಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಮನೆ ಕಳೆದುಕೊಂಡವರಿಗೆ ಮನೆ ನಿರ್ಮಿಸಿಕೊಳ್ಳಲು ನಿವೇಶನದ ಜೊತೆಗೆ ಒಂದೇ ಬಾರಿಗೆ 7 ಲಕ್ಷ ರೂ.ಗಳನ್ನು ಒದಗಿಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಪ್ರವಾಸೋದ್ಯಮ ಹಾಗೂ ರೇಷ್ಮೆ ಖಾತೆ ಸಚಿವ ಸಾ.ರಾ.ಮಹೇಶ್ ತಿಳಿಸಿದ್ದಾರೆ.

ಅವರ ಸ್ವಕ್ಷೇತ್ರವಾದ ಕೆ.ಆರ್.ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಾತನಾಡಿದ ಅವರು, ರಾಜ್ಯ ಸರಕಾರದಿಂದ 6 ಲಕ್ಷ ಹಾಗೂ ಕೇಂದ್ರೀಯ ವಿಪತ್ತು ನಿಧಿಯ ಪರಿಹಾರ ಸೇರಿದಂತೆ 7 ಲಕ್ಷ ರೂ.ಗಳನ್ನು ನೀಡಲಾಗುವುದು. ಅಲ್ಲದೆ ಹಾನಿಗೊಂಡ ಮನೆ ದುರಸ್ತಿಗೆ ಒಂದು ಲಕ್ಷ, ಅಗತ್ಯ ವಸ್ತುಗಳ ಖರೀದಿಗೆ 50 ಸಾವಿರ, ಮನೆ ನಿರ್ಮಾಣವಾಗುವವರೆಗೆ ಬಾಡಿಗೆ ಮನೆಯಲ್ಲಿ ವಾಸಿಸಲು ಮಾಸಿಕ 10 ಸಾವಿರ ರೂ. ಒದಗಿಸಲು ತೀರ್ಮಾನಿಸಲಾಗಿದೆ ಎಂದು ವಿವರಿಸಿದರು.

ನಿರಾಶ್ರಿತ ಕುಟುಂಬಗಳಿಗೆ ತಲಾ 50ಸಾವಿರ
ಜಿಲ್ಲೆಯಲ್ಲಿ ಭೂಕುಸಿತ ಹಾಗೂ ಪ್ರವಾಹದಿಂದ ನಿರಾಶ್ರಿತರಾದ ಕುಟುಂಬಗಳಿಗೆ ತಲಾ 50 ಸಾವಿರ ರೂ.ಗಳ ಪರಿಹಾರ ನೀಡಲು ಸರಕಾರ ತೀರ್ಮಾನಿಸಿದೆ.

ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ ಹಾಗೂ ರಾಜ್ಯ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯ ಅನ್ವಯ ಪ್ರಕೃತಿ ವಿಕೋಪಕ್ಕೆ ತುತ್ತಾದ ಪ್ರತಿ ಕುಟುಂಬಕ್ಕೆ ಬಟ್ಟೆಯ ನೆರವಿಗಾಗಿ 1800 ರೂ.ಹಾಗೂ ದಿನಬಳಕೆ ವಸ್ತುಗಳ ಖರೀದಿಗೆ 2ಸಾವಿರ ರೂ.ಗಳನ್ನಷ್ಟೇ ನೀಡಲು ಅವಕಾಶವಿತ್ತು. ಆದರೆ ಈ ಪರಿಹಾರ ಮೊತ್ತ ಕಡಿಮೆಯಿದ್ದು, ಹೆಚ್ಚಿನ ಪರಿಹಾರ ನೀಡಬೇಕು ಎಂದು ಸಂತ್ರಸ್ತರು ಬೇಡಿಕೆ ಇಟ್ಟಿದ್ದರು. ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಕೊಡಗಿಗೆ ಭೇಟಿ ನೀಡಿ ಸಂದರ್ಭವೂ ಈ ಬೇಡಿಕೆ ಮಂಡಿಸಲಾಗಿತ್ತು. ಪ್ರಕೃತಿ ವಿಕೋಪ ನಿಧಿಯಿಂದ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರೂ ಸರಕಾರಕ್ಕೆ ಪತ್ರ ಬರೆದಿದ್ದರು.

ಈ ಹಿನ್ನೆಲೆಯಲ್ಲಿ ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ, ಮುಖ್ಯಮಂತ್ರಿಗಳ ಪರಿಹಾರ ನಿಧಿ ಮತ್ತು ಪ್ರಕೃತಿ ವಿಕೋಪ ನಿಧಿಯಲ್ಲಿ ಇರುವ 62 ಕೋಟಿ ರೂ. ಮೊತ್ತದಲ್ಲಿ ನಿರಾಶ್ರಿತ ಕುಟುಂಬಗಳಿಗೆ ಹೆಚ್ಚಿನ ಪರಿಹಾರ ನೀಡಲು ತೀರ್ಮಾನಿಸಲಾಗಿದೆ.

ಪೂರ್ಣ ಪ್ರಮಾಣದಲ್ಲಿ 186, ಗಂಭೀರ ಪ್ರಮಾಣದಲ್ಲಿ 530 ಹಾಗೂ ಭಾಗಶಃ 404 ಸೇರಿದಂತೆ 1156 ಮನೆಗಳು ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಡಡಿ ಹಾನಿಗೀಡಾಗಿದ್ದು, ಹಾನಿಯಾದ ಪ್ರತಿ ಕುಟುಂಬಕ್ಕೆ 50 ಸಾವಿರ ರೂ.ಗಳ ಪರಿಹಾರ ನೀಡಲು ಸುಮಾರು 5.78 ಕೋಟಿ ರೂ.ಗಳ ಅಗತ್ಯವಿರುವುದಾಗಿ ಹೇಳಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News