ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಜಲದಾರೆ ಯೋಜನೆ ಜಾರಿ: ಕುಮಾರಸ್ವಾಮಿ

Update: 2018-09-22 16:09 GMT

ಚಿಕ್ಕಮಗಳೂರು,ಸೆ.22: ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವ ಸಲುವಾಗಿ ಜಲದಾರೆ ಯೋಜನೆಯನ್ನು ಜಾರಿಗೆ ತರಲು ಡಿ.ಪಿ.ಆರ್. ಸಿದ್ಧಪಡಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಡಿಯುವ ನೀರಿಗೆ ಹೆಚ್ಚಿನ ಒತ್ತು ನೀಡಲು ಸರ್ಕಾರ ತೀರ್ಮಾನಿಸಿದೆ. ಸುಮಾರು 60 ಸಾವಿರ ಕೋಟಿ ರೂ. ವೆಚ್ಚದಲ್ಲಿ ರಾಜ್ಯದ ಪ್ರತಿಯೊಂದು ಗ್ರಾಮದಲ್ಲಿಯೂ ನಲ್ಲಿ ನೀರು ಒದಗಿಸಲು ಉದ್ದೇಶಿಸಲಾಗಿದೆ. ಯೋಜನೆಗೆ ಯಾವ ರೀತಿ ಹಣ ಒದಗಿಸುವುದು, ಯಾವ ರೀತಿ ಯೋಜನೆ ಜಾರಿಗೆ ತರುವುದು ಎಂಬ ಬಗ್ಗೆ ಸಮಗ್ರ ವರದಿ ಸಿದ್ದಪಡಿಸಲು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಸೂಚಿಸಲಾಗಿದೆ ಎಂದರು.

ಅತಿವೃಷ್ಟಿಯಿಚಿದ ಹಾನಿಗೊಳಗಾಗಿರುವ 7 ಜಿಲ್ಲೆಗಳಿಗೆ ತುರ್ತು ಪರಿಹಾರ ಕಾಮಗಾರಿಗಳಿಗೆ 200 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ಆದೇಶಿಸಲಾಗಿತ್ತು. ಆದರೆ ಇತ್ತೀಚೆಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಜಿಲ್ಲಾವಾರು ಬಿಡುಗಡೆ ಮಾಡಲಾಗಿದ್ದ ಅನುದಾನದ ಆದೇಶವನ್ನು ಹಿಂಪಡೆದು ಇಲಾಖಾವಾರು ಅನುದಾನ ಬಿಡುಗಡೆಗೆ ಆದೇಶಿಸಿದ್ದಾರೆ. ಈ ಬಗ್ಗೆ ಸೋಮವಾರವೇ ಮುಖ್ಯ ಕಾರ್ಯದರ್ಶಿಗಳು ಹಾಗೂ ಸಚಿವರುಗಳೊಂದಿಗೆ ಚರ್ಚಿಸಿ ಅನುದಾನ ಬಿಡುಗಡೆ ಮಾಡಿಸುವುದಾಗಿ ತಿಳಿಸಿದರು.

ಅತಿವೃಷ್ಟಿಯಿಂದ ಆಗಿರುವ ನಷ್ಠದ ಪರಿಹಾರಕ್ಕೆ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನಮಂತ್ರಿಗಳ ಬಳಿ ನಿಯೋಗ ತೆರಳಿ ಮನವಿ ಮಾಡಿಕೊಳ್ಳಲಾಗಿತ್ತು. ಮನವಿಗೆ ಸ್ಪಂದಿಸಿದ ಕೇಂದ್ರ ಸರ್ಕಾರವು ಕೇಂದ್ರದಿಂದ ಅಧಿಕಾರಿಗಳ ತಂಡವನ್ನು ರಾಜ್ಯಕ್ಕೆ ಕಳುಹಿಸಿತ್ತು. ತಂಡವು ಸಮೀಕ್ಷೆ ನಡೆಸಿದ್ದು, ಈಗಾಗಲೆ ಕೇಂದ್ರ ಸರ್ಕಾರಕ್ಕೆ ತನ್ನ ವರದಿಯನ್ನೂ ಸಲ್ಲಿಸಿದೆ. ಕೇಂದ್ರದಿಂದ ಈವರೆಗೂ ಯಾವುದೇ ಅನುದಾನ ಬಿಡುಗಡೆಯಾಗಿಲ್ಲ ಎಂದರು.

ಇದೇ ಮೊದಲ ಬಾರಿಗೆ ಕೇಂದ್ರದಿಂದ ಅನುದಾನ ಬರುವ ಮೊದಲೆ ರಾಜ್ಯ ಸರ್ಕಾರ ಅತಿವೃಷ್ಟಿ ಪರಿಹಾರಕ್ಕೆ ಅನುದಾನವನ್ನು ಬಿಡುಗಡೆ ಮಾಡಿದೆ. ಎನ್.ಡಿ.ಆರ್.ಎಫ್. ಕಾಯಿದೆಯನ್ನು ರದ್ದುಪಡಿಸಿ ಹೆಚ್ಚಿನ ಪರಿಹಾರವನ್ನೂ ಕೊಡಲಾಗಿದೆ. ಮಳೆಯಿಂದ ಮನೆಗೆ ಹಾನಿಯಾದಾಗ ಕೊಡಲಾಗುತ್ತಿದ್ದ ಪರಿಹಾರವನ್ನು 5-6 ಪಟ್ಟು ಹೆಚ್ಚಿಸಲಾಗಿದೆ ಎಂದು ಹೇಳಿದರು.

ಲೋಕೋಪಯೋಗಿ ಇಲಾಖೆ ರಸ್ತೆ, ಸೇತುವೆಗಳೂ ಅಪಾರ ಪ್ರಮಾಣದಲ್ಲಿ ಮಳೆಯಿಂದ ಹಾನಿಗೊಳಗಾಗಿವೆ. ಯುದ್ದೋಪಾದಿಯಲ್ಲಿ ಪರಿಹಾರ ಕಾಮಗಾರಿಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಸುದ್ದಿಗೋಷ್ಟಿಯಲ್ಲಿ ಲೋಕೋಪಯೋಗಿ ಇಲಾಖೆ ಸಚಿವ ಹೆಚ್.ಡಿ.ರೇವಣ್ಣ, ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್, ಶಾಸಕ ಟಿ.ಡಿ.ರಾಜೇಗೌಡ, ವಿಧಾನಪರಿಷತ್ ಸದಸ್ಯರುಗಳಾದ ಎಸ್.ಎಲ್.ಬೋಜೇಗೌಡ, ಎಸ್.ಎಲ್.ಧರ್ಮೇಗೌಡ, ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ, ಜಿ.ಪಂ. ಸಿ.ಇ.ಓ. ರಾಗಪ್ರಿಯಾ, ಎಸ್.ಪಿ. ಕೆ.ಅಣ್ಣಾಮಲೈ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News