ಮಾಧ್ಯಮಗಳು ರಾಜಕೀಯ ಪಕ್ಷಗಳ ಕೈಯಲ್ಲಿ ಸಿಲುಕಿ ಮೌಲ್ಯ ಕಳೆದುಕೊಳ್ಳುತ್ತಿವೆ: ಸಂಸದ ಆರ್.ಧ್ರುವನಾರಾಯಣ

Update: 2018-09-23 16:07 GMT

ಮೈಸೂರು,ಸೆ.23: ಪ್ರಸ್ತುತ ದಿನಗಳಲ್ಲಿ ಮಾಧ್ಯಮಗಳು ಉದ್ಯಮಿಗಳು, ಬಂಡವಾಳ ಶಾಹಿ, ರಾಜಕೀಯ ಪಕ್ಷಗಳ ಕೈಯಲ್ಲಿ ಸಿಲುಕಿಕೊಂಡು ತನ್ನ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ ಎಂದು ಚಾಮರಾಜನಗರ ಲೋಕಸಭಾ ಸದಸ್ಯ ಆರ್.ಧ್ರುವನಾರಾಯಣ ಬೇಸರ ವ್ಯಕ್ತಪಡಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ರವಿವಾರ ಏರ್ಪಡಿಸಿದ್ದ 'ಭುವನ ಸಂಗಾತಿ' ಪಾಕ್ಷಿಕ ಪತ್ರಿಕೆಯ 19ನೇ ವರ್ಷದ ವಾರ್ಷಿಕ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ನೊಂದವರ, ಬಡವರ, ಅಶಕ್ತರ ಪರವಾಗಿ ಇರಬೇಕಾದ ಮಾಧ್ಯಮಗಳು ಉಳ್ಳವರ, ಬಂಡವಾಳಶಾಹಿಗಳ, ಒಂದು ಪಕ್ಷಗಳ ಪರವಾಗಿವೆ. ಒಂದೊಂದು ಮಾಧ್ಯಮಗಳು ಇಂತಹವರದ್ದೇ ಎಂದು ಹೇಳುವ ಮಟ್ಟಕ್ಕೆ ಸುದ್ದಿಗಳನ್ನು ಬಿತ್ತರಿಸುತ್ತಿವೆ. ಇಂತಹ ಮಾಧ್ಯಮಗಳು ಹೆಚ್ಚು ದಿನ ಉಳಿಯಲಾರವು ಎಂದು ಹೇಳಿದರು.

ಮಾಧ್ಯಮಗಳು ನೈಜ ಸ್ಥಿತಿ, ವಸ್ತುಸ್ಥಿಗಳಿಗೆ ಹತ್ತಿರವಾಗಿ ಕೆಲಸ ಮಾಡಬೇಕು. ಆಗ ಜನರು ನಂಬುತ್ತಾರೆ. ಒಂದು ಮಾಧ್ಯಮದ ಮೇಲೆ ನಂಬಿಕೆ ಬರಲಿದೆ. ವರದಿಗಾರರು ತಮ್ಮ ನಿಷ್ಟೆಯನ್ನು ಬಿಟ್ಟು ಕೆಲಸ ಮಾಡಬಾರದು, ನ್ಯಾಯ ಧರ್ಮದ ಆಧಾರದ ಮೇಲೆ ವರದಿ ಮಾಡುವವರು ಎಲ್ಲರ ಮನಸ್ಸಿನಲ್ಲೂ ಉಳಿಯುತ್ತಾರೆ ಎಂದರು.

ಯೋಜನಾ ಆಯೋಗದ ಜಂಟಿ ನಿರ್ದೇಶಕ ಚಂದ್ರಶೇಖರಯ್ಯ ಮಾತನಾ, ದಲಿತರು, ಶೋಷಿತರು ಧಮನಿತರ ಪರ ಪತ್ರಿಕಗಳು ನಿಲ್ಲಬೇಕು. ಆದರೆ ಅಂತಹ ಕೆಲಸಗಳನ್ನು ಪತ್ರಿಕೆಗಳು ಮಾಡುತ್ತಿಲ್ಲ. ಇಂದು ಬಡ್ತಿ ಮೀಸಲಾಗಿ ಬಗ್ಗೆ ಹೋರಾಡುತ್ತಿದ್ದೇವೆ. ಅದರ ಸಂಪೂರ್ಣ ಚಿತ್ರಣವನ್ನು ಮಾಧ್ಯಮಗಳು ಸಮಾಜಕ್ಕೆ ತೋರಿಸುವ ಕೆಲಸ ಮಾಡಬೇಕು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ವಹಿಸಿದ್ದರು. ಶಾಸಕ ನಿರಂಜನ್ ಕುಮಾರ್, ಮೈಸೂರು ವಿವಿ ಪ್ರಾಧ್ಯಾಪಕ ಡಿ.ಆನಂದ್, ಭುನಸಂಗಾಗಿ ಪತ್ರಿಕೆ ಸಂಪಾದಕ ಸೋಮಯ್ಯ ಮಲೆಯೂರು ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಗಾಯಕ ಲಕ್ಷ್ಮೀರಾಮ್ ಮತ್ತು ತಂಡದವರು ಜಾನಪದ, ಕ್ರಾಂತಿಗೀತೆಗಳನ್ನು ಹಾಡಿದರು. ಕಾಂಗ್ರೆಸ್ ಮುಖಂಡ ಮಾದಯ್ಯ, ದಸಂಸ ಮುಖಂಡರಾದ ಚುಂಚನಹಳ್ಳಿ ಮಲ್ಲೇಶ್, ದೇವರಸನಹಳ್ಳಿ ಪುಟ್ಟಸ್ವಾಮಿ, ಸಾಹಿತಿ ಮಲ್ಕುಂಡಿ ಮಹದೇವಸ್ವಾಮಿ, ಗುತ್ತಿಗೆದಾರ ಶ್ರೀನಿವಾಸ್, ಮಾನವಹಕ್ಕುಗಳ ಹೋರಾಟಗಾರ ಪ್ರಸನ್ನ, ನಗರ್ಲೆ ವಿಜಯ್‍ಕುಮಾರ್, ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜರ್ನಲಿಸಮ್ ಇಂದು ಜನಿವಾರಿಸಂಗಳಾಗಿವೆ. ಬ್ರಾಹ್ಮಣ ಶಾಹಿಗಳ ಕಪಿಮುಷ್ಟಿಯಲ್ಲಿ ಸಿಲುಕಿ ಪ್ರಜಾಪ್ರಭುತ್ವವನ್ನು ಅತ್ಯಂತ ಅಪಾಯಕ್ಕೆ ತಂದೊಡ್ಡುವ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಮನುಷ್ಯತ್ವ, ಮಾನವ ಪ್ರಜ್ಞೆ, ಮಾನವೀಯ ಮೌಲ್ಯದ ಸರಪಳಿಗಳಾಗಬೇಕಿತ್ತು. ಆದರೆ ಮಾಧ್ಯಮಗಳು ಮಾರಾಟ ಜಾಲಗಳಾಗುತ್ತಿವೆ. ನೊಂದವರ, ದಮನಿತರ ಪರವಾದ ಪತ್ರಿಕೆಗಳು ಕಡಿಮೆಯಾಗುತ್ತಿವೆ.
-ಜ್ಞಾನಪ್ರಕಾಶ್ ಸ್ವಾಮೀಜಿ, ಉರಿಲಿಂಗಿ ಪೆದ್ದಿಮಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News