ಕ್ರೀಡಾಸ್ಪೂರ್ತಿಯಿಂದ ಜೀವನದಲ್ಲಿ ಯಶಸ್ವಿ ಸಾಧ್ಯ: ಶಾಸಕ ಸಿ.ಟಿ.ರವಿ

Update: 2018-09-23 13:33 GMT

ಚಿಕ್ಕಮಗಳೂರು, ಸೆ.23: ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಆತ್ಮ ವಿಶ್ವಾಸ ವೃದ್ಧಿಯಾಗಿ ಜೀವನದಲ್ಲಿ ಯಶಸ್ವಿ ಕಾಣಲು ಸಾದ್ಯ ಎಂದು ಶಾಸಕ ಸಿ.ಟಿ.ರವಿ ತಿಳಿಸಿದರು.

ಜಿಲ್ಲಾ ಶತಮಾನೋತ್ಸವ ಕ್ರೀಡಾಂಗಣದಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆ ಮತ್ತು ಮೈಲಿಮನೆಯ ಎ.ಎಲ್.ಟಿ.ಎಂ ಸರಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಲಾಗಿದ್ದ ಪದವಿ ಪೂರ್ವ ಕಾಲೇಜುಗಳ ಜಿಲ್ಲಾ ಮಟ್ಟದ 2018-19ನೇ ಸಾಲಿನ ಕ್ರೀಡಾಕೂಟ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ದೊರೆತ ಅವಕಾಶಗಳನ್ನು ಉಪಯೋಗಿಸಿಕೊಂಡು ಕಲೆ, ಸಾಹಿತ್ಯ, ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯನ್ನು ತೋರಿಸಬೇಕೆಂದು ತಿಳಿಸಿದರು.

ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ಮಾತನಾಡಿ, ಕ್ರೀಡೆ ನಮ್ಮ ದೈಹಿಕ ಮತ್ತು ಮಾನಸಿಕ ಸದೃಡತೆಗೆ ಸಹಕಾರಿ. ಇದರಿಂದ ನಮ್ಮ ಸ್ನೇಹ ಸಂಬಂದ ಹೆಚ್ಚಾಗುತ್ತದೆ. ಕ್ರೀಡೆಯಲ್ಲಿ ಸೋಲು ಗೆಲುವು ಮುಖ್ಯವಲ್ಲ. ಭಾಗವಹಿಸುವಿಕೆ ಮುಖ್ಯ. ಸೋಲು ಮತ್ತು ಗೆಲುವನ್ನು ಸ್ವೀಕರಿಸುವ ವಿಶಾಲ ಮನೋಭಾವನೆಯನ್ನು ವಿದ್ಯಾರ್ಥಿಗಳು ರೂಡಿಸಿಕೊಳ್ಳಬೇಕೆಂದರು.

ಆಶಾಕಿರಣ ಅಂಧಮಕ್ಕಳ ಪಾಠಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಮಾತನಾಡಿ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಲ್ಲಿ ವಿಶೇಷ ಪ್ರತಿಭೆ ಅಡಗಿರುತ್ತದೆ. ಅವರಿಗೆ ಉತ್ತಮ ಅವಕಾಶ ಮತ್ತು ವೇದಿಕೆಗಳನ್ನು ಶಿಕ್ಷಕರು ಆಯೋಜಿಸುವುದರ ಜೊತೆಗೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಿದಾಗ ಮಕ್ಕಳ ಉಜ್ವಲ ಭವಿಷ್ಯ ರೂಪುಗೊಳ್ಳುತ್ತದೆ ಎಂದರು.

ಕಾಲೇಜು ಅಭಿವೃದ್ಧಿ ಸಮಿತಿಯ ಗೌರವ ಅಧ್ಯಕ್ಷ ಹೆಚ್.ಆರ್.ಗುರುನಾಥೇಗೌಡ ಮಾತನಾಡಿ, ಪ್ರತಿನಿತ್ಯ ಒಂದು ಗಂಟೆಯ ವ್ಯಾಯಾಮದಿಂದ ದಿನವಿಡಿ ಅತ್ಯಂತ ಕ್ರಿಯಾಶೀಲರಾಗಿರಬಹುದು. ವಿದ್ಯಾಭ್ಯಾಸದ ಜೊತೆಗೆ ವಿದ್ಯಾರ್ಥಿಗಳು ಹಲವು ಕ್ಷೇತ್ರಗಳಲ್ಲಿ ಉತ್ತಮ ಸಾಧನೆ ಮಾಡಲು ಅವಕಾಶಗಳಿವೆ ಎಂದರು.

ಈ ಸಂದರ್ಭ ಜಿಲ್ಲಾ ಪಂ. ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ಸಾಮಾಜಿಕ ನ್ಯಾಯಸ್ಥಾಯಿ ಸಮಿತಿಯ ಅಧ್ಯಕ್ಷ ಹಿರಿಗಯ್ಯ, ತಾ.ಪಂ.ಅಧ್ಯಕ್ಷ ಜಯ್ಯಣ್ಣ, ಸದಸ್ಯೆ ಅರ್ಪಿತಾಪ್ರದೀಪ್, ಕಾಲೇಜು ಅಭಿವೃದ್ಧಿ ಸಮೀತಿಯ ಉಪಾಧ್ಯಕ್ಷ ಮೈಲಿಮನೆ ಪೂರ್ಣೇಶ್, ಸದಸ್ಯರಾದ ಕಿಶನ್, ನಾಗೇಶ್, ಕೃಷ್ಣಮೂರ್ತಿ, ಅನುರಾಜೇಗೌಡ, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ  ಡಿ.ಎಸ್.ದೇವರಾಜ್, ತಾಲೂಕು ದೈಹಿಕ ಶಿಕ್ಷಣ ಅಧೀಕ್ಷಕ ರವಿಕುಮಾರ್ ಉಪಸ್ಥಿತರಿದ್ದರು. ಶಾಲಾ ಪ್ರಾಂಶುಪಾಲ ಕೆ.ಪಿ.ಉಮಾ ಮಹೇಶ್ವರಪ್ಪ ಸ್ವಾಗತಿಸಿ, ಉಪಾನ್ಯಾಸಕ ಶಿವಕುಮಾರ್ ನಿರೂಪಿಸಿ, ಚಂದ್ರೇಗೌಡ ವಂದಿಸಿದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News