ಮೂಡಿಗೆರೆ: ಜಾಲಾತಾಣದಲ್ಲಿ ಮಸೀದಿ ಹೆಸರು ದುರ್ಬಳಕೆ ಆರೋಪ; ದೂರು

Update: 2018-09-22 16:20 GMT

ಮೂಡಿಗೆರೆ, ಸೆ.22: ಜಾನುವಾರು ಮಾಂಸದ ವಿಚಾರದಲ್ಲಿ ಕೆಲ ವ್ಯಕ್ತಿಗಳು ಸಂಘಟನೆಗಳ ಹೆಸರು ಹೇಳಿಕೊಂಡು ಅಣುಜೂರು ಜುಮ್ಮಾ ಮಸೀದಿಯ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದು, ಅಂತಹ ಸಂಘಟನೆಗಳು ಮತ್ತು ಜಾಲತಾಣದಲ್ಲಿ ಮಸೀದಿ ಹೆಸರು ಹರಿಯಬಿಟ್ಟವರ ವಿರುದ್ಧ ಮಸೀದಿ ಆಡಳಿತ ಸಮಿತಿ ವತಿಯಿಂದ ಜಿಲ್ಲಾ ಪೊಲೀಸ್ ಮುಖ್ಯಾಕಾರಿ ಕೆ.ಅಣ್ಣಮಲೈ ಅವರಿಗೆ ದೂರು ನೀಡಿದ್ದಾರೆ. 

ಅಣಜೂರು ಗ್ರಾಮದ ನಿವಾಸಿಯೊಬ್ಬರ ಮನೆ ಹಿಂಭಾಗದಲ್ಲಿ ಕುರಿ ಸಾಕಾಣಿಕೆಗಾಗಿ ಶೆಡ್ ನಿರ್ಮಿಸಿದ್ದು, ಅದರೊಳಗೆ ಇಬ್ಬರು ಯುವಕರು ಜಾನುವಾರು ಮಾಂಸ ಮಾಡಿದ್ದಾರೆಂದು ಹೇಳಿಕೊಂಡು ಸಾಮಾಜಿಕ ಜಾಲಾ ತಾಣಗಳಲ್ಲಿ ಮತ್ತು ಜನ್ನಾಪುರದಲ್ಲಿ ಕೆಲವರು ನಡೆಸಿದ ಪ್ರತಿಭಟನೆ ವೇಳೆ ಮಸೀದಿ ಹಿಂಭಾಗದಲ್ಲಿ 60 ಜಾನುವಾರುಗಳನ್ನು ಕತ್ತರಿಸಿ ಮಾಂಸ ಮಾರಾಟ ಮಾಡಿದ್ದಾರೆಂದು ಹೇಳಿಕೊಂಡಿದ್ದಾರೆ. ಮಾಂಸ ಮಾಡಿದ ಸ್ಥಳಕ್ಕೂ ಮಸೀದಿ ಹಿಂಭಾಗಕ್ಕೂ ಸಂಬಂಧವೇ ಇಲ್ಲ. ಮಸೀದಿ ಆವರಣದಲ್ಲಿ ಯಾವುದೇ ಕಾನೂನು ಬಾಹೀರ ಚಟುವಟಿಕೆಗಳಿಗೆ ಅವಕಾಶವಿಲ್ಲ. ಹಾಗಾಗಿ ಸುಮ್ಮನೆ ಮಸೀದಿ ಹೆಸರು ದುರ್ಬಳಕೆ ಮಾಡಿಕೊಂಡಿರುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News