ಮೈಸೂರು ವಿ.ವಿ: ನೂತನ ಪ್ರಭಾರ ಕುಲಪತಿಯಾಗಿ ಆಧಿಕಾರ ಸ್ವೀಕರಿಸಿದ ಪ್ರೊ.ಆಯಿಷಾ

Update: 2018-09-22 17:15 GMT

ಮೈಸೂರು,ಸೆ.22: ಮೈಸೂರು ವಿಶ್ವವಿದ್ಯಾನಿಲಯಕ್ಕೆ ಪ್ರಭಾರ ಕುಲಪತಿಗಳ ನೇಮಕ ಮತ್ತೆ ಮುಂದುವರಿದಿದೆ. ಮೈಸೂರು ವಿಶ್ವವಿದ್ಯಾನಿಲಯದ ಆರನೇ ಪ್ರಭಾರ ಕುಲಪತಿಯಾಗಿ ಪ್ರೊ.ಆಯಿಷಾ ಎಂ.ಷರೀಫ್ ಕ್ರಾಫರ್ಡ್ ಭವನದಲ್ಲಿ ಶನಿವಾರ ಅಧಿಕಾರ ಸ್ವೀಕರಿಸಿದರು.

2017ರ ಜ.10ರಂದು ಪ್ರೊ.ಕೆ.ಎಸ್.ರಂಗಪ್ಪ ಅವರು ನಿವೃತ್ತಿಯಾದಂದಿನಿಂದಲೂ ಕುಲಪತಿ ಹುದ್ದೆ ಖಾಲಿ ಇದೆ. ವಿಜ್ಞಾನ ನಿಕಾಯದ ಡೀನ್ ಪ್ರೊ.ಕೆ.ಟಿ.ಉಮೇಶ್ ಅವರ ಡೀನ್ ಅವಧಿ ಸೆ.21ರಂದು ಮುಗಿದಿದ್ದು, ಅದರೊಂದಿಗೆ ಪ್ರಭಾರ ಕುಲಪತಿ ಅವಧಿಯೂ ಮುಗಿದಿದೆ. ವಾಣಿಜ್ಯ ನಿಕಾಯ ಡೀನ್ ಆಗಿರುವ ಪ್ರೊ. ಆಯಿಷಾ ಅವರು ಬಹದ್ದೂರ್ ಇನ್ಸ್ ಟಿಟ್ಯೂಟ್ ಆಫ್ ಮ್ಯಾನೇಜ್ ಮೆಂಟ್ ನಲ್ಲಿ ಪ್ರಾಧ್ಯಾಪಕಿಯಾಗಿದ್ದಾರೆ. ಇವರೀಗ ಆರನೇ ಪ್ರಭಾರ ಕುಲಪತಿಯಾಗಿದ್ದು, ಇವರಿಗೂ ಮುನ್ನ ಐದು ಮಂದಿ ಈಗಾಗಲೇ ಪ್ರಭಾರ ಕುಲಪತಿಗಳಾಗಿ ಕಾರ್ಯನಿರ್ವಹಿಸಿದ್ದಾರೆ.

ಪ್ರೊ. ಆಯಿಷಾ ಎಂ.ಶರೀಫ್ ಮೈಸೂರು ವಿವಿ ಮೊದಲ ಅಲ್ಪ ಸಂಖ್ಯಾತ ಪ್ರಭಾರ ಕುಲಪತಿಯಾಗಿದ್ದಾರೆ. ಪ್ರೊ.ಕೆ.ಟಿ.ಉಮೇಶ್ ಅಧಿಕಾರವನ್ನು ಹಸ್ತಾಂತರಿಸಿ, ಹೂಗುಚ್ಛ ನೀಡುವ ಮೂಲಕ ಬರಮಾಡಿಕೊಂಡರು. ಈ ಸಂದರ್ಭ ಪರೀಕ್ಷಾಂಗ ಕುಲಸಚಿವ ಪ್ರೊ.ಜೆ.ಸೋಮಶೇಖರ್ ಮತ್ತಿತರರಿದ್ದರು. 

ಅಧಿಕಾರ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರೊ.ಆಯಿಷಾ, ಮೈಸೂರು ವಿವಿ ಕುಲಪತಿ ಆಗುತ್ತೇನೆ ಎಂದು ನಾನು ಭಾವಿಸಿರಲಿಲ್ಲ. ಹುದ್ದೆಯ ಹಿರಿತನದಲ್ಲಿ ಹಂಗಾಮಿ ಕುಲಪತಿಯಾಗಿ ಆಯ್ಕೆಯಾಗಿದ್ದು ಖುಷಿ ತಂದಿದೆ. ಮುಂದಿನ ದಿನಗಳಲ್ಲಿ ಮೈಸೂರು ವಿವಿ ಘನತೆ ಹೆಚ್ಚಿಸುವ ಕೆಲಸ ಮಾಡುತ್ತೇನೆ. ಅಕ್ರಮ ನೇಮಕಾತಿ ವಿಚಾರದಲ್ಲಿ ಗೊಂದಲ ಇತ್ತು. ಎಲ್ಲಾ ಕಡೆಗಳಲ್ಲೂ ಸಮಸ್ಯೆ ಇರುತ್ತವೆ. ನನ್ನ ಅವಧಿಯಲ್ಲಿ ಎಲ್ಲವೂ ಸರಿಯಾಗುವ ಭರವಸೆ ಇದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News