ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಹಗಲು ಕನಸು: ಸಿದ್ದರಾಮಯ್ಯ ವ್ಯಂಗ್ಯ

Update: 2018-09-23 14:27 GMT

ಮಂಡ್ಯ, ಸೆ.23: ರಾಜ್ಯ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, ಯಾರಿಂದಲೂ ಉರುಳಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿರುವ ಮಾಜಿ ಮುಖ್ಯಮಂತ್ರಿ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಯಡಿಯೂರಪ್ಪ ಮುಖ್ಯಮಂತ್ರಿಯಾಗುವುದು ಹಗಲು ಕನಸು ಎಂದು ವ್ಯಂಗ್ಯವಾಡಿದ್ದಾರೆ.

ನಗರದ ಕುರುಬರ ಸಂಘದ ಆವರಣದಲ್ಲಿ ನೂತನವಾಗಿ ನಿರ್ಮಿಸಿರುವ ಕನಕ ಭವನವನ್ನು ರವಿವಾರ ಉದ್ಘಾಟಿಸಿ ಮಾತನಾಡಿದ ಅವರು, ಬಿಜೆಪಿಯವರು ವಾಮಮಾರ್ಗದಲ್ಲಿ ಅಧಿಕಾರಿ ಹಿಡಿಯುವ ಕನಸು ಕಾಣುತ್ತಿದ್ದಾರೆಂದು ಟೀಕಿಸಿದರು. ಬಿಜೆಪಿಗೆ ಬಹುಮತವಿಲ್ಲ, ಹಾಗಾಗಿ ವಿಪಕ್ಷ ಸ್ಥಾನ ದೊರೆತಿದೆ. ಆದರೆ ಅವರು ವಾಮಮಾರ್ಗದಲ್ಲಿ ಅಧಿಕಾರ ಹಿಡಿಯುವ ಕನಸು ಕಾಣುತ್ತಿದ್ದಾರೆ. ಕೋಟಿಗಟ್ಟಲೆ ಹಣಕೊಟ್ಟು ಶಾಸಕರನ್ನು ಖರೀದಿಸಲು ಮುಂದಾಗಿರುವ ಅವರಿಗೆ ಹಣ ಎಲ್ಲಿಂದ ಬಂತು ಎಂದು ಅವರು ಪ್ರಶ್ನಿಸಿದರು.

ಕಾಂಗ್ರೆಸ್‍ನ ಯಾವೊಬ್ಬ ಶಾಸಕರೂ ಪಕ್ಷ ಬಿಟ್ಟು ಹೋಗುವುದಿಲ್ಲ. ಯಾವುದೇ ಕಾರಣಕ್ಕೂ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬರಬಾರದು. ಬಿಜೆಪಿ ಅಧಿಕಾರಕ್ಕೆ ಬಂದರೆ ಹಿಂದುಳಿದ ವರ್ಗದವರಿಗೆ ಅನುಕೂಲವಾಗುವುದಿಲ್ಲ ಎಂದು ಅವರು ಹೇಳಿದರು.

ರಾಜ್ಯ ಸಮ್ಮಿಶ್ರ ಸರಕಾರ ಜನಪರವಾಗಿ ನಡೆಯುತ್ತಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ರೈತರ 50 ಸಾವಿರ ರೂ. ಸಾಲಮನ್ನಾ ಮಾಡಿದ್ದೆ. ಈ ಸರಕಾರವೂ ರೈತರ ಸಾಲಮನ್ನಾ ಮಾಡಲು ಮುಂದಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸೌಲಭ್ಯ ಕಲ್ಪಿಸಲು ಹಿಂದುಳಿದ ವರ್ಗದ ಜಾತಿ ಗಣತಿ ಅಗತ್ಯ. ನೆನೆಗುದಿಗೆ ಬಿದ್ದಿರುವ ಸಮೀಕ್ಷಾ ವರದಿ ಬಿಡುಗಡೆ ಸಂಬಂಧ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡುವುದಾಗಿ ಅವರು ಹೇಳಿದರು.

ರಾಜಿ ಪ್ರಶ್ನೆಯೇ ಇಲ್ಲ:

ನಾನು ಅಹಿಂದ ಪರ ಎಂದು ಹೇಳಿಕೊಳ್ಳಲು ಹಿಂಜರಿಯುವುದಿಲ್ಲ. ಶೋಷಿತರ ಪರ ನನ್ನ ಹೋರಾಟ ನಿರಂತರವಾಗಿದ್ದು, ಅದರಲ್ಲಿ ರಾಜೀ ಪ್ರಶ್ನೆಯೇ ಇಲ್ಲ. ಆದರೆ, ನಾನು ಜಾರಿಗೆ ತಂದ ಯೋಜನೆಗಳು, ಕಾರ್ಯಕ್ರಮಗಳು ಕೇವಲ ಅಹಿಂದ ವರ್ಗಕ್ಕೆ ಸೀಮಿತವಾಗದೆ ಎಲ್ಲಾ ಬಡಜನರ ಪರವಾಗಿದ್ದವು ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಾನು ಕೇವಲ ಹಿಂದುಳಿದವರ ಪರ ಎಂದು ಹೊಟ್ಟೆಕಿಚ್ಚಿನಿಂದ ಕೆಲವರು ಆರೋಪಿಸುತ್ತಾರೆ ಅಷ್ಟೆ. ನಾನು ಮುಖ್ಯಮಂತ್ರಿಯಾಗಿ ಜಾರಿಗೊಳಿಸಿದ ಅನ್ನಭಾಗ್ಯ, ಕ್ಷೀರಭಾಗ್ಯ, ಸಾಲಮನ್ನಾ, ವಿದ್ಯಾಸಿರಿ ಮುಂತಾದ ಯೋಜನೆಗಳು ಕೇವಲ ಹಿಂದುಳಿದವರಿಗೆ ಮಾತ್ರ ಅನುಕೂಲವಾಗಿದೆಯಾ? ರಾಜ್ಯದ ಎಲ್ಲ ಜನವರ್ಗಗಳಿಗೆ ಅದರ ಸೌಲಭ್ಯ ಸಿಗಲಿಲ್ಲವೇ ಎಂದು ಅವರು ಪ್ರಶ್ನಿಸಿದರು.  

