ಯಾರಿಗೂ ಅರ್ಥವಾಗದ ಧಾರ್ಮಿಕ ಗುಲಾಮಗಿರಿ: ಪ್ರೊ.ಕೆ.ಎಸ್.ಭಗವಾನ್

Update: 2018-09-22 16:33 GMT

ಮೈಸೂರು,ಸೆ.22: ಪ್ರಸ್ತುತ ಭಾರತದಲ್ಲಿ ರಾಜಕೀಯ ಮತ್ತು ಧಾರ್ಮಿಕ ಎಂಬ ಎರಡು ರೀತಿಯ ಗುಲಾಮಗಿರಿಯಿದೆ. ಇದರಲ್ಲಿ ಧಾರ್ಮಿಕ ಗುಲಾಮಗಿರಿ ಯಾರಿಗೂ ಅರ್ಥವಾಗುತ್ತಿಲ್ಲ ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಹೇಳಿದರು.

ಮಾನಸಗಂಗೋತ್ರಿಯ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ವತಿಯಿಂದ ಕ್ರಾಂತಿಕಾರಿ ನಾಯಕ ಪೆರಿಯಾರ್ ರಾಮಸ್ವಾಮಿ ಅವರ 137ನೆ ಹುಟ್ಟು ಹಬ್ಬದ ಅಂಗವಾಗಿ ಶುಕ್ರವಾರ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪೆರಿಯಾರ್ ಭಾರತದ ಬಹುದೊಡ್ಡ ಹೋರಾಟಗಾರರು. ಎಲ್ಲಾ ಶೂದ್ರರನ್ನು, ದಲಿತರನ್ನು ತಮ್ಮ ಮಕ್ಕಳೆಂದ ಭಾವಿಸಿದ್ದರು. ಸಾಮಾಜಿಕ ನ್ಯಾಯ ಮತ್ತು ಅಸಮಾನತೆಯ ವಿರುದ್ಧ ನಿರಂತರವಾಗಿ ಹೋರಾಡಿ ಸಾಕಷ್ಟು ಉತ್ತಮ ಪುಸ್ತಕಗಳನ್ನು ಬರೆದಿದ್ದಾರೆ. ಪರಿಯರ್, ಅಂಬೇಡ್ಕರ್ ಉತ್ತಮ ಸ್ನೇಹಿತರಾಗಿದ್ದರು ಎಂದು ತಿಳಿಸಿದರು.

ರಂಗಕರ್ಮಿ ಎಚ್.ಜನಾರ್ಧನ್ (ಜನ್ನಿ) ಮಾತನಾಡಿ, ಪತ್ರಿಕೋದ್ಯಮ ದೊಡ್ಡ ಸವಾಲಾಗಿದೆ. ಈ ಮಾಧ್ಯಮ ಸಮಾಜದ ಮನಸ್ಸುಗಳನ್ನು ತನ್ನ ಕಡೆ ಸೆಳೆದುಕೊಳ್ಳುವಂತದ್ದು, ಇದೊಂದು ಸಾರ್ವಜನಿಕ ರಂಗ ಎಂದು ಹೇಳಿದರು.

ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಮುಖ್ಯಸ್ಥರಾದ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಪ್ರಾಧ್ಯಾಪಕರಾದ ಪ್ರೊ.ರವೀಂದ್ರನ್, ಪ್ರೊ.ಎನ್.ಉಷಾರಾಣಿ, ಶಕ್ತಿವೇಲು, ರಾಮಸ್ವಾಮಿ, ಡಾ.ಮಂಗಲ ಮೂರ್ತಿ ದಿಲೀಪ್ ನರಸಯ್ಯ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮದ್ರಾಸ್ ವಿಶ್ವವಿದ್ಯಾನಿಲಯ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ವಿಭಾಗದ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಜಗತ್ತಿನಲ್ಲಿ ಮೊದಲ ಬಾರಿಗೆ ಸಮಾನತೆಯ ಪರವಾಗಿ ಹೋರಾಡಿದ ವ್ಯಕ್ತಿ ಎಂದರೆ ಬುದ್ಧ. ಮಂದಿನ ಭಾರತದ ಭವಿಷ್ಯ ನಿಂತಿರುವುದು ಯುವಕರ ಮೇಲೆ. ನಮ್ಮದು ಪ್ರಜಾಪ್ರಭುತ್ವ ದೇಶವಾಗಿರುವುದರಿಂದ ಇಲ್ಲಿ ಏನಾದರೂ ಆಗಬಹುದು. ಅದನ್ನು ಅಲ್ಲಗಳೆಯುವಂತಿಲ್ಲ.
-ಪ್ರೊ.ಕೆ.ಎಸ್.ಭಗವಾನ್, ವಿಚಾರವಾದಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News