ಮೈಸೂರು: ಇತಿಹಾಸದ ಪುಟ ಸೇರಿದ ಪ್ರೀಮಿಯರ್ ಸ್ಟುಡಿಯೋ

Update: 2018-09-22 17:19 GMT

ಮೈಸೂರು,ಸೆ.22: ಏಷ್ಯಾದಲ್ಲೇ ಅತಿದೊಡ್ಡ ಎರಡನೇ ಸ್ಟುಡಿಯೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಪ್ರಿಮೀಯರ್ ಸ್ಟುಡಿಯೋ ಇತಿಹಾಸದ ಪುಟಗಳನ್ನು ಸೇರಿದ್ದು, ಇಲ್ಲೊಂದು ಅಪಾರ್ಟ್ ಮೆಂಟ್ ತಲೆ ಎತ್ತಲಿದೆ.

ಶುಕ್ರವಾರ ಕಟ್ಟಡವನ್ನು ನೆಲಸಮಗೊಳಿಸಲಾಗಿದ್ದು, ಇಲ್ಲಿ 750ಕ್ಕೂ ಹೆಚ್ಚು ಚಿತ್ರಗಳು ಚಿತ್ರೀಕರಣಗೊಂಡಿದ್ದವು. ಭಾರತೀಯ ಭಾಷೆಗಳಷ್ಟೇ ಅಲ್ಲದೇ, ಹಲವು ವಿದೇಶಿ ಚಿತ್ರಗಳೂ ಇಲ್ಲಿ ಚಿತ್ರೀಕರಣಗೊಂಡಿವೆ. ನಗರದ ಸರಸ್ವತಿಪುರಂನಲ್ಲಿದ್ದ ನವಜ್ಯೋತಿ ಸ್ಟುಡಿಯೋ ಮುಚ್ಚಿದ ಬಳಿಕ ಎಂ.ಎನ್.ಬಸವರಾಜಯ್ಯ ಅವರು ಅರಮನೆಗೆ ಸೇರಿದ ಚಿತ್ತರಂಜನ್ ಮಹಲಿನಲ್ಲಿ ಮೊದಲಿಗೆ ಪ್ರಿಮೀಯರ್ ಸ್ಟುಡಿಯೋ ಆರಂಭಿಸಿದರು.  

ಜಯಲಕ್ಷ್ಮಿಪುರಂನಲ್ಲಿ 1954ರ ಹೊತ್ತಿಗೆ ಸುಮಾರು 10ಎಕರೆಯಷ್ಟು ವಿಶಾಲವಾದ ಪ್ರದೇಶದಲ್ಲಿ 7 ಅಂತಸ್ತುಗಳುಳ್ಳ ಬೃಹತ್ ಸ್ಟುಡಿಯೋ ನಿರ್ಮಾಣಗೊಂಡಿತು. ಒಂದೇ ಬಾರಿಗೆ ಏಳು ಚಿತ್ರಗಳನ್ನು ಡೆವಲಪಿಂಗ್, ಪ್ರಿಂಟಿಂಗ್, ಸಂಕಲನ, ಪ್ರದರ್ಶನ ಮಂದಿರ, 3 ಮಿಚೆಲ್ ಹಾಗೂ ಏರಿಪ್ಲೆಕ್ಸ್ ಕ್ಯಾಮರಾ ಹೀಗೆ ಸಕಲ ಸೌಲಭ್ಯಗಳನ್ನೂ ಈ ಸ್ಟುಡಿಯೋ ಹೊಂದಿತ್ತು. ಹಲವಾರು ಸ್ಟುಡಿಯೋಗಳು ನಿರ್ಮಾಣಗೊಂಡ ನಂತರವು ಕಳೆಗುಂದಲಿಲ್ಲ. 1989ರಲ್ಲಿ ಸಂಜಯ್ ಖಾನ್ ಅವರ “ದಿ ಸೋರ್ಡ್ ಆಫ್ ಟಿಪ್ಪು ಸುಲ್ತಾನ್” ಧಾರವಾಹಿ ಚಿತ್ರೀಕರಣಗೊಳ್ಳುತ್ತಿದ್ದ ವೇಳೆ ಭೀಕರ ಅಗ್ನಿ ದುರಂತ ಸಂಭವಿಸಿ 42ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದರು. ಬಳಿಕ ಸ್ಟುಡಿಯೋ ಚೇತರಿಸಿಕೊಂಡಿರಲಿಲ್ಲ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಐರಾವತ, ನಿಖಿಲ್ ಕುಮಾರಸ್ವಾಮಿ ಅಭಿನಯದ ಜಾಗ್ವಾರ್ ಸಿನಿಮಾ ಕೊನೆಯದಾಗಿ ಚಿತ್ರೀಕರಣಗೊಂಡಿದ್ದ ಸಿನಿಮಾಗಳಾಗಿವೆ. 

'ಸ್ಟುಡಿಯೋ ಮುಚ್ಚಲು ಮನಸ್ಸಿಲ್ಲದಿದ್ದರೂ ಮುಚ್ಚಲೇ ಬೇಕಾಗಿದೆ. ದಿನದಿಂದ ದಿನಕ್ಕೆ ನಿರ್ವಹಣೆಯ ವೆಚ್ಚ ಹೆಚ್ಚುತ್ತಿದೆ. ಸಿನಿಮಾ ಚಿತ್ರೀಕರಣಗಳು ಕಡಿಮೆಯಾಗಿವೆ. ಚಿತ್ರ ನಿರ್ಮಾಣದ ಟ್ರೆಂಡ್ ಗಳು ಬದಲಾಗಿವೆ. ನೆಲಸಮ ಕಾರ್ಯ ಅನಿವಾರ್ಯ' ಎನ್ನುತ್ತಾರೆ ಸ್ಟುಡಿಯೋ ಮಾಲಕ ಬಸವರಾಜಯ್ಯ ಪುತ್ರ ನಾಗಕುಮಾರ್.

ದಿಗ್ಗಜ ನಟರಾದ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಷ್ ರಜನಿಕಾಂತ್  ಸೇರಿದಂತೆ ಅನೇಕ ನಾಯಕರ ಸಿನಿಮಾ ಶೂಟಿಂಗ್ ಗೆ ಬಳಸಿಕೊಂಡಿದ್ದ ಸ್ಟೂಡಿಯೋ ಇನ್ನು ನೆನಪು ಮಾತ್ರ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News