ಶೃಂಗೇರಿ ಶಾರದಾಂಬೆ ಮಠಕ್ಕೆ ಸಿಎಂ ಕುಮಾರಸ್ವಾಮಿ, ಕುಟುಂಬ ಭೇಟಿ

Update: 2018-09-22 16:25 GMT

ಶೃಂಗೇರಿ, ಸೆ.22: ಇಲ್ಲಿನ ಶಾರದಾಂಬೆ ಮಠಕ್ಕೆ ಜೆಡಿಎಸ್ ವರಿಷ್ಠ, ಮಾಜಿ ಪ್ರಧಾನಿ ದೇವೇಗೌಡ, ಪತ್ನಿ ಚೆನ್ನಮ್ನ, ಮುಖ್ಯಮಂತ್ರಿ ಕುಮಾರಸ್ವಾಮಿ, ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ, ಅನಿತಾಕುಮಾರಸ್ವಾಮಿ ಅವರೊಂದಿಗೆ ಶನಿವಾರ ಭೇಟಿ ನೀಡಿದರು.

ಈ ವೇಳೆ ಶ್ರೀಮಠದ ಆಡಳಿತಾಧಿಕಾರಿ ಡಾವಿ.ಆರ್.ಗೌರೀಶಂಕರ್ ಹಾಗೂ ಸಿಬ್ಬಂದಿವರ್ಗದವರು ಪೂರ್ಣಕುಂಭದೊಂದಿಗೆ ದೇವೇಗೌಡ ಕುಟುಂಬದವರನ್ನು ಸ್ವಾಗತಿಸಿದರು. ಶಾರದಾಂಬ ದೇವಾಲಯದ ಹೊರ ಆವರಣದಲ್ಲಿರುವ ಚಂದ್ರಶೇಖರಭಾರತೀ ಸ್ವಾಮೀಜಿ ಸಭಾಂಗಣದ ಯಾಗಮಂಟಪದಲ್ಲಿ ಗಣಪತಿಗೆ ಸಂಕಲ್ಪ ನೆರವೇರಿಸಿದ ದೇವೇಗೌಡ ಕುಟುಂಬಸ್ಥರು, ನರಸಿಂಹವನದ ಗುರುನಿವಾಸದಲ್ಲಿ ಭಾರತೀ ತೀರ್ಥ ಮಹಾಸ್ವಾಮೀಜಿ ಹಾಗೂ ವಿಧುಶೇಖರಭಾರತೀ ಅವರನ್ನು ಭೇಟಿ ಮಾಡಿ ಆರ್ಶೀವಚನ ಪಡೆದರು.

ಇದೇ ವೇಳೆ ಸುದ್ಧಿಗಾರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಹಾಸನದಲ್ಲಿ ಸಂಜೆ ವಾಸ್ತವ್ಯ ಹೂಡಲಿದ್ದು, ಅಲ್ಲಿ ಕರೆಯಲಾಗಿರುವ ಜೆಡಿಎಸ್ ಶಾಸಕಾಂಗ ಸಭೆಗೆ ಎಲ್ಲರನ್ನೂ ಅಹ್ವಾನಿಸಿದ್ದು ನಾನು ಕೂಡಾ ಶಾಸಕಾಂಗ ಸಭೆಯಲ್ಲಿ ಭಾಗಿಯಾಗುತ್ತೇನೆ. ಸಭೆಯಲ್ಲಿ ಯಾವುದೇ ವಿಶೇಷತೆ ಇಲ್ಲ. ಬಾಂಬೆಗೆ ಹೋಗಿದ್ದಾರೆ ಎಂದು ಹೇಳುತ್ತಿದ್ದ ಶಾಸಕರು ಸಹ ಸಭೆಯಲ್ಲಿ ಭಾಗವಹಿಸುತ್ತಾರೆ ಎಂದ ಅವರು "ದಂಗೆ" ಎಂದರೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಭಟನೆ ಎಂದು ಅರ್ಥ. ನಾನು ಪ್ರಜಾಪ್ರಭುತ್ವ ವಿರೋಧಿ ಮಾತು ಆಡಿಲ್ಲ. ಮಾನ್ಯ ಯಡಿಯೂರಪ್ಪ ಅವರು ರಾಜ್ಯಕ್ಕೆ ಬೆಂಕಿ ಇಡುತ್ತೇವೆ ಎಂದು ಪದೇಪದೇ ಹೇಳುತ್ತಿದ್ದರು. ಬೆಂಕಿ ಹಚ್ಚುವ ಹೇಳಿಕೆ ನೀಡಿದರೆ ಅದು ಪ್ರಜಾಪ್ರಭುತ್ವ. ದಂಗೆ ಎಂದು ನಾನು ಹೇಳಿದ್ದು ಪ್ರಜಾಪ್ರಭುತ್ವ ವಿರೋಧಿ ಹೇಳಿಕೆ ಎಂದು ಬಿಜೆಪಿ ಅವರು ಪ್ರತಿಪಾದಿಸಿದ್ದಾರೆ. ಇದನ್ನು ಜನತೀರ್ಮಾನ ಮಾಡುತ್ತಾರೆ. ಬಿಜೆಪಿಯವರು ರಾಜ್ಯಪಾಲರಿಗೆ ನನ್ನ ವಿರುದ್ಧ ದೂರು ನೀಡಿದ್ದಾರೆ. ರಾಜ್ಯಭವನದಿಂದ ವಿವರಣೆ ಪತ್ರ ಬಂದಲ್ಲಿ ಅದಕ್ಕೆ ತಕ್ಕ ಉತ್ತರ ನೀಡುತ್ತೇನೆ ಎಂದರು.

