ಕೊಡಗು ಮಳೆಹಾನಿ ಸಂತ್ರಸ್ತರಿಗೆ ವಸತಿ: ಬಡಾವಣೆ ನಿರ್ಮಾಣಕ್ಕೆ ಸಿದ್ಧತೆ ಚುರುಕು

Update: 2018-09-22 18:09 GMT

ಮಡಿಕೇರಿ, ಸೆ.22: ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ ಮನೆ ನಿರ್ಮಿಸಿಕೊಡುವ ನಿಟ್ಟಿನಲ್ಲಿ ಜಿಲ್ಲಾಡಳಿತದಿಂದ ಅಗತ್ಯ ಕ್ರಮಕೈಗೊಳ್ಳುತ್ತಿದೆ. 

ಈಗಾಗಲೇ ನಾಲ್ಕು ಮಾದರಿಯ ಮನೆಗಳ ಪ್ರಾತ್ಯಕ್ಷಿಕೆ ಪ್ರದರ್ಶನಕ್ಕೆ ಇಡಲಾಗಿದ್ದು, ಸಂತ್ರಸ್ತರಿಗೆ ಒಪ್ಪಿಗೆ ಆಗುವ ಮನೆ ನಿರ್ಮಿಸಿಕೊಡಲು ಮುಂದಾಗಿದೆ.  ಮನೆ ನಿರ್ಮಾಣ ಸಂಬಂಧ ಈಗಾಗಲೇ ಗುರುತಿಸಲಾಗಿರುವ ಕೆ.ನಿಡುಗಣೆ, ಕರ್ಣಂಗೇರಿ, ಗಾಳಿಬೀಡು, ಮದೆ, ಬಿಳಿಗೇರಿ, ಸಂಪಾಜೆ, ಜಂಬೂರು ಗ್ರಾಮಗಳಲ್ಲಿ ಒಟ್ಟು 110 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ನಿವೇಶನ ಸಮತಟ್ಟು ಕಾರ್ಯವು ಪೂರ್ಣಗೊಂಡಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.  

ಸದ್ಯ ಲೇಔಟ್ ನಿರ್ಮಾಣಕ್ಕೆ 5 ಕೋಟಿ ರೂ. ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಘಟಕ ವೆಚ್ಚ ನಿಗದಿಯಾದ ನಂತರ ಒಪ್ಪಿಗೆಯಾಗುವ ಮನೆಯನ್ನು ನಿರ್ಮಿಸಲಾಗುವುದು. ಆ ನಿಟ್ಟಿನಲ್ಲಿ ಗೃಹ ಮಂಡಳಿ ವತಿಯಿಂದ ಮನೆ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಅವರು ಹೇಳಿದರು.  

ಎಲ್ಲೆಲ್ಲಿ ಜಾಗ ಗುರುತು: ಕರ್ಣಂಗೇರಿ ಗ್ರಾಮದ ಸರ್ವೆ ನಂ.178 ರಲ್ಲಿ ನಾಲ್ಕು ಎಕರೆ ಗುರುತಿಸಲಾಗಿದ್ದು, ಸುಮಾರು 80 ನಿವೇಶನಗಳು ಲಭ್ಯವಾಗಲಿದೆ. ಈ ಗ್ರಾಮದಲ್ಲಿ ಕರ್ಣಂಗೇರಿಯ 13, ಮಕ್ಕಂದೂರಿನ 11, ಹಚ್ಚಿನಾಡಿ 1, ಹೊದಕಾನ 9 ಹಾಗೂ ನಗರದ 43 ಕುಟುಂಬಗಳಿಗೆ ಒಟ್ಟು 65 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಿಲಾಗಿದೆ. 

