​ಮಾಲ್ಡೀವ್ಸ್ ಚುನಾವಣೆ: ಹಾಲಿ ಅಧ್ಯಕ್ಷರಿಗೆ ಮುಖಭಂಗ

Update: 2018-09-24 04:18 GMT
ಇಬ್ರಾಹೀಂ ಮುಹಮ್ಮದ್

ಕೊಲಂಬೊ, ಸೆ.24: ಮಾಲ್ಡೀವ್ಸ್‌ನಲ್ಲಿ ನಡೆದ ಅಧ್ಯಕ್ಷೀಯ ಚುನಾವಣೆಯಲ್ಲಿ ವಿರೋಧ ಪಕ್ಷದ ಮುಖಂಡ ಇಬ್ರಾಹೀಂ ಮುಹಮ್ಮದ್ ಸೊಲಿಹ್ ಭರ್ಜರಿ ಜಯ ಸಾಧಿಸಿದ್ದಾರೆ. ಚೀನಾ ಪರ ನಿಲುವಿಗೆ ಹೆಸರಾಗಿದ್ದ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅಚ್ಚರಿಯ ಸೋಲು ಅನುಭವಿಸಿದ್ದಾರೆ.

ಸೋಮವಾರ ಮುಂಜಾನೆ ಚುನಾವಣಾ ಆಯೋಗ ಫಲಿತಾಂಶ ಪ್ರಕಟಿಸಿದ್ದು, ಸೊಲಿಹ್ ಶೇಕಡ 58.3 ಮತಗಳನ್ನು ಪಡೆದಿದ್ದಾರೆ. ದೇಶಾದ್ಯಂತ ವಿಜಯೋತ್ಸವ ಸಂಭ್ರಮ ಮುಗಿಲು ಮುಟ್ಟಿದ್ದು, ಮಾಲ್ಡೀವನ್ ಡೆಮಾಕ್ರಟಿಕ್ ಪಾರ್ಟಿ(ಎಂಡಿಪಿ) ಕಾರ್ಯಕರ್ತರು ಹಳದಿ ಧ್ವಜಗಳೊಂದಿಗೆ ಹಾಡಿ ಕುಣಿಯುವ, ಸಂಭ್ರಮಿಸುವ ದೃಶ್ಯ ಎಲ್ಲೆಡೆ ಕಂಡುಬರುತ್ತಿದೆ. ಫಲಿತಾಂಶದ ಬಗ್ಗೆ ಯಮೀನ್ ಯಾವುದೇ ಪ್ರತಿಕ್ರಿಯೆ ವ್ಯಕ್ತಪಡಿಸಿಲ್ಲ.

ಸಂಯುಕ್ತ ವಿರೋಧ ಪಕ್ಷಗಳ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದ ಸೊಲಿಹ್ ಪರ ಹೆಚ್ಚಿನ ಬೆಂಬಲ ಕಂಡುಬರುತ್ತಿರಲಿಲ್ಲ. ಹಾಲಿ ಅಧ್ಯಕ್ಷರ ಪದಚ್ಯುತಿಗೆ ವಿರೋಧ ಪಕ್ಷಗಳು ಸಂಘಟಿತ ಹೋರಾಟ ನಡಸಿದ್ದರೂ, ಹಾಲಿ ಆಡಳಿತ ಹೇರಿದ್ದ ವರದಿಗಾರಿಕೆ ನಿರ್ಬಂಧ ಕಾರಣದಿಂದ ಮಾಧ್ಯಮಗಳಲ್ಲೂ ಈ ಅಲೆ ಕಂಡುಬಂದಿರಲಿಲ್ಲ. ರವಿವಾರ ನಡೆದ ಚುನಾವಣೆಯಲ್ಲಿ ಇತರ ಯಾವ ಅಭ್ಯರ್ಥಿಗಳೂ ಸ್ಪರ್ಧಿಸಿರಲಿಲ್ಲ. ಏಕೆಂದರೆ ಎಲ್ಲ ಭಿನ್ನಮತೀಯರನ್ನು ಜೈಲಿಗೆ ಅಟ್ಟಲಾಗಿತ್ತು ಅಥವಾ ಗಡೀಪಾರು ಮಾಡಲಾಗಿತ್ತು.

ರವಿವಾರ ರಾತ್ರಿ ಸೊಲಿಹ್ ಅಬಾಧಿತ ಮುನ್ನಡೆ ಸಾಧಿಸುತ್ತಿದ್ದಂತೆ ಯಮೀನ್ ವಿಜೇತ ಅಭ್ಯರ್ಥಿಯನ್ನು ಭೇಟಿ ಮಾಡಿ ಸೋಲೊಪ್ಪಿಕೊಂಡರು. "ಜನರ ಇಚ್ಛೆಯನ್ನು ಗೌರವಿಸುವಂತೆ ಹಾಗೂ ಶಾಂತಿಯುತ ಹಾಗೂ ಸುಲಲಿತವಾಗಿ ಅಧಿಕಾರ ವರ್ಗಾವಣೆ ಮಾಡುವಂತೆ ಕೋರಿದ್ದೇನೆ" ಎಂದು ಸ್ಪಷ್ಟಪಡಿಸಿದರು. ಎಲ್ಲ ರಾಜಕೀಯ ಕೈದಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆಯೂ ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News