ನಾಡಪ್ರಭು ಕೆಂಪೇಗೌಡರ ಅಭಿವೃದ್ಧಿ ಪ್ರಾಧಿಕಾರ ರಚನೆ, ಕೆಂಪೇಗೌಡರ ಜಯಂತಿ, ಭಗೀರಥ ಜಯಂತಿ, ರಾಣಿ ಚೆನ್ನಮ್ಮ ಸೇರಿದಂತೆ ಹಲವು ಸಂತರ ಜಯಂತಿ ಆಚರಿಸಿದೆ. ಸರಕಾರಿ ಕಚೇರಿಗಳಲ್ಲಿ ಬಸವಣ್ಣನವರ ಭಾವಚಿತ್ರ ಕಡ್ಡಾಯ ಮಾಡಿದೆ. ಇವೆಲ್ಲಾ ಒಂದು ಜಾತಿಗೆ ಸೀಮಿತವಾದ ಕಾರ್ಯಕ್ರಮಗಳಲ್ಲ. ಅರಸು ನಂತರ 5 ವರ್ಷ ಅಧಿಕಾರ ಪೂರ್ಣಗೊಳಿಸಿದ ಹೆಗ್ಗಳಿಕೆ ನನ್ನದು ಎಂದು ಅವರು ಹೇಳಿದರು. ಕನಕ ಸಮುದಾಯವನ್ನು ಚೆನ್ನಾಗಿ ನಿರ್ಮಿಸಲಾಗಿದೆ. ಬಡವರ ಕಾರ್ಯಕ್ರಮಗಳಿಗೆ ಸಮುದಾಯ ಭವನ ರಿಯಾಯತಿ ದರದಲ್ಲಿ ದೊರೆಯಬೇಕು. ಹಾಗೆಯೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಬೇಕು ಎಂದು ಅವರು ಸಲಹೆ ನೀಡಿದರು.

ಇದಕ್ಕೂ ಮುನ್ನ ಕುರುಬರ ಹಾಸ್ಟೆಲ್ ಮುಂಭಾಗದ ವೃತ್ತದಲ್ಲಿ ಕನಕದಾಸ ವೃತ್ತ ನಾಮಫಲಕ ಅನಾವರಣಗೊಳಿಸಿದರು. ಕಾರ್ಯಕ್ರಮದಲ್ಲಿ ಸಮುದಾಯದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು. 

ಕಾಗಿನೆಲೆ ಕನಕಗುರುಪೀಠದ ಶಿವಾನಂದಪುರಿ ಸ್ವಾಮೀಜಿ ಸಾನಿಧ್ಯವಹಿಸಿದ್ದರು. ಸಚಿವರಾದ ಸಿ.ಎಸ್.ಪುಟ್ಟರಾಜು, ಪುಟ್ಟರಂಗಶೆಟ್ಟಿ, ಆರ್.ಶಂಕರ್, ವಿಧಾನಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಕೆ.ಟಿ.ಶ್ರೀಕಂಠೇಗೌಡ, ಮಾಜಿ ಶಾಸಕರಾದ ಎನ್.ಚಲುವರಾಯಸ್ವಾಮಿ, ಪಿ.ಎಂ.ನರೇಂದ್ರಸ್ವಾಮಿ, ಕೆ.ಬಿ.ಚಂದ್ರಶೇಖರ್, ರಮೇಶ್‍ ಬಾಬು ಬಂಡಿಸಿದ್ದೇಗೌಡ, ಎಂ.ಎಸ್.ಆತ್ಮಾನಂದ, ಮಲ್ಲಾಜಮ್ಮ, ಎಂ.ಕೆ.ಸೋಮಶೇಖರ್, ಬೆಂಗಳೂರಿನ ಮಾಜಿ ಮಹಾಪೌರರಾದ ಎಂ.ರಾಮಚಂದ್ರಪ್ಪ, ವೆಂಕಟೇಶ್‍ ಮೂರ್ತಿ, ಜಿಪಂ ಸದಸ್ಯ ಮರಿಹೆಗ್ಗಡೆ, ಮಾಜಿ ಸದಸ್ಯ ಹುಚ್ಚೇಗೌಡ, ಕುರುಬರ ಸಂಘದ ಜಿಲ್ಲಾಧ್ಯಕ್ಷ ಕೆ.ಎಂ.ನಾಗರಾಜು, ಇತರ ಗಣ್ಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News