ಕೆ.ನಿಡುಗಣೆ ಗ್ರಾಮದ ಸರ್ವೆ ನಂ.1/13 ರಲ್ಲಿ ಅಂದಾಜು 5 ಎಕರೆ ಜಾಗ ಗುರುತಿಸಲಾಗಿದ್ದು, ಕಾಲೂರು ಗ್ರಾಮದ 22 ಕುಟುಂಬಗಳಿಗೆ, ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಸರ್ವೆ ನಂ.103 ರಲ್ಲಿ 7 ಎಕರೆ ಜಾಗ ಗುರುತಿಸಲಾಗಿದ್ದು, ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ, ಗಾಳಿಬೀಡು ಸರ್ವೆ ನಂ.99/3, 100/3, 100/4 ರಲ್ಲಿ 13 ಎಕರೆ ಜಾಗ ಗುರುತಿಸಲಾಗಿದ್ದು, ಗಾಳಿಬೀಡು ಗ್ರಾಮದ 19 ಕುಟುಂಬಗಳಿಗೆ, ನಿಡುವಟ್ಟಿನ 26 ಕುಟುಂಬಗಳಿಗೆ ಬಾರಿಬೆಳ್ಳಚ್ಚು 2 ಕುಟುಂಬಗಳಿಗೆ, ಒಂದನೇ ಮೊಣ್ಣಂಗೇರಿ 9 ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ.  

ಮದೆ ಗ್ರಾಮದ ಸರ್ವೆ ನಂ.399 ರಲ್ಲಿ 10 ಎಕರೆ ಜಾಗ ಗುರುತಿಸಲಾಗಿದ್ದು, ಎರಡನೇ ಮೊಣ್ಣಂಗೇರಿಯ 188 ಕುಟುಂಬಗಳಿಗೆ, ಮದೆ ಗ್ರಾಮದ 79 ಕುಟುಂಬಗಳಿಗೆ, ಸಂಪಾಜೆಯಲ್ಲಿ ಸರ್ವೆ ನಂ.54/1 ರಲ್ಲಿ 1.50 ಎಕರೆ ಗುರುತಿಸಲಾಗಿದ್ದು, ಸಂಪಾಜೆಯ 4 ಕುಟುಂಬಗಳಿಗೆ, ಬಿಳಿಗೇರಿಯ ಸರ್ವೆ ನಂ.347/3 ರಲ್ಲಿ 1.88 ಎಕರೆ ಜಾಗ ಗುರುತಿಸಲಾಗಿದೆ. ಹೆರವನಾಡಿನ 10 ಕುಟುಂಬಗಳಿಗೆ ಒಟ್ಟು 281 ಕುಟುಂಬಗಳಿಗೆ, ಜಂಬೂರು ಗ್ರಾಮದ ಸರ್ವೆ ನಂ.13/1 ರಲ್ಲಿ 50 ಎಕರೆ ಜಾಗ ಗುರುತಿಸಲಾಗಿದ್ದು, ಮಕ್ಕಂದೂರು ಗ್ರಾಮದ 99 ಕುಟುಂಬಗಳಿಗೆ, ಎಮ್ಮೆತಾಳು ಗ್ರಾಮದ 39 ಕುಟುಂಬಳಿಗೆ, ಮುಕ್ಕೋಡ್ಲು ಗ್ರಾಮದ 9 ಕುಟುಂಬಗಳಿಗೆ, ಮೇಘತ್ತಾಳು ಗ್ರಾಮದ 26 ಕುಟುಂಬಗಳಿಗೆ ಒಟ್ಟು 173 ಕುಟುಂಬಗಳಿಗೆ ಜಾಗ ಗುರುತಿಸಲಾಗಿದೆ. 

ಸೋಮವಾರಪೇಟೆ ತಾಲೂಕಿನ ಚೌಡ್ಲು 2 ಕುಟುಂಬಗಳಿಗೆ, ಕಿರಂಗಂದೂರು 6, ಬೇಳೂರು 4, ಹಾನಗಲ್ಲು 3, ನೆರುಗಳಲೆ 1, ಹಾಡಗೇರಿ 22, ಮುವತ್ತೋಕ್ಲು 4, ಇಗ್ಗೋಡ್ಲು 9, ಕಡಗದಾಳು  11, ಕಾಂಡನಕೊಲ್ಲಿ 5, ಕೊಪ್ಪತ್ತೂರು 3, ಜಂಬೂರು 4, ಗರ್ವಾಲೆ 2, ಶಿರಂಗಳ್ಳಿ 1, ಮಂಕ್ಯ 1, ಕಿಕ್ಕರಳ್ಳಿ 1, ಹಾಲೇರಿ 5 ಒಟ್ಟು 84 ಕುಟುಂಬಗಳಿಗೆ ನಿವೇಶನ ಗುರುತಿಸಲಾಗಿದೆ ಎಂದು ವಿಶೇಷ ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಕೆ.ಜಗದೀಶ್ ಅವರು ಮಾಹಿತಿ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News