"ನಮ್ಮ ಶಾಸಕರಿಗೆ ಏನೇನು ಆಮಿಷ ಒಡ್ಡಿದ್ದಾರೆ ಎಂಬುದನ್ನು ಬಹಿರಂಗಪಡಿಸಲೇ ?"

Update: 2018-09-22 16:17 GMT

ಚಿಕ್ಕಮಗಳೂರು,ಸೆ.22: ಬಿಜೆಪಿಯವರು ಮತ್ತೋರ್ವ ಜೆಡಿಎಸ್ ಶಾಸಕರನ್ನು ಸೆಳೆಯುವ ಯತ್ನ ಮಾಡಿದ್ದಾರೆ. ಆದರೆ ಸರ್ಕಾರ ಸುಭದ್ರವಾಗಿದೆ. ಯಾವುದೇ ಕಾರಣಕ್ಕೂ ಸರ್ಕಾರವನ್ನು ಬೀಳಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಶನಿವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನೇ ನಮ್ಮ ಪಕ್ಷದ ಓರ್ವ ಶಾಸಕರನ್ನು ಅವರ ಬಳಿ ಕಳಿಸಿದ್ದೆ. ಬಿ.ಎಸ್.ಯಡಿಯೂರಪ್ಪ, ಶೋಭ ಕರಂದ್ಲಾಜೆ, ಯಡಿಯೂರಪ್ಪ ಅವರ ಮಗ ಹಾಗೂ ಮತ್ತೊಬ್ಬರು ನಮ್ಮ ಶಾಸಕರಿಗೆ ಏನೇನು ಆಮಿಷ ಒಡ್ಡಿದರು, ಏನೇನು ಹೇಳಿದರು ಎಂಬುದನ್ನು ಬಹಿರಂಗಪಡಿಸಲೇ ಎಂದು ಯಡಿಯೂರಪ್ಪ ಅವರಿಗೆ ನೇರವಾಗಿ ಸವಾಲು ಹಾಕಿದರು.

ನಮ್ಮ ಸರ್ಕಾರ ಸುಭದ್ರವಾಗಿದೆ. ಕೆಲವು ಮಾಧ್ಯಮಗಳಲ್ಲಿ 6 ಗಂಟೆ, 9 ಗಂಟೆಗಳಲ್ಲಿ ಸರ್ಕಾರ ಬೀಳುತ್ತದೆ ಎಂಬ ಸುದ್ದಿ ಬರುತ್ತಿದೆ. ನಾನು ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಮಾಧ್ಯಮದವರ ದಿಕ್ಕು ತಪ್ಪಿಸುವ ಕೆಲಸವನ್ನು ಕೆಲವರು ಮಾಡುತ್ತಿದ್ದಾರೆ. ಎಷ್ಟು ದಿನ ಇಂತಹದೇ ಸುದ್ಧಿ ಮಾಡುತ್ತೀರ ಎಂದು ಮಾಧ್ಯಮಗಳಿಗೆ ಪ್ರಶ್ನಿಸಿದರು.

ನಾನಾಡಿದ ಒಂದು ಮಾತಿನ ಬಗ್ಗೆ ತೀವ್ರವಾಗಿ ಚರ್ಚೆಯಾಗುತ್ತಿದೆ. ಬಿಜೆಪಿ ಮುಖಂಡರು ರಾಜ್ಯಕ್ಕೆ ಬೆಂಕಿ ಹಚ್ಚುತ್ತೇವೆ ಎಂದಿದ್ದು ಅಪರಾಧವಲ್ಲ. ನಾನು ಈ ರೀತಿ ಹೇಳಿರುವುದು ದೊಡ್ಡ ಅಪರಾಧ ಎಂದು ಬಿಂಬಿಸಲಾಗುತ್ತಿದೆ. ರಾಜ್ಯಪಾಲರಿಗೆ ನಮ್ಮ ವಿರುದ್ಧ ದೂರು ನೀಡಿದ್ದಾರೆ. ರಾಜ್ಯಪಾಲರನ್ನು ಭೇಟಿ ಮಾಡಿ ಎಲ್ಲ ವಿವರಣೆ ನೀಡುತ್ತೇನೆ ಎಂದು ಹೇಳಿದರು.

ಬಿಜೆಪಿಯವರು ಎಲ್ಲ ವಿಚಾರದ ಬಗ್ಗೆ ಮಾತನಾಡುತ್ತಾರೆ. ನರೇಂದ್ರ ಮೋದಿ ಅವರು ಪ್ರಧಾನಿಯಾದ ನಂತರ ಪ್ರತಿನಿತ್ಯ ಪೆಟ್ರೋಲ್, ಡೀಸಲ್ ಬೆಲೆ ಏರುತ್ತಿದೆ. ಇಡೀ ದೇಶದಲ್ಲಿ ಮೊದಲ ಬಾರಿಗೆ ತಮ್ಮ ಸಮ್ಮಿಶ್ರ ಸರ್ಕಾರ ಶೇ.3.5ರಷ್ಟು ಸೆಸ್ ಇಳಿಸಿತು. ಇಡೀ ದೇಶದಲ್ಲಿಯೇ ಅತೀ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸಲ್ ನೀಡುತ್ತಿರುವ ರಾಜ್ಯ ನಮ್ಮದಾಗಿದೆ. ಈ ಬಗ್ಗೆ ಯಾರೂ ಸಹ ಮಾತನಾಡುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಈ ಹಿಂದೆ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡುವುದಾಗಿ ಬಿಜೆಪಿಯವರು ಹೇಳಿಕೊಳ್ಳುತ್ತಿದ್ದರು. ಆದರೆ ಈಗ ಅದೇ ಕಾಂಗ್ರೆಸ್ ಶಾಸಕರನ್ನು ತಮ್ಮ ಪಕ್ಷಕ್ಕೆ ಸೆಳೆದುಕೊಳ್ಳಲು ಅವರ ಕಾಲು ಹಿಡಿಯುತ್ತಿದ್ದಾರೆ. ಈ ರೀತಿ ಮಾಡಿ ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಬಿಜೆಪಿಯವರು ಹೆಣಗಾಡುತ್ತಿದ್ದಾರೆ. ಅವರಿಗೆ ಇಂತಹ ಪರಿಸ್ಥಿತಿ ಬಂದಿರುವುದು ದುರ್ದೈವ ಎಂದು ವ್ಯಂಗ್ಯವಾಡಿದರು.

ಇಂದು ಪಾಂಡವಪುರದಲ್ಲಿ ಸಾಲಭಾದೆಯಿಂದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಅವರು ತನಗೆ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಹಿಂದೆ ಅವರು ಜನತಾದರ್ಶನದಲ್ಲಿ ತನ್ನನ್ನು ಭೇಟಿಯಾಗಿ ಮನವಿ ನೀಡಿದ್ದರು. 15 ಲಕ್ಷ ರೂ. ಖಾಸಗಿಯವರಿಂದ ಸಾಲ ಮಾಡಿರುವುದಾಗಿ ಹೇಳಿದ್ದರು. ಅವರಿಗೆ ಧೃತಿಗೆಡಬೇಡಿ. ಇದಕ್ಕೆ ನಿಯಂತ್ರಣ ಹಾಕಲು ಕಾನೂನು ಜಾರಿಗೆ ತರಲಾಗುವುದು ಎಂದು ಧೈರ್ಯ ಹೇಳಿದ್ದೆ. ಆದರೂ ಆತ ತನ್ನ ಪತ್ನಿ ಹಾಗೂ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವುದು ನೋವಿನ ವಿಚಾರ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News