ಅನಾವಶ್ಯಕ ತೊಂದರೆಗಳಿಂದಾಗಿ ಪೌರಕಾರ್ಮಿಕರಿಗೆ ಸೌಲಭ್ಯ ಸಿಗಲು ವಿಳಂಬ: ಶಾಮನೂರು ಶಿವಶಂಕರಪ್ಪ

Update: 2018-09-23 16:16 GMT

ದಾವಣಗೆರೆ,ಸೆ.23: ಕೆಲವರ ಅನಾವಶ್ಯಕ ತೊಂದರೆಗಳಿಂದಾಗಿ ಪೌರಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯಗಳು ವಿಳಂಬವಾಗುತ್ತಿವೆ ಎಂದು ಎಂದು ಶಾಸಕ ಡಾ.ಶಾಮನೂರು ಶಿವಶಂಕರಪ್ಪ ಅಸಮಾಧಾನ ವ್ಯಕ್ತಪಡಿಸಿದರು. 

ಇಲ್ಲಿನ ಅಭಿನವ ರೇಣುಕಾ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ  ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. 
ಪೌರಕಾರ್ಮಿಕರ ಸಂಘದ ಎಲ್.ಎಂ.ಹನುಮಂತಪ್ಪ ಅವರಿಗೆ ಪ್ರತಿಭಟನೆ ನಡೆಸುವುದೆ ಒಂದು ಕೆಲಸ. ಒಂದು ಸಲ ನಿವೇಶನ, ಇನ್ನೊಂದು ಸಲ ಮನೆ ಕಟ್ಟಿಸಿಕೊಡಿ ಎಂಬುದಾಗಿ ಅಡ್ಡಗಾಲು ಹಾಕುತ್ತಿದ್ದಾರೆ. ಇದರಿಂದಾಗಿ ಸೂರು ಕಲ್ಪಿಸುವುದು ವಿಳಂಬವಾಗಿದೆ. ಆದ್ದರಿಂದ ಇಂತಹ ನಾಯಕರ ಹೇಳಿಕೆಗಳಿಗೆ ಪೌರ ಕಾರ್ಮಿಕರು ಕಿವಿಗೊಡಬಾರದು ಎಂದು ಸಲಹೆ ನೀಡಿದರು. ಊರಿನ ಸ್ವಚ್ಛತೆ ಕಾಪಾಡಲು ಆದ್ಯತೆ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಇನ್ನಷ್ಟು ಪೌರ ಕಾರ್ಮಿಕರನ್ನು ಸರ್ಕಾರ ನೇಮಕ ಮಾಡುವ ವಿಶ್ವಾಸವಿದೆ ಎಂದರು.

ಭಾರತದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಕರ್ನಾಟಕದಲ್ಲಿ ಮಲ ಹೊರುವ ಪದ್ಧತಿ ನಿಷೇಧಿಸಿದರು. ಹೀಗೆ ಬಸಲಿಂಗಪ್ಪ ಮಾಡಿದ್ದ ಮಲ ಹೊರುವ ಪದ್ಧತಿ ನಿಷೇಧವು ಇಡೀ ಭಾರತದಲ್ಲಿ ಜಾರಿಗೆ ಬಂತು ಎಂದು ಸ್ಮರಿಸಿದರು.

ಈ ಸಂದರ್ಭ ಉತ್ತಮ ಸೇವೆ ಸಲ್ಲಿಸಿದ ಪೌರ ಕಾರ್ಮಿಕರಾದ ನಾರಪ್ಪ, ಲಕ್ಷ್ಮಣ, ಶಿವಣ್ಣ, ನಾಗರಾಜ್, ಫಕೀರಪ್ಪ, ಲಕ್ಷ್ಮೀದೇವಿ, ಓಬವ್ವ, ಅಣಜಿ ಹನುಮಕ್ಕ, ನಿಂಗಪ್ಪ, ರತ್ನಮ್ಮ, ಕೃಷ್ಣಮೂರ್ತಿ, ತಿಪ್ಪಮ್ಮರನ್ನು ಸನ್ಮಾನಿಸಲಾಯಿತು.

ಅಲ್ಲದೆ, ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಿರುವ ಪೌರ ಕಾರ್ಮಿಕರ ಮಕ್ಕಳುಗಳಾದ ಗೋಪಿ ಹೆಚ್ (ಎಂ.ಎ. ಅರ್ಥಶಾಸ್ತ್ರ- ಪ್ರಥಮ ರ್ಯಾಂಕ್), ಶೃತಿ (ಎಂ.ಎ-ದ್ವಿತೀಯ ರ್ಯಾಂಕ್), ಸಂಪಿಗೆ.ಎ (ಎಂ.ಎ.ಸಮಾಜಶಾಸ್ತ್ರ- ದ್ವಿತೀಯ ರ್ಯಾಂಕ್) ಮಹಾಂತೇಶ್ (ಬಿಇ ಸಿವಿಲ್) ಹಾಗೂ ಭಾರ ಎತ್ತುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಕೃಷ್ಣ ಹಾಗೂ ಕರಾಟೆಯಲ್ಲಿ ವಿಜೇತನಾದ ಯಷಾಯ್‍ರನ್ನು ಸನ್ಮಾನಿಸಲಾಯಿತು.

ಅಧ್ಯಕ್ಷತೆಯನ್ನು ಮೇಯರ್ ಶೋಭಾ ಪಲ್ಲಾಗಟ್ಟೆ ವಹಿಸಿದ್ದರು. ವೇದಿಕೆಯಲ್ಲಿ ಪಾಲಿಕೆ ಆಯುಕ್ತ ಮಂಜುನಾಥ್ ಬಳ್ಳಾರಿ, ಸದಸ್ಯರಾದ ದಿನೇಶ್ ಕೆ. ಶೆಟ್ಟಿ, ಎಂ.ಹಾಲೇಶ್, ಹೆಚ್.ತಿಪ್ಪಣ್ಣ, ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಎಂ.ಹನುಮಂತಪ್ಪ, ಕಾರ್ಯದರ್ಶಿ ಎನ್.ನೀಲಗಿರಿಯಪ್ಪ, ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಡಿ. ಗೋಣೆಪ್ಪ, ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಕೆ.ಎಸ್. ಗೋವಿಂದರಾಜ್, ಅಧಿಕಾರಿಗಳಾದ ರವೀಂದ್ರ ಮಲ್ಲಾಪುರ, ಸತೀಶ್, ಲೆಕ್ಕಾಧಿಕಾರಿ ಜಯರಾಂ, ಬೀರಾದರ್, ಚಂದ್ರಶೇಖರ್, ಚಂದ್ರಶೇಖರ್ ಸುಂಖದ್ ಇದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News