ಚಿಕ್ಕಮಗಳೂರು: ಇಮ್ರಾನ್ ಕುಂಚದಲ್ಲಿ ಅರಳಿದ ಗಣೇಶನ ಚಿತ್ರಕ್ಕೆ ಪ್ರಥಮ ಬಹುಮಾನ

Update: 2018-09-23 13:27 GMT

ಚಿಕ್ಕಮಗಳೂರು, ಸೆ.23: ನಗರದ ಆಜಾದ್ ಪಾರ್ಕ್ ಸಾರ್ವಜನಿಕ ಗಣಪತಿ ಪೆಂಡಾಲಿನಲ್ಲಿ ನಡೆದ ಗಣಪತಿ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಇಮ್ರಾನ್ ಹಮ್ದಿ ಎಂಬ ಬಾಲಕ ಉತ್ತಮ ಚಿತ್ರ ಬಿಡಿಸುವ ಮೂಲಕ ಪ್ರಥಮ ಬಹುಮಾನ ಗಿಟ್ಟಿಸಿದ್ದಾನೆ.

ವಾಸವಿ ಕ್ಲಬ್ ಆಯೋಜಿಸಿದ್ದ ಸ್ಥಳದಲ್ಲೇ ಚಿತ್ರ ಬಿಡಿಸುವ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ವಾಸವಿ ವಿದ್ಯಾ ಸಂಸ್ಥೆಯ 10ನೇ ತರಗತಿಯ ವಿದ್ಯಾರ್ಥಿ ಇಮ್ರಾನ್ ಹಮ್ದಿ ಶಿವಲಿಂಗವನ್ನು ಬಿಡಿಸುವುದರ ಜೊತೆಗೆ ವಿನಾಯಕನ ಚಿತ್ರವನ್ನೂ ವಿವಿಧ ಬಣ್ಣಗಳಲ್ಲಿ ಬಿಡಿಸುವ ಮೂಲಕ ಪ್ರಶಂಸೆಗೆ ಪಾತ್ರನಾಗುವುದರ ಜೊತೆಗೆ ಮೊದಲ ಬಹುಮಾನವನ್ನೂ ತನ್ನದಾಗಿಸಿಕೊಂಡನು.

ಸಮಾರಂಭದಲ್ಲಿ ಆಯೋಜಕರು ಇಮ್ರಾನ್‍ನ ಚಿತ್ರಕಲೆಯನ್ನು ಪ್ರದರ್ಶಿಸಿ ಅದಕ್ಕೆ ಪ್ರಥಮ ಬಹುಮಾನವನ್ನು ಘೋಷಿಸುತ್ತಿದ್ದಂತೆ ಸಾರ್ವಜನಿಕರು ಬಾಲಕನನ್ನು ಸುತ್ತುವರಿದು ಪ್ರಶಂಸೆಯ ಸುರಿಮಳೆಗೈದರು.

ಈ ವೇಳೆ ಮಾತನಾಡಿದ ವಾಸವಿ ಕ್ಲಬ್ ಅಧ್ಯಕ್ಷ ದಿನೇಶ್ ಗುಪ್ತಾ, ಮಕ್ಕಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಈ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ ಎಂದು ತಿಳಿಸಿದರು.

ಚಿತ್ರ ಬಿಡಿಸುವ  ಸ್ಪರ್ಧೆಯಲ್ಲಿ ವಾಸವಿ ವಿದ್ಯಾ ಸಂಸ್ಥೆಯ ವಿದ್ಯಾರ್ಥಿ ಹಮ್ದಿ ಇಮ್ರಾನ್ ಪ್ರಥಮ ಸ್ಥಾನ ಗಳಿಸಿದರೆ, ಸರಕಾರಿ ಜೂನಿಯರ್ ಕಾಲೇಜಿನ ವಿದ್ಯಾರ್ಥಿ ಹಿತೈಶ್ರೀ ದ್ವಿತೀಯ ಹಾಗೂ ಸೈಂಟ್ ಮೇರಿಸ್ ಶಾಲೆಯ ಜಿ.ರಂಗಲಲಿತ ತೃತೀಯ ಸ್ಥಾನ ಪಡೆದುಕೊಂಡರು.

ಗಾಯನ ಸ್ಪರ್ಧೆಯಲ್ಲಿ ಜೆವಿಎಸ್ ಶಾಲೆಯ ಡಿ.ಸಿ.ನಯನ್ ಪ್ರಥಮ, ಮೌಂಟೇನ್ ವ್ಯೂ ಶಾಲೆಯ ಕೆ.ಜಿ.ನೇಹಾ ದ್ವಿತೀಯ ಹಾಗೂ ಸಾಯಿ ಏಂಜೆಲ್ಸ್ ನ ಸಿ.ಎ.ಶ್ರೀಲಕ್ಷ್ಮೀ ತೃತೀಯ ಸ್ಥಾನ ಗಳಿಸಿದರು. ಸ್ಪರ್ಧೆಯ ನಂತರ ನಡೆದ ಸಮಾರಂಭದಲ್ಲಿ ನಗರಸಭೆ ಮಾಜಿ ಅಧ್ಯಕ್ಷ ದೇವರಾಜ್ ಶೆಟ್ಟಿ ವಿಜೇತರಿಗೆ ಬಹುಮಾನ ವಿತರಿಸಿದರು. 21 ವಿದ್ಯಾರ್ಥಿಗಳಿಗೆ ಸಮಾಧಾನಕರ ಬಹುಮಾನ ನೀಡಲಾಯಿತು.

ನಗರದ ವಿವಿಧ ಪ್ರೌಢಶಾಲೆಗಳ 180 ವಿದ್ಯಾರ್ಥಿಗಳು ಚಿತ್ರಕಲಾ ಸ್ಪರ್ಧೆಯಲ್ಲಿ ಹಾಗೂ 80 ವಿದ್ಯಾರ್ಥಿಗಳು ಗಾಯನ ಸ್ಪರ್ಧೆಯಲ್ಲಿ ಭಾಗವಹಿಸಿದ್ದರು. ಚಿತ್ರಕಲಾವಿದ ಹರ್ಷಕಾವ, ಗಾಯಕಿ ಪಂಚಮಿ, ರೂಪಾ ಅಶ್ವಿನ್, ಲಕ್ಷ್ಮೀ ಅರವಿಂದ್, ವಿಶ್ವನಾಥ್ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದರು. ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಕಾರ್ಯದರ್ಶಿ ಶಿವಶಂಕರ್, ವಾಸವಿ ಕ್ಲಬ್‍ನ ಸಂಘಟನಾ ಕಾರ್ಯದರ್ಶಿಗಳಾದ ಜ್ಯೋತಿ ಸುಮನ್, ನಿತಿನ್, ಸ್ಪರ್ಧೆಯ ಸಂಯೋಜಕರಾದ ವಿನಯ್ ಕುಮಾರ್, ಮಹೇಶ್, ಕ್ಲಬ್‍ನ ಖಜಾಂಚಿ ರಘುನಂದನ್, ನಿರ್ದೇಶಕರಾದ ಜಿ.ಎನ್.ರಾಮಕೃಷ್ಣ, ಕೆ.ಆರ್.ಆನಂದ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News