ಜನರಿಗೆ ಒಳಿತಾಗಲಿ ಎಂದು ಪೂಜೆ ಸಲ್ಲಿಸಲು ಬಂದಿದ್ದೇನೆ. ಕ್ಷೇತ್ರಕ್ಕೆ ನಿರಂತರವಾಗಿ ಬರುತ್ತಿದ್ದೇನೆ. 

ಮಂಡ್ಯದ ರೈತ ಕುಟುಂಬ ಸಾಲಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಅತೀವ ನೋವು ತಂದಿದೆ.ಸಹಕಾರಿ ಸಂಘದ ಸಾಲಮನ್ನಾ ಆದೇಶವನ್ನು ಈಗಾಗಲೇ ಹೊರಡಿಸಲಾಗಿದೆ. ರಾಷ್ಟೀಕೃತ ಬ್ಯಾಂಕಿನ ಸಾಲ ಮನ್ನಾದ ಆದೇಶ ಕೂಡಾ ಮಾಡಲಾಗಿದೆ. ಸಾಲಮನ್ನಾಕ್ಕೆ ಹಣದ ಕೊರತೆಯಿಲ್ಲ. ರೈತರು ತಾಳ್ಮೆಗೆಡಬಾರದು, ತಾವು ಮಾಡಿರುವ ಸಾಲದ ಬಗ್ಗೆ ಧೃತಿಗೆಡುವುದು ಬೇಡ. ತಾಯಿ ಶಾರದಾಂಬೆ ಸನ್ನಿಧಿಯಲ್ಲಿ ನಾನು ರೈತರ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥನೆ ಮಾಡಿದ್ದೇನೆ. ನಾನು ರಾಜ್ಯದ ರೈತರಿಗೆ ನೀಡಿದ ಮಾತಿಗೆ ಬದ್ಧನಾಗಿದ್ದೇನೆ ಎಂದರು.

ಟೆಂಪಲ್ ರನ್-ಸಿ.ಎಂ ಗರಂ;
ನಾನು ದೇವರ ದರ್ಶನಕ್ಕೆ ಹೋಗುವುದರ ಕುರಿತು ಮಾಧ್ಯಮದ ಮೂಲಕ ಹೆಚ್ಚಿನ ಪ್ರಚಾರ ನೀಡುತ್ತಿದ್ದೀರಿ. ರೈತರ ಸಾಲಮನ್ನಾದ ಬಗ್ಗೆ ರಾಷ್ಟ್ರೀಕೃತ ಬ್ಯಾಂಕ್‍ಗೆ ನೀಡಿದ ಬಗ್ಗೆ ನೀವು ಯಾಕೆ ಹೆಚ್ಚಿನ ಪ್ರಚಾರ ನೀಡಿಲ್ಲ? ಎಂದ ಅವರು ಕ್ಷೇತ್ರಕ್ಕೆ ಅಧಿಕಾರವಿಲ್ಲದಾಗ ಕೂಡಾ ನಾನು ಬಂದಿದ್ದೇನೆ.ಈಗ ಅಧಿಕಾರದಲ್ಲಿದ್ದಾಗ ಮಾಧ್ಯಮದವರು ನನ್ನ ಟೆಂಪಲ್‍ರನ್ ಬಗ್ಗೆ ಹೆಚ್ಚಿನ ಪ್ರಚಾರ ನೀಡಿ ಸುಮ್ಮನೇ ನನಗೆ ಹಿಂಸೆ ಮಾಡುತ್ತಿದ್ದಾರೆ ಎಂದರು.

ರಾಜ್ಯದ ಹಲವು ಕಡೆ ಬರಗಾಲವಿದೆ. ಅದರಿಂದ ಜನರಿಗೆ ಸಮಸ್ಯೆ ಎದುರಾಗದೆ ಸರ್ವರಿಗೂ ಒಳಿತಾಗಲಿ ಎಂದು ಶ್ರೀ ಶಾರದಾಂಬೆಯನ್ನು ಪ್ರಾರ್ಥನೆ ಮಾಡಿ ರಾಜ್ಯದ ಜನತೆಯನ್ನು ಆಶೀರ್ವದಿಸಿ ಎಂದು ಶ್ರೀಮಠದ ಉಭಯಶ್ರೀಗಳವರನ್ನು ಪ್ರಾರ್ಥಿಸಿಕೊಂಡಿದ್ದೇನೆ. ಅಧಿಕಾರ ಬರುತ್ತದೆ, ಹೋಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಕಷ್ಟು ಮುಖ್ಯಮಂತ್ರಿಗಳು ಬಂದು ಹೋಗಿದ್ದಾರೆ. ನಾನು ಮುಖ್ಯಮಂತ್ರಿ ಖುರ್ಚಿಗೆ ಅಂಟಿಕುಳಿತಿಲ್ಲ. ಅಧಿಕಾರವಿದ್ದಾಗ ರಾಜ್ಯದ ಜನತೆಗೆ ಒಳಿತು ಮಾಡುವುದೇ ನನ್ನ ಮೂಲ ಉದ್ದೇಶ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News