ಚಿಕ್ಕಮಗಳೂರು: ಮುಖ್ಯಮಂತ್ರಿ ಜನತಾ ದರ್ಶನ

Update: 2018-09-22 16:29 GMT

ಚಿಕ್ಕಮಗಳೂರು,ಸೆ.22: ರಾಷ್ಟ್ರೀಕೃತ ಬ್ಯಾಂಕ್‍ಗಳಲ್ಲಿರುವ ರೈತರ 30 ಸಾವಿರ ಕೋಟಿ ರೂ. ಸಾಲವನ್ನು ಮನ್ನಾ ಮಾಡಲು ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ತಿಳಿಸಿದರು.

ನಗರದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಹಮ್ಮಿಕೊಂಡಿದ್ದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿ, ರಾಜ್ಯದ ರೈತರ ಒಂದು ಲಕ್ಷ ರೂ. ಸಾಲಮನ್ನಾ ಮಾಡುವ ಸಂದರ್ಭದಲ್ಲಿ ವಿರೋಧ ಪಕ್ಷದವರು ಕುತಂತ್ರ ನಡೆಸಿದರು. ಸಾಲಮನ್ನಾ ಮಾಡಲು ಬ್ಯಾಂಕ್ ನವರು ಸಹಕರಿಸುವುದಾಗಿ ಹೇಳಿ ವಿರೋಧ ಪಕ್ಷದವರ ಕುತಂತ್ರದಿಂದ ಸಾಲಮನ್ನಾ ನಿಲುವನ್ನು ಬದಲಾಯಿಸಲು ಪ್ರಯತ್ನಿಸಿದರು. ಆದರೂ ಸರ್ಕಾರ ತನ್ನ ನಿಲುವನ್ನು ಬದಲಾಯಿಸದೆ ರೈತರ ಸಾಲಮನ್ನಾ ಮಾಡಿದೆ. ರಾಷ್ಟ್ರೀಕೃತ ಬ್ಯಾಂಕ್‍ಗಳ ಸಾಲಮನ್ನಾಕ್ಕೆ ರಾಷ್ಟ್ರೀಕೃತ ಬ್ಯಾಂಕ್‍ಗಳ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿ ಕಳಿಸುವಂತೆ ತಿಳಿಸಲಾಗಿದೆ ಎಂದರು.

ಸಾಲಮನ್ನಾದ ಜೊತೆಯಲ್ಲಿ ರೈತರ ಬದುಕು ಹಸನಾಗಿಸಲು ಸರ್ಕಾರ ಹೊಸ ಕೃಷಿ ಪದ್ದತಿಯನ್ನು ಜಾರಿಗೆ ತರಲು ಮುಂದಾಗಿದೆ. ಮಳೆಯಿಂದ ಮಲೆನಾಡು, ಕೊಡಗು ಜಿಲ್ಲೆಯಲ್ಲಿ 213 ಕೋಟಿ ಹಾನಿಯಾಗಿದೆ. ಹಾನಿ ಪರಿಹಾರಕ್ಕೆ ಹಣ ಬಿಡುಗಡೆ ಮಾಡಲಾಗಿದೆ. ಜನರ ಸಮಸ್ಯೆಗಳ ಪರಿಹಾರಕ್ಕೆ ಸರ್ಕಾರ ಬದ್ಧವಾಗಿದೆ. ಮಲೆನಾಡು ಭಾಗದ ಅಡಿಕೆ, ಕಾಫಿ, ಕಾಳುಮೆಣಸು ಬೆಳೆಗಾರರ ಸಮಸ್ಯೆಗೆ ಸರ್ಕಾರ ಸ್ಫಂದಿಸಲಿದೆ ಎಂದರು.

ಮೂಡಿಗೆರೆ ತಾಲೂಕಿನ ಬಡವಣದಿಣ್ಣೆ ಗ್ರಾಮದ 109 ವರ್ಷದ ಬಿ.ಡಿ. ಸುಬ್ಬಮ್ಮ ತನ್ನ ಮೂರು ಜನ ಮಕ್ಕಳೊಂದಿಗೆ ಬಂದು ಮುಖ್ಯಮಂತ್ರಿ ಅವರನ್ನು ಭೇಟಿಯಾಗಿ ತನ್ನ ನಾಲ್ಕು ಎಕರೆ ಜಮೀನಿನಲ್ಲಿ ಮನೆ ನಿರ್ಮಿಸಿಕೊಂಡು ವಾಸವಾಗಿದ್ದು ಅಕ್ರಮ ಸಕ್ರಮ ಯೋಜನೆಯಡಿಯಲ್ಲಿ 1997-98 ಅರ್ಜಿ ಸಲ್ಲಿಸಿದ್ದು, ಇದುವರೆಗೂ ಸಕ್ರಮ ಮಾಡಿಕೊಟ್ಟಿಲ್ಲ ಎಂದು ಮುಖ್ಯಮಂತ್ರಿ ಬಳಿ ಹೇಳಿದರು. ಇದೇ ಸಂದರ್ಭ ಕುಮಾರಸ್ವಾಮಿ ಅವರು ಸಮಸ್ಯೆಯನ್ನು ಹೊತ್ತು ತಂದ ಜನರಿಂದ ಅರ್ಜಿಗಳನ್ನು ಸ್ವೀಕರಿಸಿದರು.

ಜನತಾ ದರ್ಶನ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್, ಲೋಕೋಪಯೋಗಿ ಇಲಾಖೆ ಸಚಿವ ರೇವಣ್ಣ, ವಿಧಾನ ಪರಿಷತ್ ಸದಸ್ಯರಾದ ಧಮೇಗೌಡ, ಭೋಜೇಗೌಡ, ಜಿಲ್ಲಾಧಿಕಾರಿ ಶ್ರೀರಂಗಯ್ಯ, ಡಿಸಿಸಿ ಬ್ಯಾಂಕ್ ಅಧಿಕಾರಿಗಳು ಹಾಗೂ ಇತರೆ ಇಲಾಖೆ ಅಧಿಕಾರಿಗಳು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News